iPhone EMI ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ: ಖರೀದಿಸಿದ ಹೊಸ ಐಫೋನ್ (iPhone) ಮಾಸಿಕ ಕಂತು (EMI) ಪಾವತಿಸಲು ಹಣವಿಲ್ಲದೆ ಕುಟುಂಬದಲ್ಲಿ ಉಂಟಾದ ತೀವ್ರ ವಾಗ್ವಾದವು, ಕಡೆಗೆ ಮೂವರ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ತೀಸ್ಗಾಂವ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 18 ವರ್ಷದ ಯುವಕ ಹಾಗೂ ಆತನ ತಂದೆ-ತಾಯಿ ಬೆಟ್ಟದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಐಫೋನ್ ಕಂತಿಗಾಗಿ ಶುರುವಾಗಿದ್ದ ಜಗಳ
ಪೊಲೀಸರ ಮಾಹಿತಿಯ ಪ್ರಕಾರ, ಕುನಾಲ್ (18) ಎಂಬ ಯುವಕ ಇತ್ತೀಚೆಗೆ ಐಫೋನ್ ಖರೀದಿಸಿದ್ದ. ಆದರೆ ಅದರ ಕಂತುಗಳನ್ನು ಪಾವತಿಸಲು ಹಣವಿಲ್ಲದೆ ತಂದೆಯ ಬಳಿ ಕೇಳುತ್ತಿದ್ದರು. ಆದಾಗ್ಯೂ, ಈ ವಿಷಯವಾಗಿ ತಂದೆ ಮುರ್ಲಿಧರ್ ಚಾಂದಗುಡೆ ಮತ್ತು ಮಗನ ನಡುವೆ ತೀವ್ರ ಗಲಾಟೆ ನಡೆದಿತ್ತು. ಇದರಿಂದ ಕೋಪಗೊಂಡ ಕುನಾಲ್ ವಾಳುಜ್ ಎತ್ತರವಾದ ಬೆಟ್ಟವನ್ನು ಏರಿ, ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದನು.
ಸಮಾಧಾನ ಮಾಡಲು ಹೋಗಿ ಬಿದ್ದ ತಂದೆ-ಮಗ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೋಷಕರು ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕೆಳಗೆ ಇಳಿಯುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ನಿನ್ನ ತಾಯಿಗಾಗಿ ಬದುಕು, ಬೇಕಿದ್ದರೆ ನಾವೇ ನಿನಗೆ ಐಫೋನ್ 15 ಪ್ರೋ ಕೊಡಿಸುತ್ತೇವೆ ಎಂದು ವಿನಂತಿಸಿದರೂ ಕುನಾಲ್ ಸಾಯುವುದೊಂದೇ ನನಗೆ ಉಳಿದಿರುವ ದಾರಿ ಎಂದು ಹಠ ಹಿಡಿದಿದ್ದನು ಎನ್ನಲಾಗಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ತಂದೆ ಮುರ್ಲಿಧರ್ ಅವರು ಬೆಟ್ಟದ ತುದಿಯಲ್ಲಿದ್ದ ಮಗನ ಬಳಿ ಹತ್ತಿ ಆತನನ್ನು ರಕ್ಷಿಸಲು ಹಿಂದೆ ಎಳೆಯಲು ಯತ್ನಿಸಿದರು. ಈ ವೇಳೆ ಸಮತೋಲನ ತಪ್ಪಿ ಇಬ್ಬರೂ ಪ್ರಪಾತಕ್ಕೆ ಬಿದ್ದರು. ಮಗ ಮತ್ತು ಪತಿ ಕಣ್ಣೆದುರಲ್ಲೇ ಪ್ರಪಾತಕ್ಕೆ ಬಿದ್ದು ಮೃತಪಟ್ಟಿರುವುದನ್ನು ಕಂಡ ತಾಯಿ ಸಂಗೀತಾ, ತಕ್ಷಣವೇ ಬೆಟ್ಟದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.
ಘಟನಾ ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದು, ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ (ಏಜೆನ್ಸೀಸ್).