ರಾಹುಲ್-ವಿಜಯ್ ಸೃಷ್ಟಿಸಿದ ದಾಖಲೆಗೆ ಇನ್‌ಸ್ಟಾಗ್ರಾಮ್ ಬ್ರೇಕ್: ಕಾಂಗ್ರೆಸ್ ಆಕ್ರೋಶ, ಇನ್​ಸ್ಟಾಗೆ ನಟಿ ರಮ್ಯಾ ಪ್ರಶ್ನೆ! Rahul Gandhi 
ದೇಶ

ರಾಹುಲ್-ವಿಜಯ್ ಸೃಷ್ಟಿಸಿದ ದಾಖಲೆಗೆ ಇನ್‌ಸ್ಟಾಗ್ರಾಮ್ ಬ್ರೇಕ್: ಕಾಂಗ್ರೆಸ್ ಆಕ್ರೋಶ, ಇನ್​ಸ್ಟಾಗೆ ನಟಿ ರಮ್ಯಾ ಪ್ರಶ್ನೆ! Rahul Gandhi

ಪ್ರಮುಖ ಮುಖ್ಯಾಂಶಗಳು

  • ಸಿಎಂ ವಿಜಯ್ ಮತ್ತು ರಾಹುಲ್ ಗಾಂಧಿ ಅವರ ದಾಖಲೆ ವೀಕ್ಷಣೆಯ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿರುವುದು ವಿವಾದಕ್ಕೆ ನಾಂದಿ
  • ಕೇವಲ ಒಂದು ಗಂಟೆಯಲ್ಲಿ 1.2 ಕೋಟಿ ವೀಕ್ಷಣೆ ಕಂಡ ರೀಲ್ ಹಾಗೂ 4.6 ಕೋಟಿ ವೀಕ್ಷಣೆ ಕಂಡ ಫೋಟೋಗಳು ಹಠಾತ್ತನೆ ಮಾಯ
  • ವಿಪಕ್ಷದ ಧ್ವನಿ ಹತ್ತಿಕ್ಕಲು ಕೇಂದ್ರ ಸರ್ಕಾರವೇ ಪೋಸ್ಟ್ ಡಿಲೀಟ್ ಮಾಡಿಸಿದೆ ಎಂದು ಕಾಂಗ್ರೆಸ್ ಮತ್ತು ನಟಿ ರಮ್ಯಾ ಗಂಭೀರವಾಗಿ ಆರೋಪ
  • ಈ ವಿವಾದಕ್ಕೂ ತಮಗೂ ಸಂಬಂಧವಿಲ್ಲ, ಇದು ಇನ್‌ಸ್ಟಾಗ್ರಾಮ್‌ನ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ ಕೇಂದ್ರ
ನವದೆಹಲಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಜೊತೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ( Rahul Gandhi ) ಅವರು ತೆಗೆದುಕೊಂಡಂತಹ ಫೋಟೋ ಮತ್ತು ರೀಲ್​ ಅನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿರುವುದನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿದೆ.
ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದಾಗಿ ಫೋಟೋ ಮತ್ತು ರೀಲ್​​ ಅನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಗಂಭೀರವಾಗಿ ಆರೋಪಿಸಿದ್ದಾರೆ. ವಿಪಕ್ಷದ ಧ್ವನಿಯನ್ನು ಅಡಗಿಸಲು ಸರ್ಕಾರವು ಇಂತಹ ಕ್ರಮಗಳಿಗೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಲಕ್ಷಾಂತರ ವೀಕ್ಷಣೆ ಕಂಡಿದ್ದ ಪೋಸ್ಟ್​ಗಳು ಇದೀಗ ಮಾಯವಾಗಿರುವುದು ರಾಜಕೀಯ ಸಂಘರ್ಷಕ್ಕೆ ನಾಂದಿ ಆಡಿದೆ.
ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಕೇಂದ್ರ ಸರ್ಕಾರವು, ಫೋಟೋ ಮತ್ತು ರೀಲ್ ಬ್ಲಾಕ್ ಆಗಲೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಇನ್‌ಸ್ಟಾಗ್ರಾಮ್ ಸಂಸ್ಥೆಯ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆ ಎಂದು ಸರ್ಕಾರ ವಿವರಣೆ ನೀಡಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸರ್ಕಾರದ ಹಸ್ತಕ್ಷೇಪದ ಕುರಿತು ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಅಷ್ಟಕ್ಕೂ ನಡೆದಿದ್ದೇನು?

ನಟ ಹಾಗೂ ಟಿವಿಕೆ ನಾಯಕ ವಿಜಯ್​ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ನಿನ್ನೆ (ಮೇ 10) ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು ವಿಜಯ್​ ಜೊತೆಗೆ ತೆಗೆದುಕೊಂಡ ಫೋಟೋ ಮತ್ತು ರೀಲ್​ಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೇವಲ ಒಂದು ಗಂಟೆಯೊಳಗೆ ಈ ರೀಲ್ ಅನ್ನು 1.2 ಕೋಟಿ ಜನರು ವೀಕ್ಷಿಸಿದ್ದರೆ, ರಾಹುಲ್ ಮತ್ತು ವಿಜಯ್ ಒಟ್ಟಿಗೆ ಇರುವ ಚಿತ್ರವನ್ನು ಬರೋಬ್ಬರಿ 4.6 ಕೋಟಿ ಜನರು ವೀಕ್ಷಿಸಿದ್ದರು.
ಫೋಟೋ ಮತ್ತು ರೀಲ್​ ಇಷ್ಟೊಂದು ದಾಖಲೆ ಮಟ್ಟದ ಜನಪ್ರಿಯತೆ ಗಳಿಸಿದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಈ ಪೋಸ್ಟ್‌ಗಳನ್ನು ಹಠಾತ್ತನೆ ತೆಗೆದುಹಾಕಿದ್ದು, ಇದು ವಿಪಕ್ಷದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ವಿದ್ಯಮಾನವು ಈಗ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಧ್ವನಿ ಎತ್ತಿದ ರಮ್ಯಾ

ರಾಹುಲ್​ ಗಾಂಧಿ ಹಾಗೂ ವಿಜಯ್​ ಜತೆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ ಬ್ಲಾಕ್​ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿ ನಟಿ ರಮ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ವಿಜಯ್​ ಜೊತೆಗಿನ ರಾಹುಲ್​ ಜೀ ಸಂಭ್ರಮಾಚರಣೆಯ ಪೋಸ್ಟ್​ಗಳನ್ನು ಇನ್​ಸ್ಟಾಗ್ರಾಮ್​ ಬ್ಲಾಕ್​ ಮಾಡಿದೆ. ಭಾರತದಲ್ಲಿ ಈ ಪೋಸ್ಟ್​ ದೊರೆಯುವುದಿಲ್ಲ ಎಂಬ ಸೂಚನೆ ಬರುತ್ತಿದೆ. ಈ ರೀತಿ ಏಕೆ ಆಯಿತು ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸ್ಪಷ್ಟನೆ

ಈ ವಿಷಯದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಕೇಂದ್ರ ಸರ್ಕಾರವು ಕಡಾಖಂಡಿತವಾಗಿ ನಿರಾಕರಿಸಿದೆ. ರಾಹುಲ್ ಗಾಂಧಿ ಮತ್ತು ವಿಜಯ್ ಅವರ ಪೋಸ್ಟ್‌ಗಳನ್ನು ತೆಗೆದುಹಾಕುವಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಮತ್ತು ಈ ಬೆಳವಣಿಗೆಗೂ ತಮಗೂ ಸಂಬಂಧವಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಇದು ಕೇವಲ ಇನ್‌ಸ್ಟಾಗ್ರಾಮ್ ಸಂಸ್ಥೆಯ ಕಡೆಯಿಂದ ಉಂಟಾದ ತಾಂತ್ರಿಕ ದೋಷದಿಂದ ಸಂಭವಿಸಿದ ಘಟನೆಯೇ ಹೊರತು, ಯಾವುದೇ ಹಸ್ತಕ್ಷೇಪ ನಡೆದಿಲ್ಲ ಎಂಬುದು ಸರ್ಕಾರದ ವಿವರಣೆಯಾಗಿದೆ, (ಏಜೆನ್ಸೀಸ್​).