MK Stalin | ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 
ದೇಶ

ಟಿವಿಕೆ ಗೆಲುವಿಗೆ ಇನ್‌ಸ್ಟಾಗ್ರಾಮ್‌ ಹಾಗೂ ಮಕ್ಕಳೇ ಕಾರಣ!...ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದುಬರುತ್ತೇವೆ ಎಂದ ಸ್ಟಾಲಿನ್ | MK Stalin

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲನುಭವಿಸಿದ ಬಳಿಕ, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ (MK Stalin) ಪಕ್ಷದ ಹಿನ್ನಡೆಯ ಹಿಂದಿನ ಕಾರಣಗಳು ಮತ್ತು ಮುಂದಿನ ಕಾರ್ಯತಂತ್ರಗಳ ಕುರಿತು ಸೋಮವಾರ ಮುಕ್ತವಾಗಿ ಮಾತನಾಡಿದ್ದು, ಚುನಾವಣೆಯಲ್ಲಿ ಟಿವಿಕೆ ಗೆಲ್ಲಲು ಇನ್‌ಸ್ಟಾಗ್ರಾಮ್‌ ಮತ್ತು ಮಕ್ಕಳನ್ನು ಬಳಸಿಕೊಂಡಿದೆ ಎಂದು ಹೇಳಿದ್ದಾರೆ.
ಟಿವಿಕೆ ಪರವಾದ ಅಲೆ ಎಬ್ಬಿಸಿ ಮತದಾರರನ್ನು ಸೆಳೆಯಲು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳು ಹಾಗೂ ಮಕ್ಕಳನ್ನು ಬಳಸಿಕೊಂಡಿದ್ದೇ ಡಿಎಂಕೆಯ ಹಿನ್ನಡೆಗೆ ಕಾರಣ ಎಂದು ಸ್ಟಾಲಿನ್ ವಿಶ್ಲೇಷಿಸಿದ್ದಾರೆ. ಮಕ್ಕಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡು, ಅವರ ಮೂಲಕ ಅವರ ತಾಯಂದಿರು, ಅಜ್ಜ-ಅಜ್ಜಿಯರು ಮತ್ತು ಹಿರಿಯರ ಮೇಲೆ ಪ್ರಭಾವ ಬೀರುವಂತೆ ಎದುರಾಳಿ ಪಕ್ಷದವರು ಲೆಕ್ಕಾಚಾರದ ರಾಜಕಾರಣ ಮಾಡಿದ್ದಾರೆ. ಇದನ್ನು ಮುಂಚಿತವಾಗಿಯೇ ಊಹಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿರುವ ಮಾಜಿ ಸಿಎಂ​, ಇಂತಹ ತಂತ್ರಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಎದುರಿಸಬೇಕು ಎಂಬುದರ ಕುರಿತು ಪಕ್ಷವು ಈಗ ಹೊಸ ಕಾರ್ಯತಂತ್ರಗಳನ್ನು ರೂಪಿಸಲಿದೆ ಎಂದು ತಿಳಿಸಿದ್ದಾರೆ.
ಅಧಿಕಾರ ಕಳೆದುಕೊಂಡಿದ್ದರೂ ಡಿಎಂಕೆಯ ರಾಜಕೀಯ ಪ್ರಸ್ತುತತೆ ಮತ್ತು ಪ್ರಭಾವ ರಾಜ್ಯದಲ್ಲಿ ಹಾಗೇ ಉಳಿದಿದೆ ಎಂದಿರುವ ಸ್ಟಾಲಿನ್, ಈ ಸೋಲಿನಿಂದ ನಾವು ದುಃಖಪಡಬೇಕಾಗಿಲ್ಲ, ಡಿಎಂಕೆ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಅಭಿವೃದ್ದಿ ಯೋಜನೆಗಳನ್ನೇ ಹೊಸ ಸರ್ಕಾರವೂ ಮುಂದುವರಿಸುತ್ತಿರುವುದು ನಮ್ಮ ಪಕ್ಷದ ನೀತಿಗಳು ಇಂದಿಗೂ ರಾಜ್ಯದ ಆಡಳಿತವನ್ನು ರೂಪಿಸುತ್ತಿವೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದರು.
ತಾವು ಅನೇಕ ಸೋಲು-ಗೆಲುವುಗಳು ನೋಡಿರುವುದಾಗಿ ತಿಳಿಸಿರುವ ಸ್ಟಾಲಿನ್​, ಸೋತಾಗಲೆಲ್ಲಾ ಡಿಎಂಕೆ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದುಬರುತ್ತದೆ ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬುತ್ತಾ, ಚುನಾವಣಾ ಸೋಲಿನಿಂದ ತಾವೇನೂ ಧೃತಿಗೆಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಸೋಲಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಸ್ಟಾಲಿನ್, ನಾವು ಸಂಸತ್ ಚುನಾವಣೆಯ ಬೆನ್ನಲ್ಲೇ ನಮ್ಮ ಚುನಾವಣಾ ಕೆಲಸಗಳನ್ನು ಆರಂಭಿಸಿದ್ದೆವು ಮತ್ತು ಸಾಕಷ್ಟು ಜನಪರ ಕೆಲಸಗಳನ್ನೂ ಮಾಡಿದ್ದೆವು, ಆದರೂ ನಮಗೆ ಅಧಿಕಾರಕ್ಕೆ ಬರಲು ಏಕೆ ಸಾಧ್ಯವಾಗಲಿಲ್ಲ ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಂಡಿದ್ದಾರೆ.
ಹಲವಾರು ಮತಗಟ್ಟೆಗಳಲ್ಲಿ ಎದುರಾಳಿ ಮೈತ್ರಿಕೂಟಕ್ಕೆ ಬೂತ್ ಸಮಿತಿ ಸದಸ್ಯರು, ಬೂತ್ ಏಜೆಂಟರು ಅಥವಾ ಕೌಂಟಿಂಗ್ (ಮತ ಎಣಿಕೆ) ಏಜೆಂಟರು ಕೂಡ ಇರಲಿಲ್ಲ, ಆದರೂ ಅವರು ಹೇಗೆ ಗೆಲ್ಲಲು ಸಾಧ್ಯವಾಯಿತು ಎಂದು ಸಂಶಯ ವ್ಯಕ್ತಪಡಿಸಿರುವ ಮಾಜಿ ಸಿಎಂ, ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ನಿರ್ದಿಷ್ಟ ಮತದಾರರನ್ನು ಗುರಿಯಾಗಿಸಿಕೊಂಡು ನಡೆಸುವ ಇಂದಿನ ಆಧುನಿಕ ಪ್ರಚಾರದ ಮಾದರಿಗಳಿಗೆ ತಕ್ಕಂತೆ ಡಿಎಂಕೆ ಮುಂಬರುವ ಚುನಾವಣೆಗಳಲ್ಲಿ ಬದಲಾಗಲಿದೆ ಮತ್ತು ಅತ್ಯಂತ ಜಾಗರೂಕತೆಯಿಂದ ಮುನ್ನೆಚ್ಚರಿಕೆ ವಹಿಸಲಿದೆ ಎಂದು ತಿಳಿಸಿದರು(ಏಜೆನ್ಸೀಸ್​​).