ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿ ಮೊದಲ ಆದ್ಯತೆಯಾಗಿದ್ದು, ಪ್ರಧಾನಿ ಮೋದಿ ಈ ಕುರಿತು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಸೋಮವಾರ(ಮಾ. 090 ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದಾರೆ.
ಎರಡನೇ ಹಂತದ ಬಜೆಟ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು, ಇತ್ತೀಚಿಗೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದೆ. ಇದರಿಂದ ಇಂಧನ ಪೂರೈಕೆ, ಹಡಗು ಮಾರ್ಗ ಹಾಗೂ ಜಾಗತಿಕ ವ್ಯಾಪಾರ ಮೇಲೆ ಗಂಭೀರ ಪರಿಣಾಮ ಬೀರಿದೆ. ನಮ್ಮ ಸರ್ಕಾರ ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.
ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕಾ ಯುದ್ದ, ಪ್ರತಿಯಾಗಿ ಇರಾನ್ ಗಲ್ಫ್ ದೇಶಗಳ ಮೇಲಿನ ದಾಳಿ ತೀವ್ರ ಕಳವಳಕಾರಿಯಾದದ್ದು. ಉದ್ವಿಗ್ನತೆಯ್ನು ಕಡಿಮೆ ಮಾಡಲು ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸಬೇಕು. ಜಾಗತಿಕ ಇಂಧನ ಮಾರುಕಟ್ಟೆಗಳು ಹಾಗೂ ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಪಶ್ಚಿಮ ಏಷ್ಯಾದಲ್ಲಿನ ಸ್ಥಿರತೆ ನಿರ್ಣಾಯಕವಾಗಿದೆ. ಈ ಹಿನ್ನೆಲೆ ಪಶ್ಚಿಮ ಏಷ್ಯಾ ಸ್ಥಿರ ಮತ್ತು ಶಾಂತಿಯುತವಾಗಿರಬೇಕು ಎಂದಿದ್ದಾರೆ.
ಇನ್ನೂ ಸಂಘರ್ಷದಿಂದ ವಿದೇಶಗಳಲ್ಲಿ ಸಿಲುಕಿದ್ದ 67 ಸಾವಿರ ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಆ ಪ್ರದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮದ ಮೇಲೆ ಸರ್ಕಾರ ಗಮನವನ್ನು ಹರಿಸುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).