MGNREGA Overhaul | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
MGNREGA Overhaul: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಬದಲಿಗೆ, ಹೊಸ ಮಸೂದೆ ತರಲು ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ (ಡಿ.16) ಟೀಕಿಸಿದ್ದು, ಇದು ಮಹಾತ್ಮ ಗಾಂಧಿಯವರ ಆದರ್ಶಗಳಿಗೆ ಮಾಡಿದ ನೇರ ಅವಮಾನ ಎಂದು ಕರೆದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ವಿಷಯಗಳ ಬಗ್ಗೆ ತೀವ್ರವಾದ ದ್ವೇಷವಿದ್ದು, ಮೊದಲನೆಯದು ಮಹಾತ್ಮಾ ಗಾಂಧಿಯವರ ವಿಚಾರಗಳು ಮತ್ತೊಂದು ಬಡವರ ಹಕ್ಕುಗಳು ಎಂದು ಆರೋಪಿಸಿದ್ದಾರೆ.
ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಜೀವಂತ ಸಾಕಾರವೇ ನರೇಗಾ ಯೋಜನೆ. ಇದು ಲಕ್ಷಾಂತರ ಗ್ರಾಮೀಣ ಭಾರತೀಯರಿಗೆ ಜೀವನಾಡಿಯಾಗಿದ್ದು, ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆ ಎನ್ನುವುದು ರುಜುವಾತಾಗಿದೆ. ಎನ್‌ಡಿಎ ಸರ್ಕಾರವು ಈ ಯೋಜನೆಯನ್ನು ದುರ್ಬಲಗೊಳಿಸಲು ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.
ಈ ಯೋಜನೆ ಪ್ರಧಾನಿ ಮೋದಿಯನ್ನು ಯಾವಾಗಲೂ ಚಿಂತೆಗೀಡುಮಾಡಿದೆ. ಕಳೆದ ಹತ್ತು ವರ್ಷಗಳಿಂದ ಅವರ ಸರ್ಕಾರ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇಂದು ನರೇಗಾ ಯೋಜನೆಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ದೃಢನಿಶ್ಚಯ ಮಾಡಿದಂತಿದೆ, ಮೋದಿ ಅವರು ನರೇಗಾವನ್ನು ಕೇಂದ್ರೀಕೃತ ನಿಯಂತ್ರಣದ ಸಾಧನವಾಗಿ ಪರಿವರ್ತಿಸಲು ಬಯಸುತ್ತಾರೆ. ಬಜೆಟ್, ಯೋಜನೆಗಳು ಮತ್ತು ನಿಯಮಗಳನ್ನು ಕೇಂದ್ರವು ನಿರ್ದೇಶಿಸುತ್ತದೆ, ರಾಜ್ಯಗಳು ವೆಚ್ಚದ 40 ಪ್ರತಿಶತವನ್ನು ಭರಿಸಬೇಕಾಗುತ್ತದೆ, ಮತ್ತು ನಿಧಿಗಳು ಖಾಲಿಯಾದ ಬಳಿಕ ಅಥವಾ ರಾಶಿಯ ಸಮಯದಲ್ಲಿ, ಕಾರ್ಮಿಕರಿಗೆ ತಿಂಗಳುಗಳವರೆಗೆ ಉದ್ಯೋಗ ನಿರಾಕರಿಸಲಾಗುತ್ತದೆ ಎಂದು ತಿಳಿಸಿದರು.
ಈ ಜನ ವಿರೋಧಿ ಮಸೂದೆಯ ವಿರುದ್ಧ ವಿರೋಧ ಪಕ್ಷಗಳು ಸಂಸತ್ತಿನವರೆಗೆ ಪ್ರತಿಭಟನೆ ನಡೆಸಲಿವೆ, ಈ ಹೊಸ ಮಸೂದೆಯು ಮಹಾತ್ಮ ಗಾಂಧಿಯವರ ಆದರ್ಶಗಳಿಗೆ ನೇರ ಅವಮಾನವಾಗಿದ್ದು, ಭಾರಿ ನಿರುದ್ಯೋಗದ ಮೂಲಕ ಭಾರತದ ಯುವಕರ ಭವಿಷ್ಯವನ್ನು ನಾಶಪಡಿಸಿದ ಬಳಿಕ, ಮೋದಿ ಸರ್ಕಾರವು ಈಗ ಬಡ ಗ್ರಾಮೀಣ ಕುಟುಂಬಗಳ ಸುರಕ್ಷಿತ ಜೀವನೋಪಾಯವನ್ನು ಗುರಿಯಾಗಿಸಿಕೊಂಡಿದೆ. ಸಡಕ್‌ನಿಂದ ಸಂಸದ್‌ವರೆಗೆ, ನಾವು ಈ ಜನವಿರೋಧಿ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
2005 ರಲ್ಲಿ ಅಂದಿನ ಯುಪಿಎ ಸರ್ಕಾರವು ನರೇಗಾವನ್ನು ಜಾರಿಗೆ ತಂದಿತು ಮತ್ತು ಆ ಬಳಿಕ ಅಕ್ಟೋಬರ್ 2, 2009 ರಿಂದ ಜಾರಿಗೆ ಬರುವಂತೆ NREGA ವನ್ನು MGNREGA ಎಂದು ಮರುನಾಮಕರಣ ಮಾಡಲಾಯಿತು.
ಏನಿದು ಹೊಸ ಬಿಲ್..?
ಈ ಮಸೂದೆಯು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗುತ್ತಾರೆ. ಕಾಯ್ದೆ ಪ್ರಾರಂಭವಾದ ದಿನಾಂಕದಿಂದ ಆರು ತಿಂಗಳೊಳಗೆ, ರಾಜ್ಯಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಒಂದು ಯೋಜನೆಯನ್ನು ರೂಪಿಸಬೇಕಾಗುತ್ತದೆ.
ಇದರ ಹಣಕಾಸಿನ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುವುದು. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಇದು 90:10 ರಷ್ಟಿದ್ದರೆ, ಇತರ ಎಲ್ಲಾ ರಾಜ್ಯಗಳು ಮತ್ತು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ರಷ್ಟಿರುತ್ತದೆ. ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ, ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ(ಏಜೆನ್ಸೀಸ್).