Rishabh Pant >ಪಂತ್ ನಾಯಕತ್ವ ಬಿಡಲು ಕಾರಣವಾಯ್ತಾ ಆ ಒಂದು ಓವರ್..? 
ದೇಶ

ಡಗೌಟ್ ಕಿರಿಕಿರಿ, ಮ್ಯಾನೇಜ್‌ಮೆಂಟ್ ಹಸ್ತಕ್ಷೇಪ!... ಪಂತ್ ನಾಯಕತ್ವ ಬಿಡಲು ಕಾರಣವಾಯ್ತಾ ಆ ಒಂದು ಓವರ್..? | Rishabh Pant

Rishabh Pant: ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಬೆನ್ನಲ್ಲೇ, ನಾಯಕತ್ವದ ಜವಾಬ್ದಾರಿಯಿಂದ ರಿಷಭ್ ಪಂತ್ ಹಿಂದೆ ಸರಿದಿದ್ದಾರೆ. ಪಂತ್ ಅವರು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಿ ನೀಡುವಂತೆ ವಿನಂತಿಸಿದ್ದು, ಅವರ ನಿರ್ಧಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ಎಲ್​ಎಸ್​ಜಿ ಫ್ರಾಂಚೈಸಿಯು ಅಧಿಕೃತವಾಗಿ ಖಚಿತಪಡಿಸಿದೆ.
ಈ ಪ್ರಕಟಣೆಯು ಲಖನೌ ತಂಡದ ಅಭಿಯಾನ ಮುಗಿದ ನಂತರ ಹೊರಬಂದಿದ್ದರೂ, ನಿರೀಕ್ಷಿತ ಮಟ್ಟ ತಲುಪಲು ತಂಡ ವಿಫಲವಾದ ಸಂದರ್ಭದಲ್ಲಿಯೇ ಪಂತ್ ಈ ನಿರ್ಧಾರವನ್ನು ಕೈಗೊಂಡಿದ್ದರು ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಎಲ್‌ಎಸ್‌ಜಿ ನಿರ್ದೇಶಕ ಟಾಮ್ ಮೂಡಿ, ಇಂತಹ ನಿರ್ಧಾರಗಳು ಎಂದಿಗೂ ಸುಲಭವಲ್ಲ. ರಿಷಭ್ ನಾಯಕನಾಗಿ ಈ ಡ್ರೆಸ್ಸಿಂಗ್ ರೂಮ್‌ಗೆ ನೀಡಿದ ಕೊಡುಗೆಗೆ ನಾವು ಕೃತಜ್ಞರಾಗಿದ್ದು, ನಮ್ಮ ಗಮನ ಈಗ ತಂಡದ ಮರುನಿರ್ಮಾಣದ ಕಡೆಗೆ ಇದೆ ಎಂದಿದ್ದಾರೆ. ಆದರೆ ಈ ನಿರ್ಧಾರದ ಹಿಂದೆ ತೆರೆಯ ಮರೆಯಲ್ಲಿ ದೊಡ್ಡ ಭಿನ್ನಾಭಿಪ್ರಾಯಗಳೇ ಇದ್ದವು ಎಂಬುದಾಗಿ ವರದಿಯಾಗಿದ್ದು, ಪಂದ್ಯದ ಬಳಿಕ ನಡೆಯುವ ಪ್ರೆಸ್ ಕಾನ್ಫರೆನ್ಸ್‌ಗಳಲ್ಲಿ ಪಂತ್ ಆಡುತ್ತಿದ್ದ ಮಾತುಗಳೇ ಇದಕ್ಕೆ ಸೂಕ್ಷ್ಮ ಸುಳಿವು ನೀಡುತ್ತಿದ್ದವು.

ಅತಿಯಾದ ಹಸ್ತಕ್ಷೇಪ...

ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹಲವು ಧ್ವನಿಗಳು ಒಟ್ಟಿಗೆ ಕೆಲಸ ಮಾಡುವ ವಾತಾವರಣದಲ್ಲಿ ಕಾರ್ಯನಿರ್ವಹಿಸುವುದು ಸವಾಲಿನದ್ದು ಎಂದು ಪಂತ್ ಪದೇ ಪದೇ ಹೇಳುತ್ತಿದ್ದರು. ಫ್ರಾಂಚೈಸಿಯ ಲೀಡರ್‌ಶಿಪ್ ಗ್ರೂಪ್‌ನಲ್ಲಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ನಿರ್ದೇಶಕ ಟಾಮ್ ಮೂಡಿ, ಸಹಾಯಕ ಕೋಚ್ ಲಾನ್ಸ್ ಕ್ಲೂಸನರ್ ಮತ್ತು ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಇದ್ದರು. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಇಂತಹ ವ್ಯವಸ್ಥೆ ಸಾಮಾನ್ಯವಾಗಿದ್ದರೂ, ಪಂತ್​ಗೆ ಈ ವ್ಯವಸ್ಥೆಯಲ್ಲಿ ಕಂಫರ್ಟಬಲ್ ಆಗಿರಲು ಸಾಧ್ಯವಾಗುತ್ತಿರಲಿಲ್ಲ.
ಸೀಸನ್ ಮುಂದುವರಿದಂತೆ ಈ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ವಿವಿಧ ಮೂಲಗಳಿಂದ ಬರುವ ಅತಿಯಾದ ಇನ್‌ಪುಟ್‌ಗಳ ಬಗ್ಗೆ ಪಂತ್ ಅಸಮಾಧಾನ ವ್ಯಕ್ತಪಡಿಸಿದರೆ, ಥಿಂಕ್ ಟ್ಯಾಂಕ್ ಸದಸ್ಯರು ತಂಡದ ನಾಯಕತ್ವ ಮತ್ತು ಪ್ರದರ್ಶನವನ್ನು ಸಾರ್ವಜನಿಕವಾಗಿ ಪ್ರಶ್ನಿಸುತ್ತಿದ್ದರು. ಒಂದು ಹಂತದಲ್ಲಿ, ಯೋಚನೆಗಳನ್ನು ಮಾಡುವುದು ಸುಲಭ, ಆದರೆ ಮೈದಾನದಲ್ಲಿ ಅದನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಱ ಎಂದು ಪಂತ್ ಹೇಳಿದ್ದು, ತಂಡದ ಒಳಗಿನ ಭಿನ್ನಾಭಿಪ್ರಾಯಗಳ ಪ್ರತಿಬಿಂಬವಾಗಿತ್ತು ಎನ್ನಲಾಗಿದೆ.
ಜನರು ಅಂದುಕೊಂಡಂತೆ ಪಂತ್ ಈ ನಿರ್ಧಾರವನ್ನು ಲಖನೌ ಕೊನೆಯ ಸ್ಥಾನ ಪಡೆದ ನಂತರ ತೆಗೆದುಕೊಂಡಿದ್ದಲ್ಲ, ಬದಲಿಗೆ ಸೀಸನ್‌ನ ದ್ವಿತೀಯಾರ್ಧದಲ್ಲೇ ತಾವೇ ನಾಯಕತ್ವದಿಂದ ಕೆಳಗಿಳಿಯುವುದಾಗಿ ಮ್ಯಾನೇಜ್‌ಮೆಂಟ್ ಮತ್ತು ಮಾಲೀಕರಿಗೆ ತಿಳಿಸಿದ್ದರು. ಆರಂಭದಲ್ಲಿ ಮ್ಯಾನೇಜ್‌ಮೆಂಟ್ ಇದನ್ನು ಮರುಪರಿಶೀಲಿಸುವಂತೆ ಪಂತ್ ಮನವೊಲಿಸಲು ಪ್ರಯತ್ನಿಸಿತಾದರೂ, ಪಂತ್ ತಮ್ಮ ನಿರ್ಧಾರಕ್ಕೆ ಜೋತು ಬಿದ್ದಿದ್ದರಿಂದ ಅಂತಿಮವಾಗಿ ಫ್ರಾಂಚೈಸಿ ಅವರ ವಿನಂತಿಯನ್ನು ಒಪ್ಪಿಕೊಂಡಿತು ಎಂದು ತಿಳಿದುಬಂದಿದೆ.
ಇದಕ್ಕೆ ಮುಖ್ಯ ಕಾರಣ ಪಂತ್ ಮತ್ತು ಮ್ಯಾನೇಜ್‌ಮೆಂಟ್ ನಡುವೆ ನಾಯಕನ ಪಾತ್ರದ ಬಗ್ಗೆ ಇದ್ದ ಭಿನ್ನ ದೃಷ್ಟಿಕೋನ. ಪಂತ್ ಯಾವಾಗಲೂ ತನ್ನ ಅಂತಃಪ್ರಜ್ಞೆಯನ್ನು ನಂಬಿ, ಮೈದಾನದ ನಿರ್ಧಾರಗಳ ಜವಾಬ್ದಾರಿಯನ್ನು ತಾನೇ ಹೊರಲು ಇಷ್ಟಪಡುವ ನಾಯಕ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾಗ ಸಪೋರ್ಟ್ ಸ್ಟಾಫ್‌ಗಿಂತ ಭಿನ್ನವಾದ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು ಮತ್ತು ಅದಕ್ಕೆ ಮ್ಯಾನೇಜ್‌ಮೆಂಟ್ ಪ್ರೋತ್ಸಾಹ ನೀಡುತ್ತಿತ್ತು. ಆದರೆ ಎಲ್‌ಎಸ್‌ಜಿಯಲ್ಲಿ ತಮ್ಮ ನಿರ್ಧಾರಗಳಿಗೆ ಸ್ವಾತಂತ್ರ್ಯ ಮತ್ತು ಅವಕಾಶಗಳು ಸೀಮಿತವಾಗಿವೆ ಎಂದು ಪಂತ್‌ಗೆ ಅನಿಸಿರಬೇಕು.

ಕೋಲ್ಕತ್ತಾ ವಿರುದ್ಧದ ಸೂಪರ್ ಓವರ್

ಇದು ಹೈ-ಪ್ರೆಶರ್ ಸಿಚುಯೇಷನ್‌ಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಿರಂಗವಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸೂಪರ್ ಓವರ್‌ನಲ್ಲಿ ನಿಕೋಲಸ್ ಪೂರನ್​ರನ್ನು ಬ್ಯಾಟಿಂಗ್‌ಗೆ ಕಳುಹಿಸುವ ನಿರ್ಧಾರದ ಬಗ್ಗೆ ಪಂತ್‌ಗೆ ಒಮ್ಮತವಿರಲಿಲ್ಲ. ಪೂರನ್ ಕಳಪೆ ಫಾರ್ಮ್‌ನಲ್ಲಿದ್ದ ಕಾರಣ, ಭರ್ಜರಿ ಫಾರ್ಮ್‌ನಲ್ಲಿದ್ದ ಆಯುಷ್ ಬದೋನಿಯನ್ನು ಕಣಕ್ಕಿಳಿಸಲು ಪಂತ್ ಬಯಸಿದ್ದರು, ಆದರೆ ಮ್ಯಾನೇಜ್‌ಮೆಂಟ್ ಬೇರೆ ಆಲೋಚನೆ ಮಾಡಿ ಪೂರನ್ ಕಣಕ್ಕಿಳಿಸಿತು. ಇದು ದೊಡ್ಡ ಸಂಘರ್ಷವಲ್ಲದಿದ್ದರೂ ಇಬ್ಬರ ನಡುವಿನ ವಿಭಿನ್ನ ದೃಷ್ಟಿಕೋನವನ್ನು ಎತ್ತಿ ತೋರಿಸಿತು. ಇದರೊಂದಿಗೆ ಸೀಸನ್‌ನಾದ್ಯಂತ ಹಿರಿಯ ಆಟಗಾರರೊಂದಿಗೂ ತಾಂತ್ರಿಕ ವಿಷಯಗಳಲ್ಲಿ ಪಂತ್ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ತಿಳಿದುಬಂದಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಚಿಂತೆ

ನಾಯಕತ್ವ ಮಾತ್ರವಲ್ಲದೆ, ವೈಯಕ್ತಿಕ ಬ್ಯಾಟಿಂಗ್‌ನಲ್ಲಿಯೂ ಪಂತ್ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಸೀಸನ್ ಎದುರಿಸಿದರು ಎಂದರೆ ತಪ್ಪಾಗದು. ರನ್ ಗಳಿಸಲು ಕಷ್ಟಪಡುತ್ತಿದ್ದ ಅವರಿಗೆ ತಂಡದ ಕಳಪೆ ಪ್ರದರ್ಶನದ ನಾಯಕತ್ವದ ಹೊರೆ ಮತ್ತಷ್ಟು ಒತ್ತಡ ಹೇರಿದ್ದು ಸುಳ್ಳಲ್ಲ. ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕತ್ವ ಎಂಬುದು ಅವರಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿತ್ತು. ಈಗ ಅವರ ಮೊದಲ ಆದ್ಯತೆ ಬ್ಯಾಟಿಂಗ್ ಲಯವನ್ನು ಕಂಡುಕೊಂಡು ರನ್ ಗಳಿಸುವ ಮೂಲಕ ಭಾರತ ಸೀಮಿತ ಓವರ್‌ಗಳ ತಂಡಕ್ಕೆ ಮರುಪ್ರವೇಶ ಮಾಡುವುದಾಗಿದೆ. ಪಂತ್ ದೃಷ್ಟಿಯಲ್ಲಿ ಐಪಿಎಲ್ ನಾಯಕತ್ವಕ್ಕಿಂತ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಅತ್ಯಂತ ಮುಖ್ಯವಾಗಿದೆ.
ಪಂತ್ ನಾಯಕತ್ವದಿಂದ ಕೆಳಗಿಳಿದಿರುವುದು ಲಖನೌ ತಂಡದಲ್ಲಿ ದೊಡ್ಡ ಪರಿವರ್ತನೆಗೆ ದಾರಿ ಮಾಡಿಕೊಟ್ಟಿದ್ದು, ನಾಯಕತ್ವ ಬಿಟ್ಟರೂ ಪಂತ್ ಒಪ್ಪಂದದ ಅವಧಿಯವರೆಗೆ ಆಟಗಾರನಾಗಿ ತಂಡದಲ್ಲೇ ಮುಂದುವರಿಯಲಿದ್ದಾರೆ ಮತ್ತು ಫ್ರಾಂಚೈಸಿ ಕೂಡ ಅವರನ್ನು ಆಟಗಾರನಾಗಿಯೇ ನೋಡುತ್ತಿದೆ. ಸದ್ಯ ಎಲ್​​ಎಸ್​ಜಿ ತಂಡಕ್ಕೆ ಹೊಸ ನಾಯಕನ ಹುಡುಕಾಟ ಆರಂಭವಾಗಿದ್ದು, ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮತ್ತು ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಾಮ್ ರೇಸ್‌ನಲ್ಲಿದ್ದಾರೆ(ಏಜೆನ್ಸೀಸ್​).