Instagram Down (ಸಾಂದರ್ಭಿಕ ಚಿತ್ರ) 
ದೇಶ

ಇನ್‌ಸ್ಟಾಗ್ರಾಮ್ ಡೌನ್! ಫೋಟೋ ಲೋಡ್ ಆಗದೆ, ಸ್ಟೋರಿ ಕಾಣಿಸದೆ ಬಳಕೆದಾರರ ಪರದಾಟ.. Instagram Down

ಭಾನುಪ್ರಿಯ ಡಿ.ಕೆ

ಪ್ರಮುಖ ಮುಖ್ಯಾಂಶಗಳು

  • ಮೆಟಾ ಒಡೆತನದ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್
  • ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದೆ ಪರದಾಟ
  • ಈವರೆಗೂ ಸುಮಾರು 10,725 ಬಳಕೆದಾರರು ಈ ಕುರಿತು ದೂರು ನೀಡಿದ್ದಾರೆ
  • , ಭಾರತದಲ್ಲಿ ಪ್ಲಾಟ್​ಫಾರ್ಮ್​ ಪ್ರವೇಶಿಸುವಲ್ಲಿ ಸುಮಾರು 252 ಜನರಿಗೆ ತೊಂದರೆ
Instagram: ಮೆಟಾ ಒಡೆತನದ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ಮಂಗಳವಾರ (ಮಾ. 10) ಭಾರಿ ತಾಂತ್ರಿಕ ಅಡಚಣೆ ಉಂಟಾಗಿದ್ದು, ಇದರಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದೆ ಪರದಾಡುವಂತಾಯಿತು.
ಡೌನ್‌ಡೆಕ್ಟರ್ ಪ್ರಕಾರ, ಈವರೆಗೂ ಸುಮಾರು 10,725 ಬಳಕೆದಾರರು ಈ ಕುರಿತು ದೂರು ನೀಡಿದ್ದಾರೆ. ಆದಾಗ್ಯೂ, ಭಾರತದಲ್ಲಿ ಪ್ಲಾಟ್​ಫಾರ್ಮ್​ ಅನ್ನು ಪ್ರವೇಶಿಸುವಲ್ಲಿ ಸುಮಾರು 252 ಜನರಿಗೆ ತೊಂದರೆಯಾಗಿರುವುದು ಕಂಡುಬಂದಿದೆ. ಏತನ್ಮಧ್ಯೆ, ಯುನೈಟೆಡ್​ ಕಿಂಗ್​ಡಮ್​ನಲ್ಲಿ ಸುಮಾರು 135 ಬಳಕೆದಾರರು ಈ ಇದೇ ರೀತಿಯ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ದೂರುಗಳು ದಾಖಲಾಗುವ ಅವಧಿಯಲ್ಲಿ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ಸೂಚಿಸಿವೆ.
ಭಾರತದಲ್ಲಿ ಇನ್‌ಸ್ಟಾಗ್ರಾಮ್ ಬಳಕೆದಾರರ ಸಂಖ್ಯೆ ಅಗಾಧವಾಗಿದ್ದು, ಇಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಣೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಶೇ. 77 ರಷ್ಟು ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆಯಲು ಅಥವಾ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದರೆ, ಶೇ. 13 ರಷ್ಟು ಜನರು ಡೆಸ್ಕ್‌ಟಾಪ್ ಅಥವಾ ವೆಬ್‌ಸೈಟ್ ಆವೃತ್ತಿಯಲ್ಲಿ ಸಮಸ್ಯೆ ಅನುಭವಿಸಿದ್ದಾರೆ. ಶೇ. 11 ರಷ್ಟು ಬಳಕೆದಾರರು ಸರ್ವರ್ ಸಂಪರ್ಕದ ಕೊರತೆಯಿಂದಾಗಿ ಸಂಪೂರ್ಣವಾಗಿ ಡಿಸ್‌ಕನೆಕ್ಟ್ ಆಗಿರುವುದು ಕಂಡುಬಂದಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಶೇ. 71 ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಶೇ. 19 ರಷ್ಟು ಜನರು ಫೀಡ್ ಅಥವಾ ಟೈಮ್​ಲೈನ್​ನಲ್ಲಿ ತೊಂದರೆಗಳನ್ನು ವರದಿ ಮಾಡಿದ್ದಾರೆ. ಆದಾಗ್ಯೂ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ಶೇ. 60 ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಶೇ. 18 ರಷ್ಟು ಜನರು ಫೀಡ್ ಅಥವಾ ಟೈಮ್‌ಲೈನ್‌ನಲ್ಲಿ ಸಮಸ್ಯೆಗಳನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿ ಸಣ್ಣ ತಾಂತ್ರಿಕ ದೋಷ ಕಾಣಿಸಿಕೊಂಡರೂ, ಮೆಟಾ ತನ್ನ ಅಧಿಕೃತ ಕಮ್ಯುನಿಕೇಶನ್ ಚಾನೆಲ್‌ಗಳ ಮೂಲಕ ಅಥವಾ 'ಎಕ್ಸ್' (X) ವೇದಿಕೆಯಲ್ಲಿ "ನಾವು ಶೀಘ್ರವೇ ಮರಳುತ್ತೇವೆ" ಎಂದು ಸಂದೇಶ ನೀಡುತ್ತಿತ್ತು. ಆದರೆ ಈ ಬಾರಿ ತೊಂದರೆ ಉಂಟಾಗಿ ತುಂಬಾ ಸಮಯ ಕಳೆದರೂ ಅವರ ಅಧೀಕೃತ ಹ್ಯಾಂಡಲ್​​ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನ್ಯೂಯಾರ್ಕ್, ಚಿಕಾಗೋ, ಬೋಸ್ಟನ್, ವಾಷಿಂಗ್ಟನ್, ಡಲ್ಲಾಸ್, ಫೀನಿಕ್ಸ್, ಸ್ಯಾನ್ ಡಿಯಾಗೋ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ​​ಸೇರಿದಂತೆ ಕೆಲವು ಪ್ರದೇಶದ ಜನರು ತೊಂದರೆಯನ್ನು ಅನುಭವಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ (ಏಜೆನ್ಸೀಸ್​).