ಹೈದರಾಬಾದ್: ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಫೋಟೋ ಶೂಟ್ ಹುಚ್ಚಿಗೆ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ(Three youths die) ಘಟನೆ ಸೋಮವಾರ(ಜೂ. 15) ನಡೆದಿದೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಧರ್ಮರಾಮ್ ಗ್ರಾಮದ ಬನಮ್ಮ ಸರೋವರದಲ್ಲಿ ಮೂವರು ಯುವಕರು ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಹೆಡ್ಸೆಟ್ ನೀರಿನಲ್ಲಿ ಬಿದ್ದಿದ್ದು, ಅದನ್ನು ತೆಗೆಯಲು ನೀರಿನಲ್ಲಿ ಇಳಿದಾಗ ಮೂವರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರನ್ನು ಬೊಲ್ಲಾರಂ ಪ್ರದೇಶದ ಸ್ನೇಹಿತರಾದ ಆಂಥೋನಿ (18), ಜೋಸೆಫ್ (18), ಮತ್ತು ಟೋನಿ (17) ಎಂದು ಗುರುತಿಸಲಾಗಿದೆ. ಇನ್‌ಸ್ಟಾಗ್ರಾಮ್‌ಗಾಗಿ ವಿಶೇಷ ಫೋಟೋಗಳನ್ನು ತೆಗೆದುಕೊಳ್ಳಲು ಅವರು ಸರೋವರಕ್ಕೆ ಬಂದಿದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಇಬ್ಬರು ಯುವಕರ ಶವಗಳನ್ನು ಪತ್ತೆಯಾಗಿದ್ದು, ಇನ್ನೊಬ್ಬ ಯುವಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಘಟನೆ ಬಗ್ಗೆ ಮೆಡ್ಚಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದ ಹುಚ್ಚಿಗೆ ಅಪಾಯವನ್ನುಂಟುಮಾಡುವ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).