EV Vehicles: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಸದ್ದಿಲ್ಲದಂತೆ ದೊಡ್ಡದೊಂದು ಕ್ರಾಂತಿ ಶುರುವಾಗಿದ್ದು, ಭಾರತೀಯ ರಸ್ತೆಗಳಲ್ಲಿ ಹಂತ ಹಂತವಾಗಿ ಎಲೆಕ್ಟ್ರಿಕ್ ವಾಹನಗಳ (ಇವಿ) ಅಸ್ತಿತ್ವ ಗೋಚರಿಸಲು ಆರಂಭವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಏರಿಕೆಯ ನಡುವೆಯೇ ಆತ್ಯಾಧುನಿಕ ಟೆಕ್ನಾಲಜಿಯಡಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ವಾಹನಗಳು ಜನರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಮೇಲುಗೈ ಸಾಧಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಮಾಲಿನ್ಯದ ಪ್ರಮಾಣ ವಿಪರೀತಗೊಂಡಿದ್ದು, ಜಾಗತಿಕ ಹವಾಮಾನ ವೈಪರೀತ್ಯಗಳು ಜನರ ಬದುಕನ್ನು ಹೈರಾಣಗಿಸಿದೆ. ಈ ನಿಟ್ಟಿನಲ್ಲಿ, ವೇಗದ ಡಿಜಿಟಲ್ ಹಾಗೂ ತಂತ್ರಜ್ಞಾನದ ಯುಗದಲ್ಲಿ ಭಾರತೀಯ ವಾಹನ ಸವಾರರು ಇದೀಗ ಇವಿ ವಾಹನಗಳತ್ತ ಮುಖ ಮಾಡುತ್ತಿದ್ದು, ದೇಶದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ದಿನೇ ದಿನೇ ದಾಖಲೆ ನಿರ್ಮಾಣವಾಗುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ನಗರ ಪ್ರದೇಶಗಳ ಸಾರ್ವಜನಿಕ ಸಾರಿಗೆ, ಡೆಲಿವರಿ ಸೇವೆ ಸಂಸ್ಥೆ ಹಾಗೂ ವೈಯಕ್ತಿಕ ಬಳಕೆಯಲ್ಲಿ ಇವಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡಿದೆ. ಸಾರ್ವಜನಿಕ ಸಾರಿಗೆಯಲ್ಲೂ ಇ-ಬಸ್‌ಗಳು (E-Buses) ಯಶಸ್ವಿಯಾಗಿ ರಸ್ತೆಗಿಳಿದಿವೆ. ಇದರೊಟ್ಟಿಗೆ, ಆಕರ್ಷಕವಾದ ಹೆಚ್ಚುವರಿ ಸಿಸಿಯುಳ್ಳ ಬೈಕ್ ಹಾಗೂ ಲಕ್ಸುರಿ ಕಾರುಗಳ ಒನ್ ಟೈಮ್ ಇನ್ವೆಸ್ಟ್ಮೆಂಟ್ ಅಡಿ ಗ್ರಾಹಕರ ಕೈಸೇರುತ್ತಿರುವುದು ದೇಶವು ಶೀಘ್ರದಲ್ಲೇ ಜಾಗತಿಕ ಮಟ್ಟದ ಇವಿ ಹಬ್ ಆಗಿ ಹೊರಹೊಮ್ಮುವ ಮುನ್ಸೂಚನೆಯನ್ನು ಬಲವಾಗಿಸಿದೆ.
ಖರ್ಚು ಕಡಿಮೆ: ಸಾಂಪ್ರದಾಯಿಕ ಇಂಧನ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ರನ್ನಿಂಗ್ ಮತ್ತು ಸರ್ವೀಸಿಂಗ್ ವೆಚ್ಚ ಶೇ.70ರಿಂದ 80ರಷ್ಟು ಕಡಿಮೆಯಿರುವುದು ಮಧ್ಯಮ ವರ್ಗದ ಗ್ರಾಹಕರ ಜೇಬನ್ನು ಗಟ್ಟಿಯಾಗಿಸಲಿದೆ.
ಸರ್ಕಾರದ ಪ್ರೋತ್ಸಾಹ, ಸಬ್ಸಿಡಿ: ಇವಿ ವಾಹನಗಳ ಉತ್ಪಾದನೆ ಮತ್ತು ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಸಬ್ಸಿಡಿಗಳು, ಜಿಎಸ್‌ಟಿ (GST) ವಿನಾಯಿತಿ ಮತ್ತು ನೋಂದಣಿ ಶುಲ್ಕ ಮನ್ನಾ ಕೊಡುಗೆಗಳು ಈ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಿವೆ.
ಚಾರ್ಜಿಂಗ್ ಪಾಯಿಂಟ್ಗಳ ವಿಸ್ತರಣೆ: ಹೆದ್ದಾರಿಗಳು, ನಗರಗಳ ಮಾಲ್‌ಗಳು, ಆಫೀಸ್ ಕಾಂಪ್ಲೆಕ್ಸ್ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳು ವೇಗವಾಗಿ ತಲೆಎತ್ತುತ್ತಿದ್ದು, ಸವಾರರಲ್ಲಿ ಕಾಡುತ್ತಿದ್ದ ಚಾರ್ಜಿಂಗ್ ತಲೆಬಿಸಿ ಈಗ ಹಂತ ಹಂತವಾಗಿ ಇಳಿದಿದೆ. ಮತ್ತೊಂದೆಡೆ, ಪೆಟ್ರೋಲ್ ಬಂಕ್ಗಳಂತೆಯೇ ಇವಿ ಚಾರ್ಚಿಂಗ್ ಸ್ಟೇಷನ್‌ಗಳು ಹೆಚ್ಚಾಗುತ್ತಿವೆ.
ಆಕರ್ಷಕ ಮಾಡೆಲ್‌ಗಳು: ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ನವನವೀನ ವೈಶಿಷ್ಟ್ಯಗಳಿರುವ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ಬ್ಯಾಟರಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದು ಜನರನ್ನು ಆಕರ್ಷಣೆ ಮಾತ್ರವಲ್ಲದೇ, ಹೊಗೆ ಭರಿತ ರಸ್ತೆಗಳು ಮತ್ತು ಖರ್ಚು-ವೆಚ್ಚಗಳನ್ನು ಉಳಿಸುವ ಉದ್ದೇಶಗಳಿಂದ ಖರೀದಿಯತ್ತ ಕೈಬೀಸಿ ಕರೆಯುತ್ತಿದೆ.
ಈ ಬೆಳವಣಿಗೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೆದ್ದಾರಿ, ನಗರದ ರಸ್ತೆಗಳಲ್ಲಿರುವ ಪೆಟ್ರೋಲ್ ಬಂಕ್ಗಳಲ್ಲೆವೂ ಇವಿ ಚಾರ್ಜಿಂಗ್ ಸ್ಟೇಷನ್ಗಳಾಗಿ ಬದಲಾಗುವುದು, ಇಂಧನ ವಾಹನಗಳಿಂದ ಹೊರಬರುತ್ತಿರುವ ಹೊಗೆಯಿಂದ ಆಗುವ ವಾಯು ಮಾಲಿನ್ಯಕ್ಕೆ ಬ್ರೇಕ್ ಬೀಳುವುದು, ಪೆಟ್ರೋಲ್-ಡಿಸೇಲ್ಗೆ ವ್ಯಯಿಸುವ ಹಣ ಬ್ಯಾಟರಿಗಾಗಿ ಮಾತ್ರ ಮೀಸಲು ಮತ್ತು ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಇಂಧನದ ಖರ್ಚು ಕೂಡ ಉಳಿತಾಯ ಆಗಲಿದೆ,(ಏಜೆನ್ಸೀಸ್).