ಮಿರ್ಜಾಪುರದ ಮಹಿಳಾ ಪೊಲೀಸ್ ಅಧಿಕಾರಿ
- ಮಿರ್ಜಾಪುರದ ಮಹಿಳಾ ಪೊಲೀಸ್ಗೆ ಬಾಡಿ ಶೇಮಿಂಗ್
- ದಡೂತಿ ದೇಹವೆಂದು ಟೀಕಿಸಿದ ನೆಟ್ಟಿಗರು
- ರಕ್ಷಣೆ ಮಾಡುವವರನ್ನೇ ಟೀಕಿಸುವುದು ಎಷ್ಟು ಸರಿ?
ಉತ್ತರ ಪ್ರದೇಶ: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ಸದ್ಯ ಎಲ್ಲವೂ ಆಯೋ ಮಯ. ನೆಟ್ಟಿಗರ ಕಣ್ಣಿಗೆ ಒಂದು ಸಣ್ಣ ವಿಚಾರ ಸಿಕ್ಕಿದರೂ ಸಾಕು, ಅದನ್ನು ಜಾಲಾಡದೆ ಸುಮ್ಮನಿರುವುದಿಲ್ಲ. ಅದು ಒಳ್ಳೆಯದೇ ಇರಲಿ ಅಥವಾ ಕೆಟ್ಟದ್ದೇ ಆಗಿರಲಿ. ಒಟ್ಟಿನಲ್ಲಿ, ತಮಗೆ ಹೇಗೋ ಬೇಕೋ ಹಾಗೆ ವಾದಿಸುವುದು, ಲೇವಡಿ ಮಾಡುವುದನ್ನು ಮಾಡುತ್ತಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ತೀರ ಕಾಮನ್. ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಸೇರಿ ಸೆಲೆಬ್ರಿಟಿಗಳನ್ನು ಮನಬಂದಂತೆ ಟೀಕಿಸುವ ನೆಟ್ಟಿಗರು, ಇದೀಗ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ಲೇವಡಿ ಮಾಡಿರುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಮ್ಮ ದೇಹದ ಆಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕಿಸಿದ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಇತ್ತೀಚೆಗೆ, ಮಿರ್ಜಾಪುರ ಖಾಕಿ ಪಡೆ, ಅಪರಾಧಿಯ ಹೆಡೆಮುರಿ ಕಟ್ಟಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿತ್ತು. ಈ ಪೋಸ್ಟ್ ನೋಡಿದ ನೆಟ್ಟಿಗರು, ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚಿ ಮಾತನಾಡುವ ಬದಲು, ವಿಡಿಯೋದಲ್ಲಿದ್ದ ಮಹಿಳಾ ಐಪಿಎಸ್ ಅಧಿಕಾರಿ ಅಪರ್ಣಾ ರಜತ್ ಕೌಶಿಕ್ ಅವರ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುವುದು ತೀರ ನೋವುಂಟು ಮಾಡಿದೆ.
ವಿಪರೀತ ನೆಗೆಟಿವ್ ಕಮೆಂಟ್ಗಳು ಹರಿದುಬಂದ ಕೂಡಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಕಾಮೆಂಟ್ ಸೆಕ್ಷನ್ ಅನ್ನೇ ಅಪರ್ಣಾ ಅವರು ಬ್ಲಾಕ್ ಮಾಡಬೇಕಾಯಿತು. ಸದ್ಯ ಈ ಘಟನೆ ಅದೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. `ಪೊಲೀಸ್ ಅಧಿಕಾರಿಗೆ ಇಷ್ಟು ಅಸಭ್ಯವಾಗಿ ಕಾಮೆಂಟ್ ಮಾಡುತ್ತಾರೆ. ಇನ್ನೂ ಸಾಮಾನ್ಯ ಜನರ ಗತಿಯೇನು?. ನಮ್ಮನ್ನು ರಕ್ಷಿಸಲು ಹಗಲಿರುಳು ದುಡಿಯುವ ಆರಕ್ಷಕರಿಗೆ ಹೀಗೆ ಮಾತನಾಡುವುದು ಎಷ್ಟು ಸರಿ? ಅವಹೇಳನಕಾರಿಯಾಗಿ ಕಾಮೆಂಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).