ಐಪಿಎಲ್ 2026: ಲಖನೌ ನೆಲದಲ್ಲಿ ಗುಜರಾತ್ ಅಬ್ಬರ! ಬಟ್ಲರ್-ಗಿಲ್ ಬ್ಯಾಟಿಂಗ್ ವೈಭವಕ್ಕೆ ಧೂಳೀಪಟವಾದ ಎಲ್‌ಎಸ್‌ಜಿ
ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಅತ್ಯಂತ ಕುತೂಹಲಕಾರಿ ಪಂದ್ಯಗಳಲ್ಲಿ ಒಂದರಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ (GT vs LSG) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಭಾನುವಾರ ಲಖನೌದ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್, ಆತಿಥೇಯರನ್ನು ಸುಲಭವಾಗಿ ಮಣಿಸಿತು.
ಪ್ರಸಿದ್ಧ್ ಕೃಷ್ಣ ಭೀಕರ ಸ್ಪೆಲ್: ತತ್ತರಿಸಿದ ಲಕ್ನೋ ಬ್ಯಾಟರ್‌ಗಳು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಆರಂಭದಲ್ಲೇ ಗುಜರಾತ್ ಬೌಲರ್‌ಗಳು ಶಾಕ್ ನೀಡಿದರು. ವಿಶೇಷವಾಗಿ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ (4 ವಿಕೆಟ್) ಬೆಂಕಿ ಉಗುಳುವಂತಹ ಬೌಲಿಂಗ್ ದಾಳಿ ನಡೆಸಿ ಲಖನೌ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಕ್ನೋ ಪರ ಏಡನ್ ಮಾರ್ಕ್ರಾಮ್ (30) ಗರಿಷ್ಠ ರನ್ ಗಳಿಸಿದರೆ, ರಿಷಬ್ ಪಂತ್ (18), ನಿಕೋಲಸ್ ಪೂರನ್ (19), ಅಬ್ದುಲ್ ಸಮದ್ (18) ಮತ್ತು ಮುಕುಲ್ ಚೌಧರಿ (18) ರನ್ ಗಳಿಸಿದರೂ ದೊಡ್ಡ ಇನಿಂಗ್ಸ್ ಕಟ್ಟಲು ವಿಫಲರಾದರು.
ಅಂತಿಮವಾಗಿ ಗುಜರಾತ್ ಬೌಲರ್‌ಗಳ ಸಂಘಟಿತ ಹೋರಾಟದಿಂದಾಗಿ ಲಖನೌ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 164 ರನ್ ಮಾತ್ರ ಗಳಿಸಲು ಶಕ್ತವಾಯಿತು. ಗುಜರಾತ್ ಪರ ಅಶೋಕ್ ಶರ್ಮಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ತಲಾ ಒಂದು ವಿಕೆಟ್ ಕಿತ್ತರು.
ಜೋಸ್ ಬಟ್ಲರ್ - ಶುಭಮನ್ ಗಿಲ್ ಬ್ಯಾಟಿಂಗ್ ತೂಫಾನ್!
165 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್‌ಗೆ ಸಾಯಿ ಸುದರ್ಶನ್ ಅಲ್ಪ ಮೊತ್ತಕ್ಕೆ ಔಟ್ ಆಗುವ ಮೂಲಕ ಆರಂಭಿಕ ಆಘಾತ ಎದುರಾಯಿತು. ಆದರೆ ನಂತರ ಒಂದಾದ ನಾಯಕ ಶುಭಮನ್ ಗಿಲ್(56 ರನ್, 40 ಬಾಲ್) ಮತ್ತು ಜೋಸ್ ಬಟ್ಲರ್(60 ರನ್, 37ಎಸೆತ) ಲಕ್ನೋ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಇವರಿಬ್ಬರ ನಡುವೆ ಮೂಡಿಬಂದ 84 ರನ್‌ಗಳ ಅಮೋಘ ಜೊತೆಯಾಟ ಗುಜರಾತ್ ತಂಡದ ಗೆಲುವನ್ನು ಸುಲಭಗೊಳಿಸಿತು. ಜೋಸ್ ಬಟ್ಲರ್ ಮೈದಾನದ ಮೂಲೆ ಮೂಲೆಗೂ ಬೌಂಡರಿಗಳ ಮಳೆಗರೆದರು. ಅವರ ಕ್ಲೀನ್ ಹಿಟ್ಟಿಂಗ್ ಎದುರು ಲಕ್ನೋ ಬೌಲರ್‌ಗಳು ಅಸಹಾಯಕರಾದರು. ಗಿಲ್ ಮತ್ತು ಬಟ್ಲರ್ ಔಟ್ ಆಗುವ ಮೂಲಕ ಗೆಲುವು ಸ್ವಲ್ಪ ತಡವಾಯಿತಾದರೂ, ಅಂತಿಮವಾಗಿ ಗುಜರಾತ್ 7 ವಿಕೆಟ್‌ಗಳ ಅಂತರದಿಂದ ಗುರಿ ತಲುಪಿತು,(ಏಜೆನ್ಸೀಸ್).