ದೇಶ

ಮಕ್ಕಳು ಇಂಟರ್ನೆಟ್ ಬಳಸದಂತೆ ನಿಷೇಧ ಹೇರುವುದು ಅವಿವೇಕದ ನಿರ್ಧಾರ: ಆನ್‌ಲೈನ್ ಸುರಕ್ಷತೆಗೆ ಸುಪ್ರೀಂ ಮಹತ್ವದ ಸೂಚನೆ! | Internet Access

ನವದೆಹಲಿ: ದೇಶದಲ್ಲಿನ ಮಕ್ಕಳ ಇಂಟರ್ನೆಟ್ ಬಳಕೆ ( Internet Access) ಮತ್ತು ಸಾಮಾಜಿಕ ಜಾಲತಾಣಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಕ್ಕಳ ಇಂಟರ್ನೆಟ್ ಪ್ರವೇಶದ ಮೇಲಿನ ಸಂಪೂರ್ಣ ವಯಸ್ಸಿನ ಆಧಾರಿತ ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದನ್ನು ಬಳಸುವ ಮೂಲಭೂತ ಹಕ್ಕು ಅವರಿಗಿದೆ ಎಂದು ಕೋರ್ಟ್ ಹೇಳಿದೆ.

ನವದೆಹಲಿ: ದೇಶದಲ್ಲಿನ ಮಕ್ಕಳ ಇಂಟರ್ನೆಟ್ ಬಳಕೆ ( Internet Access) ಮತ್ತು ಸಾಮಾಜಿಕ ಜಾಲತಾಣಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಕ್ಕಳ ಇಂಟರ್ನೆಟ್ ಪ್ರವೇಶದ ಮೇಲಿನ ಸಂಪೂರ್ಣ ವಯಸ್ಸಿನ ಆಧಾರಿತ ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದನ್ನು ಬಳಸುವ ಮೂಲಭೂತ ಹಕ್ಕು ಅವರಿಗಿದೆ ಎಂದು ಕೋರ್ಟ್ ಹೇಳಿದೆ.

ಆದರೆ ಆನ್‌ಲೈನ್ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ವೇದಿಕೆಗಳಾದ್ಯಂತ ಮಕ್ಕಳ ಲೈಂಗಿಕ ದೌರ್ಜನ್ಯ ಸಾಮಗ್ರಿಗಳನ್ನು (CSAM) ವೇಗವಾಗಿ ಪತ್ತೆಹಚ್ಚುವುದು ಮತ್ತು ತೆಗೆದುಹಾಕುವುದನ್ನು ಒಳಗೊಂಡ ಕಟ್ಟುನಿಟ್ಟಿನ ಚೌಕಟ್ಟನ್ನು ರೂಪಿಸುವಂತೆ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ತಂತ್ರಜ್ಞಾನ ಕಂಪನಿಗಳಿಗೆ ಸೂಚನೆ ನೀಡಿದೆ.

ಮಕ್ಕಳ ಸುರಕ್ಷತೆ ಮತ್ತು ಇಂಟರ್ನೆಟ್ ಬಳಸುವ ಅವರ ಸ್ವಾತಂತ್ರ್ಯವು ಪರಸ್ಪರ ವಿರುದ್ಧವಾಗಿಲ್ಲ ಎಂದಿರುವ ನ್ಯಾಯಾಲಯ, ಮಕ್ಕಳಿಗೆ ಸಂಪೂರ್ಣವಾಗಿ ಇಂಟರ್ನೆಟ್ ಬಳಸದಂತೆ ನಿಷೇಧ ಹೇರುವುದು ಅವಿವೇಕದ ನಿರ್ಧಾರ, ಅವರ ಹಕ್ಕುಗಳನ್ನು ಕಸಿದುಕೊಳ್ಳದೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಿಹೇಳಿದೆ.

ಇದನ್ನೂ ಓದಿ:ಎಸ್‌ಐಆರ್ ವಿರುದ್ಧದ ಪತಿಭಟನೆ ಬೆನ್ನಲ್ಲೇ ಡಿಎಂಕೆ ಹೈವೋಲ್ಟೇಜ್ ಸಭೆ: ತೃತಿಯ ರಂಗ ರಚನೆಗೆ ಸ್ಟಾಲಿನ್ ಮಾಸ್ಟರ್ ಪ್ಲಾನ್...? | DMK Holds Key Meet

ನಿರ್ಬಂಧಗಳಿಂದಾಗುವ ಅಪಾಯಗಳ ಎಚ್ಚರಿಕೆ!

ವಯಸ್ಸಿನ ಆಧಾರದ ಮೇಲೆ ಮಕ್ಕಳ ಇಂಟರ್ನೆಟ್ ಬಳಕೆಗೆ ನಿಷೇಧ ಹೇರಿದರೆ, ಅವರು ಅಪಾಯಕಾರಿ ಹಾಗೂ ನಿಯಂತ್ರಣವಿಲ್ಲದ ವೆಬ್‌ಸೈಟ್‌ಗಳನ್ನು ಬಳಸಲು ಶುರು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಅಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ಬೆದರಿಕೆ ಅಥವಾ ವಂಚನೆಗೆ ಒಳಗಾಗುವ ಮಕ್ಕಳು ನಾವು ನಿಯಮ ಮುರಿದು ಇಂಟರ್ನೆಟ್ ಬಳಸಿದ್ದಕ್ಕೆ ಪೋಷಕರು ಬೈಯುತ್ತಾರೆ ಅಥವಾ ಶಿಕ್ಷಿಸುತ್ತಾರೆ ಎಂಬ ಭಯದಿಂದ ತಮಗಾದ ಕೆಟ್ಟ ಅನುಭವಗಳನ್ನು ಪೋಷಕರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇಂಟರ್ನೆಟ್ ಬಳಸುವುದನ್ನು ನಿಯಂತ್ರಿಸಲು ಐಟಿ ನಿಯಮಗಳನ್ನು ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಎರಡೇ ವಾರಗಳಲ್ಲಿ ಈ ಪ್ರಮುಖ ತೀರ್ಪು ಬಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಸರ್ಕಾರವು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿತ್ತು. ಇದೇ ಮಾದರಿಯಲ್ಲಿ ಆಂಧ್ರಪ್ರದೇಶದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಸಚಿವ ನಾರಾ ಲೋಕೇಶ್ ಈ ಹಿಂದೆ ಹೇಳಿದ್ದರು.

ಸುಪ್ರೀಂ ಕೋರ್ಟ್ ಕಳವಳ

ಇಂಟರ್ನೆಟ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳು ಮತ್ತು ಕಂಟೆಂಟ್ ಹರಡುವುದನ್ನು ತಡೆಯುವಲ್ಲಿ ಈಗಿರುವ ನಿಯಮಗಳು ವಿಫಲವಾಗಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಹ ಅಕ್ರಮ ವಿಷಯಗಳನ್ನು ಸುಲಭವಾಗಿ ಪತ್ತೆಹಚ್ಚಿ, ಅವು ಹಂಚಿಕೆಯಾಗುವುದನ್ನು ತಡೆಯಲು ಒಂದು ರಾಷ್ಟ್ರೀಯ ಡೇಟಾಬೇಸ್ ಹಾಗೂ ವೆಬ್‌ಸೈಟ್ ಲಿಂಕ್‌ಗಳ ಹೊಸ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಗೂಗಲ್ ಹಾಗೂ ಮೆಟಾ (ಫೇಸ್‌ಬುಕ್/ಇನ್‌ಸ್ಟಾಗ್ರಾಮ್) ಕಂಪನಿಗಳು ಇನ್ನು ಮುಂದೆ ಅಮೆರಿಕದ ಸಂಸ್ಥೆಗಳಿಗೆ ಮಾಹಿತಿ ನೀಡುವ ಬದಲು, ನೇರವಾಗಿ ಭಾರತದ ಪೊಲೀಸ್ ಇಲಾಖೆ ಹಾಗೂ ಕಾನೂನು ಜಾರಿ ಸಂಸ್ಥೆಗಳಿಗೇ ದೂರು ಅಥವಾ ಮಾಹಿತಿ ನೀಡಲು ಒಪ್ಪಿಕೊಂಡಿವೆ. ಇದರಿಂದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಂಕಷ್ಟದಲ್ಲಿರುವ ಮಕ್ಕಳನ್ನು ಬೇಗನೆ ರಕ್ಷಿಸಲು ಸಾಧ್ಯವಾಗುತ್ತದೆ. ಮಕ್ಕಳ ಸ್ವತಂತ್ರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ದೌರ್ಜನ್ಯ ತಡೆಯಲು, ಪ್ರಾಥಮಿಕ ಶಾಲಾ ಹಂತದಿಂದಲೇ ಆನ್‌ಲೈನ್‌ನಲ್ಲಿ ಎದುರಾಗುವ ಅಪಾಯಗಳ ಬಗ್ಗೆ ಮಕ್ಕಳಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಸೂಚಿಸಿದೆ(ಏಜೆನ್ಸೀಸ್​).