ದಲಿತ ಯುವತಿ ಕೊಲೆಗೆ ನ್ಯಾಯ ಕೇಳಲು ಬಂದ ಪ್ರತಿಭಟನಾಕಾರರ ಮೇಲೆ SSP ಅವಿನಾಶ್ ಪಾಂಡೆ ಹಲ್ಲೆ
- ಮೀರತ್‌ನಲ್ಲಿ ಖಾಕಿ ದರ್ಪ!
- ದಲಿತ ಯುವತಿ ಕೊಲೆಗೆ ನ್ಯಾಯ ಕೇಳಲು ಬಂದ ಪ್ರತಿಭಟನಾಕಾರರ ಮೇಲೆ SSP ಅವಿನಾಶ್ ಪಾಂಡೆ ಹಲ್ಲೆ
- ರಸ್ತೆ ನಿಮ್ಮಪ್ಪನ ಆಸ್ತಿಯಲ್ಲ ಎಂದು ಧಮಕಿ , ಪೊಲೀಸ್ ವ್ಯಾನ್ ಹತ್ತಿ ಪ್ರತಿಭಟನಾಕಾರನಿಗೆ ಕಪಾಳಮೋಕ್ಷ
ಮೀರಟ್: ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಲೆಂದು ಪೊಲೀಸ್ ಠಾಣೆಗೆ ಜಮಾಯಿಸಿದ್ದ ಪ್ರತಿಭಟನಾಕಾರರ ಮೇಲೆ ಮೀರಟ್ನ ಎಸ್ಎಸ್ಪಿ ಅವಿನಾಶ್ ಪಾಂಡೆ (Avinash Pandey Viral Video) ಹಲ್ಲೆ ನಡೆಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಕೆಲ ದಿನಗಳ ಹಿಂದೆ ದಲಿತ ಸುಮುದಾಯದ ಲಲಿತಾ ಗೌತಮ್ ಎಂಬ ಯುವತಿಯ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವುದು ಪ್ರತಿಭಟನಾಕಾರರ ಆರೋಪವಾಗಿತ್ತು. ಹೀಗಾಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆಗೆ ಮುಂದಾಗಿದ್ದ ಜನರ ಮೇಲೆ ಐಪಿಎಸ್ ಅಧಿಕಾರಿ ಅವಿನಾಶ್ ಪಾಂಡೆ ಕೈಯಿಂದ ಹಾಗೂ ಲಾಠಿಯಿಂದ ಹೊಡೆದಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ವ್ಯಾನ್ ಏರಿ ಆರೋಪಿಗೆ ಥಳಿತ!
ಪೊಲೀಸ್ ಠಾಣೆ ಎದುರಿಗೆ ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಎಸ್ಎಸ್ಪಿ ಅನಿವಾಶ್ ಪಾಂಡೆ, ತಾವು ಸ್ಥಳಕ್ಕೆ ಬರುವವರೆಗೆ ಎಲ್ಲಾ ಸರಿಯಾಗಿರಬೇಕೆಂದು ಕಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದೇಶದಂತೆಯೇ ಪ್ರತಿಭಟನೆ ನಡೆಸುತ್ತಿದ್ದ ಪ್ರಮುಖ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ವ್ಯಾನ್ ಮೇಲೆ ಕುರಿಸಿ, ಜೈಲಿಗೆ ಕಳುಹಿಸಲು ಮುಂದಾಗಿದ್ದಾರೆ.
ಆ ಸಮಯಕ್ಕೆ ಸ್ಥಳಕ್ಕೆ ಬಂದ ಅವಿನಾಶ್ ಪಾಂಡೆ ವ್ಯಾನ್ ಬಾಗಿಲನ್ನು ತೆಗೆಯುವಂತೆ ಹೇಳಿ ಬಂಧಿತ ಆರೋಪಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದೆ. ನಂತರ ವ್ಯಾನ್ನಿಂದ ಇಳಿದ ಅವಿನಾಶ್ ಪಾಂಡೆ, ರಸ್ತೆ ಏನು ನಿಮ್ಮ ಅಪ್ಪನ ಆಸ್ತಿಯಲ್ಲ, ಈಗಲೇ ಈ ಹೋರಾಟ-ಹಾರಾಟ ಎಲ್ಲ ಬಿಟ್ಟು ಹೊರಡಿ, ಇಲ್ಲದಿದ್ದರೆ ಪರಿಸ್ಥಿತಿ ಬೇರೆಯಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ಧಮಕಿ ಹಾಕಿದ್ದಾರೆ.
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಪೊಲೀಸರು ಕಾನೂನನ್ನು ಮೀರಿ ವರ್ತಿಸುತ್ತಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಕೇಳಿ ಬಂದ ಕುಟುಂಬದವರ ಮೇಲೆ ಪೊಲೀಸರ ಈ ದರ್ಪವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿದ್ದಾರೆ, (ಏಜನ್ಸೀಸ್).