- ರೈಲ್ವೆ ಪ್ರಯಾಣಿಕರಿಗಾಗಿ ಹೊಸ ವೆಬ್ಸೈಟ್ ಜಾರಿ ಮಾಡಿದ ಐಆರ್ಸಿಟಿಸಿ
- ಸುಲಭವಾಗಿ ಟಿಕೆಟ್ ಬುಕ್ಕಿಂಗ್, ರಿಸರ್ವೇಶನ್ ಸೇರಿದಂತೆ ಹಲವು ವ್ಯವಸ್ಥೆ ಅಭಿವೃದ್ಧಿ
- ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಮಾಹಿತಿ ಬಹಿರಂಗ
IRCTC New Website: ತುರ್ತಾಗಿ ರೈಲಿನ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಕಾಡುತ್ತಿದ್ದ ಸಮಸ್ಯೆಗಳು ಹಾಗೂ ತತ್ಕಾಲ್ನಲ್ಲಾಗುತ್ತಿದ್ದ ಸರ್ವರ್ ಬ್ಯುಸಿ, ಕ್ಯಾಪ್ಚಾ ತೊಡಕಿಗೆ ಮುಕ್ತಿ ನೀಡಲು ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ನಿರ್ಧರಿಸಿದೆ. ಇದರ ಭಾಗವಾಗಿ ಹೊಸ ವೆಬ್ಸೈಟ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇಂದಿನಿಂದಲೇ ಪ್ರಯಾಣಿಕರಿಗೆ ಬಳಕೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ರೈಲ್ವೆ ಇಲಾಖೆಯ ವೆಬ್ಸೈಟ್ ಅಭಿವೃದ್ಧಿ ಬಗ್ಗೆ ಹಾಗೂ ಬುಕ್ಕಿಂಗ್ ಸಾಮರ್ಥ್ಯದ ಬಗ್ಗೆ ವಿವರಿಸಿದ್ದಾರೆ.
ಬುಕ್ಕಿಂಗ್ ಸಾಮರ್ಥ್ಯ ಹೆಚ್ಚಳ
ಹಿಂದಿನ ವೆಬ್ಸೈಟ್ನಲ್ಲಿ ಪ್ರತಿ ನಿಮಿಷಕ್ಕೆ 32 ಸಾವಿರ ಟಿಕೆಟ್ಗಳನ್ನು ಏಕಕಾಲದಲ್ಲಿ ಬುಕ್ ಮಾಡುವ ಸಾಮರ್ಥ್ಯವಿತ್ತು. ಇದರಿಂದ ಹಲವರು ಸರ್ವರ್ ಬ್ಯುಸಿ, ಹ್ಯಾಂಗ್ ಆಗುವ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಇನ್ಮುಂದೆ ಅದರ ಕಿರಿಕಿರಿ ಇರೋದಿಲ್ಲ. ಈ ಹೊಸ ವೆಬ್ಸೈಟ್ 1.5 ಲಕ್ಷ ಟಿಕೆಟ್ ಬುಕ್ ಮಾಡಿದರೂ ಸಹ ವೆಬ್ಸೈಟ್ನಲ್ಲಿ ಲೋಡ್ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.
ಇದರೊಂದಿಗೆ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಬ್ಯಾಕೆಂಡ್ ಅನ್ನು ನವೀಕರಿಸಲಾಗಿದ್ದು, ಈ ಹಿಂದೆ ನಿಮಿಷಕ್ಕೆ 4 ಲಕ್ಷ ಜನರು ರಿಸರ್ವೇಶನ್ ಸೀಟ್ ಬಗ್ಗೆ ವಿಚಾರಣೆ ಅಥವಾ ಸರ್ಚ್ ಮಾಡುವ ಅವಕಾಶವಿತ್ತು. ಇನ್ಮುಂದೆ ಇದರ ಸಾಮರ್ಥ್ಯ 40 ಲಕ್ಷಕ್ಕೆ ಏರಿಕೆಯಾಗಲಿದೆ. ಸೀಟಿನ ವಿವರ, ರೈಲು ಲಭ್ಯತೆ, ದರ, ದಿನಾಂಕ ಬುಕ್ಕಿಂಗ್ ಅನ್ನು ಸುಲಭಗೊಳಿಸಲಿದೆ.
ಫೇರ್ ಕ್ಯಾಲೆಂಡರ್ ಎಂದರೇನು?
ನೀವು ದಿನಾಂಕ ಹಾಗೂ ದರದ ಆಧಾರದ ಮೇಲೆ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ರೈಲ್ವೆ ಇಲಾಖೆ ಕೊಟ್ಟಿದೆ. ಈ ಹೊಸ ಅಭಿವೃದ್ಧಿಗೆ ಫೇರ್ ಕ್ಯಾಲೆಂಡರ್ ಎಂದು ಹೆಸರಿಟ್ಟಿದ್ದು, ಇದರ ಮೂಲಕ ನಿಮಗೆ ಯಾವ ದಿನದಂದು ಟ್ರಾವೆಲ್ ಅನುಕೂಲವೋ, ಯಾವ ದಿನದಂದು ದರ ಕಡಿಮೆ ಇದೆಯೋ ಎಂಬುದನ್ನು ಪರಿಶೀಲಿಸಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಬಹುಭಾಷೆಯನ್ನು ಒಳಗೊಂಡ ವೆಬ್ಸೈಟ್
ಹೊಸದಾಗಿ ಅಭಿವೃದ್ಧಿಪಡಿಸಿರುವ ವೆಬ್ಸೈಟ್ ಹಲವು ಭಾಷೆಯನ್ನು ಒಳಗೊಂಡಿದೆ. ದೇಶದ ಹಲವು ರಾಜ್ಯಗಳ ಜನರು ತಮ್ಮ ಭಾಷೆಯಲ್ಲಿ ಬುಕ್ಕಿಂಗ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಇದರಿಂದಾಗಿ ಕಾಡುವ ಗೊಂದಲಗಳ ನಿವಾರಣೆಯಾಗಲಿದೆ. ಹೊಸ ವೆಬ್ಸೈಟ್ನಿಂದಾಗಿ ಅಂಗವಿಕಲರು, ರೋಗಿಗಳು, ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಸುಲಭವಾಗಿ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ತಮ್ಮ ರಿಯಾಯಿತಿ ಟಿಕೆಟ್ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಎಲ್ಲ ವರ್ಗದ ಸೀಟ್ ಪ್ರದರ್ಶನ
ಇದುವರೆಗೂ ಸೀಟನ್ನು ನಾವು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಇರಲಿಲ್ಲ. ಅಲ್ಲದೆ ಸ್ಲೀಪರ್, ಎಸಿ 3-ಟೈರ್ ಮತ್ತು ಎಸಿ 2-ಟೈರ್ ಸೇರಿದಂತೆ ವಿವಿಧ ಭಾಗದ ಸೀಟು ಪರಿಶೀಲನೆಗೆ ಪದೇ ಪದೆ ಆಯ್ಕೆ ಬದಲಾಯಿಸಬೇಕಾಗಿತ್ತು. ಪ್ರತ್ಯೇಕ ಟ್ಯಾಬ್ಗಳನ್ನು ಓಪನ್ ಮಾಡಬೇಕಿತ್ತು. ಆದರೆ ಹೊಸ ವೆಬ್ಸೈಟ್ನಲ್ಲಿ ಆ ಸಮಸ್ಯೆ ಇರೋದಿಲ್ಲ. ಒಂದೇ ವೆಬ್ಸೈಟ್ನಲ್ಲಿ ಎಲ್ಲದರ ಮಾಹಿತಿ ಸಿಗಲಿದೆ.
ವೆಬ್ಸೈಟ್ ಜಾರಿ ಎಂದು?
ಲೈವ್ ಟ್ರೈನ್ ಸ್ಟೇಟಸ್, ಟಿಕೆಟ್ ಬುಕ್ಕಿಂಗ್, ಸೀಟು ಪರಿಶೀಲನೆಯ ಸೇವೆಯನ್ನು ಒಳಗೊಂಡ ಸೂಪರ್ ಆಪ್ ಹೊಸ ವೆಬ್ಸೈಟ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ತತ್ಕಾಲ್ ಬಳಕೆ ಇನ್ನು ಸುಲಭ
ತತ್ಕಾಲ್ನಲ್ಲಿ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಕಾಡುತ್ತಿದ್ದ ಕ್ಯಾಪ್ಚಾ, ಪಾಪ್ಅಪ್ ಹಾಗೂ ಆಗಾಗ್ಗೆ ಕಾಡುತ್ತಿದ್ದ ಗ್ರಾಫಿಕ್ ಸಮಸ್ಯೆಗಳನ್ನು ಇಲ್ಲಿ ತೆಗೆದುಹಾಕಲಾಗುತ್ತದೆ, ಇದರಿಂದಾಗಿ ಬುಕಿಂಗ್ ಪ್ರಕ್ರಿಯೆಯಲ್ಲಿ ಸಮಯ ಉಳಿತಾಯವಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ಇನ್ಮುಂದೆ ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ, (ಏಜೆನ್ಸೀಸ್).