Investigation against 16 economies including India
ಅನ್ಯಾಯದ ವಾಣಿಜ್ಯ ಚಟುವಟಿಕೆ ಪರಿಶೀಲನೆ | ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಿನ್ನೆಲೆ
ನ್ಯೂಯಾರ್ಕ್: ಭಾರತ, ಚೀನಾ, ಜಪಾನ್ ಮತ್ತು ಐರೋಪ್ಯ ಒಕ್ಕೂಟ ಸಹಿತ ತನ್ನ ವಾಣಿಜ್ಯ ಪಾಲುದಾರ ಆರ್ಥಿಕತೆಗಳ ವಿರುದ್ಧ ಅಮೆರಿಕ ವಿಚಾರಣೆ ಆರಂಭಿಸಿದೆ. ಅಮೆರಿಕದ ಉತ್ಪಾದನಾ ವಲಯಕ್ಕೆ ಮಾರಕವಾಗುವ ‘ಅನ್ಯಾಯದ ವಾಣಿಜ್ಯ ಚಟುವಟಿಕೆಗಳನ್ನು’ ಪರಿಶೀಲಿಸುವುದು ಇದರ ಉದ್ದೇಶ ಎಂದು ಅಮೆರಿಕ ವಾಣಿಜ್ಯ ಪ್ರತಿನಿಧಿ ಜೇಮಿಸನ್ ಗ್ರೀರ್ ತಿಳಿಸಿದ್ದಾರೆ.
ನಾನಾ ರಾಷ್ಟ್ರಗಳ ಕಾರ್ಯಾಚರಣೆಗಳು, ನೀತಿಗಳು ಮತ್ತು ಆಚರಣೆಗಳ ಕುರಿತು 1974ರ ವಾಣಿಜ್ಯ ಕಾನೂನಿನ 301 (ಬಿ) ಸೆಕ್ಷನ್ ಅನ್ವಯ ವಿಚಾರಣೆಗಳನ್ನು ನಡೆಸಲಾಗುತ್ತದೆ. ಅದು ಉತ್ಪಾದನಾ ವಲಯಗಳ ಸಾಂಸ್ಥಿಕ ಹೆಚ್ಚ್ಚುವರಿ ಉತ್ಪಾದನಾ ಸಾಮರ್ಥ್ಯ ಮತ್ತು ಉತ್ಪಾದನೆಗೆ ಸಂಬಂಧಿಸಿದ ನಿಯಮವಾಗಿದೆ.
16 ಆರ್ಥಿಕತೆಗಳು: ಮೇಲೆ ನಮೂದಿಸಿದ ದೇಶಗಳು ಹಾಗೂ 27 ದೇಶಗಳ ಐರೋಪ್ಯ ಒಕ್ಕೂಟದ ಸಹಿತ ಒಟ್ಟು 16 ಆರ್ಥಿಕತೆಗಳು ವಿಚಾರಣೆಗೆ ಒಳಪಡಲಿವೆ. ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೋನೇಶ್ಯಾ, ಕೊರಿಯಾ, ಮಲೇಶ್ಯಾ, ಮೆಕ್ಸಿಕೋ, ನಾರ್ವೆ, ಸಿಂಗಾಪುರ, ಸ್ವಿಜರ್ಲೆಂಡ್, ತೈವಾನ್, ಥಾಯ್ಲೆಂಡ್, ವಿಯೆಟ್ನಾಂ ಉಳಿದ ರಾಷ್ಟ್ರಗಳಾಗಿವೆ.
ತನಿಖಾಧಿಕಾರಿಗಳ ನಿರ್ಣಯ: ಈ ಆರ್ಥಿಕತೆಗಳ ನೀತಿಗಳು ಅಸಮರ್ಥನೀಯವೇ, ತಾರತಮ್ಯದಿಂದ ಕೂಡಿದ್ದೇ, ಅಮೆರಿಕದ ವಾಣಿಜ್ಯಕ್ಕೆ ಹೊರೆಯಾಗುವಂಥದ್ದೇ ಅಥವಾ ನಿರ್ಬಂಧನಾತ್ಮಕವೇ ಎಂಬುದನ್ನು ತನಿಖಾಧಿಕಾರಿಗಳು ನಿರ್ಣಯಿಸಲಿದ್ದಾರೆ.
ಕೈಗಾರಿಕಾ ನೆಲೆ ರಕ್ಷಣೆ: ತಮ್ಮ ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ಪಾದನೆಯ ಸಮಸ್ಯೆಗಳನ್ನು ರಫ್ತು ಮಾಡುವ ಮೂಲಕ ಪರಿಹರಿಸಿಕೊಳ್ಳುವ ಇತರ ದೇಶಗಳಿಗೆ ಅಮೆರಿಕ ತನ್ನ ಕೈಗಾರಿಕಾ ನೆಲೆಯನ್ನು ಬಲಿಗೊಡಲು ಸಿದ್ಧವಿಲ್ಲ ಎಂದು ಗ್ರೀರ್ ಹೇಳಿದ್ದಾರೆ. ತನಿಖೆಯು ನಿರ್ಣಾಯಕ ಸರಬರಾಜು ಸರಪಣಿಯನ್ನು ಮರುಸ್ಥಾಪಿಸಿ ಉತ್ಪಾದನಾ ವಲಯಗಳಲ್ಲಿ ಅಮೆರಿಕನ್ನರಿಗೇ ಉತ್ತಮ ಉದ್ಯೋಗ ಸೃಷ್ಟಿಸುವ ಟ್ರಂಪ್ರ ಧೋರಣೆಗೆ ಅನುಗುಣವಾಗಿದೆ.
ವಿಚಾರಣೆಗೆ ಕಾರಣ: 1977ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾನೂನು ಅನ್ವಯ 2025ರ ಫೆಬ್ರವರಿಯಲ್ಲಿ ಟ್ರಂಪ್ ಅಧಿಕ ಸುಂಕಗಳನ್ನು ಹೇರಿದ್ದರು. ಈ ಭಾರಿ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದ್ದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ಟ್ಯಾರಿಫ್ಗಳ ಬದಲಿಗೆ ಶೇ. 10 ಆಮದು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಇದೇ ಫೆ. 20ರಂದು ಸಹಿ ಮಾಡಿದ್ದರು. ಫೆ. 24ರಿಂದ 150 ದಿನ ಅದು ಅನ್ವಯವಾಗಲಿದೆ.
ಭಾರತದ ಮೇಲೆ ಪರಿಣಾಮ: ಭಾರತದ ಹೆಚ್ಚುವರಿ ಉತ್ಪಾದನೆ ಮತ್ತು ರಫ್ತು ಕ್ಷೇತ್ರಗಳನ್ನು ಅಮೆರಿಕ ಗುರುತಿಸಿದೆ. ಸೋಲಾರ್ ಮಾಡ್ಯುಲ್, ಪೆಟ್ರೋಕೆಮಿಕಲ್ಸ್, ಉಕ್ಕು, ಜವಳಿ, ಆರೋಗ್ಯ ಸಂಬಂಧಿತ ಪರಿಕರಗಳು, ನಿರ್ಮಾಣ ಸಾಮಗ್ರಿಗಳು ಮತ್ತು ಆಟೋಮೋಟಿವ್ ಉತ್ಪನ್ನ ಮೊದಲಾದವು ಅವುಗಳಲ್ಲಿವೆ ಎಂದು ಗ್ಲೋಬಲ್ ಟ್ರೇಡ್ ರೀಸರ್ಚ್ ಇನೀಶಿಯೇಟಿವ್ (ಜಿಟಿಆರ್ಐ) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.