Maharashtra family no gold for wedding 
ದೇಶ

ಪ್ರಧಾನಿ ಮೋದಿ ಮಾತಿಗೆ ಓಗೊಟ್ಟ 'ಮಹಾ' ಕುಟುಂಬ; ಮಗನ ಮದುವೆಗೆ ಚಿನ್ನ ಖರೀದಿಸದಿರಲು ನಿರ್ಧಾರ!..Maharashtra

ಪ್ರಮುಖ ಮುಖ್ಯಾಂಶಗಳು

  • ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಎಂದಿದ್ದ ಪ್ರಧಾನಿ ಮೋದಿ ಮಾತಿಗೆ ತಲೆ ಬಾಗಿದ ಮಹಾರಾಷ್ಟ್ರದ ಕುಟುಂಬ
  • ಮಗನ ಮದುವೆಗೆ ಚಿನ್ನ ಖರೀದಿ ಮಾಡೋದಿಲ್ಲ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ವ್ಯಾಪಾರಿ
  • ಭಾವಿ ಸೊಸೆಗೆ ಪತ್ನಿಯ ಹಳೆಯ ಮಾಂಗಲ್ಯ ಸೂತ್ರವನ್ನೇ ಪಾಲಿಶ್ ಮಾಡಿಸಿ ಕೊಡುವ ಬಗ್ಗೆ ಉಲ್ಲೇಖ
ಮುಂಬೈ: 
'ಮುಂದಿನ ತಿಂಗಳು ಮಗನ ಮದುವೆ ಇದೆ. ಆದರೆ, ಹೊಸದಾಗಿ ಚಿನ್ನವನ್ನು ಖರೀದಿ ಮಾಡೋಕೆ ಹೋಗೋದಿಲ್ಲ. ಯಾಕಂದ್ರೆ ಪ್ರಧಾನಿಯವರು ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಎಂದಿದ್ದಾರೆ. ಹೀಗಾಗಿ ಅವರ ಮನವಿಯನ್ನು ಪ್ರೇರಣೆಯಾಗಿ ಪಡೆದಿದ್ದೇವೆ. ಭಾವಿ ಸೊಸೆಗೂ ಹಳೆಯ ಮಾಂಗಲ್ಯ ಸೂತ್ರವನ್ನೇ ಪಾಲಿಶ್​ ಮಾಡಿಸಿಕೊಡುತ್ತೇವೆ' ಹೀಗೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಮಹಾರಾಷ್ಟ್ರದ ಪೂಜಾ ಸಾಮಗ್ರಿ ವ್ಯಾಪಾರಿ.
ಇರಾನ್​ ಹಾಗೂ ಇಸ್ರೇಲ್​, ಅಮೆರಿಕ ನಡುವೆ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ದೇಶದ ಆರ್ಥಿಕತೆ ಕಾಪಾಡಿಕೊಳ್ಳಲು, ಚಿನ್ನದ ಮೇಲಿನ ಆಮದು ಸುಂಕವನ್ನು ತಗ್ಗಿಸಲು ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು ಇತ್ತೀಚೆಗೆ ಪ್ರಧಾನಿ ಮೋದಿಯವರು ಕರೆ ನೀಡಿದರು. ಇದರಿಂದ ಪ್ರೇರಿತರರಾದ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿರುವ ಪುಲ್ಗಾಂವ್​ ಪಟ್ಟಣದ ಪೂಜಾ ಸಾಮಗ್ರಿ ವ್ಯಾಪಾರಿ ಸತೀಶ್​ ಗೌರಿಶಂಕರ್​ ಚೌಬೆ,  ತನ್ನ ಮಗನ ಮದುವೆಗೆ ಚಿನ್ನ ಖರೀದಿಸದಿರಲು ನಿರ್ಧರಿಸಿದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. 

ಹೆಂಡತಿಯ ಹಳೆಯ ತಾಳಿ ಸೊಸೆಗೆ

'ಜುಲೈ1ರಂದು ಮಗ ಯಶ್​ ಚೌಬೆ ಮದುವೆ ಇದೆ. ಆತನು ಎಂಜಿನಿಯರ್​ ಮುಗಿಸಿ ಕೆಲಸ ಮಾಡುತ್ತಿದ್ದಾನೆ. ಆತನಿಗಾಗಿ ನಾವು ಹೊಸದಾಗಿ ಚಿನ್ನ ಖರೀದಿ ಮಾಡೋದಿಲ್ಲ. ಜೊತೆಗೆ ಭಾವಿ ಸೊಸೆಗೆ ಪತ್ನಿ  ಸೀಮಾರ ಮಾಂಗಲ್ಯ ಸೂತ್ರವನ್ನೇ ಪಾಲೀಶ್​ ಮಾಡಿಸಿ ಕೊಡುತ್ತಿದ್ದೇವೆ. ನಮ್ಮ ಈ ಮಹತ್ವದ ನಿರ್ಧಾರಕ್ಕೆ ನಿಮ್ಮ ಮಾತೇ ಸ್ಫೂರ್ತಿ' ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 
ರಾಜಸ್ಥಾನದ ಜುನ್ಜುನು ಪ್ರದೇಶದಲ್ಲಿದ್ದ ವ್ಯಾಪಾರಿ ಸತೀಶ್​ ಗೌರಿಶಂಕರ್​ ಚೌಬೆ ಕುಟುಂಬ ಕಳೆದ ಕೆಲವು ದಶಕದ ಹಿಂದೆ  ವಲಸೆ ಬಂದು  ಮಹಾರಾಷ್ಟ್ರದಲ್ಲಿ ನೆಲಸಿದ್ದಾರೆ. ಮಾರ್ವಾಡಿ-ರಾಜಸ್ಥಾನದ ಸಂಪ್ರದಾದ ಮೂಲಕ ಮದುವೆ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಮಗನ ಮದುವೆಗೆ ಆಹ್ವಾನ

ಜುಲೈ1ರಂದು ನಡೆಯಲಿರುವ ಮಗನ ಮದುವೆ ಪ್ರಧಾನಿ ಮೋದಿಯವರನ್ನು ಸಹ ಚೌಬೆ ಕುಟುಂಬ ಆಹ್ವಾನಿಸಿದೆ. ಜೊತೆಗೆ ನವದಂಪತಿಗೆ ಆಶೀರ್ವಾದಿಸುವಂತೆ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.
ಚಿನ್ನ ಖರಿದೀಸುವುದು ಬೇಡ ಎನ್ನುವ ನಿರ್ಧಾರ ವೈಯಕ್ತಿಕ ಆಯ್ಕೆ ಹೇಗೆ ಬದಲಾಯಿಸುತ್ತದೆ ಎನ್ನುವುದು ಮಾತ್ರವಲ್ಲದೆ ರಾಷ್ಟ್ರೀಯ ಉದ್ದೇಶಕ್ಕಾಗಿ ಹೇಗೆ ಕೊಡುಗೆ ನೀಡುತ್ತದೆ ಎನ್ನುವ ಪ್ರಯತ್ನವಾಗಿದೆ ಎಂದು ಚೌಬೆ  ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).