NDAs Strategy | ವಿಪಕ್ಷಗಳ ನಿದ್ದೆಗೆಡಿಸಿದೆ ಎನ್‌ಡಿಎ ಮ್ಯಾಜಿಕ್ ನಂಬರ್ ಸ್ಟ್ರಾಟಜಿ! 
ದೇಶ

ಟಿಎಂಸಿ ಬಂಡಾಯದ ಹಿಂದೆ ಅಡಗಿದೆಯೇ ‘ಸೂಪರ್ ಮೆಜಾರಿಟಿ’ ರಹಸ್ಯ..? ವಿಪಕ್ಷಗಳ ನಿದ್ದೆಗೆಡಿಸಿದೆ ಎನ್‌ಡಿಎ ಮ್ಯಾಜಿಕ್ ನಂಬರ್ ಸ್ಟ್ರಾಟಜಿ! | NDAs Strategy

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಾರಿ ಬಿರುಕು, ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜುಲೈ ಮೂರನೇ ವಾರದಲ್ಲಿ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕ (Delimitation Bill) ಹಾಗೂ ಒಂದು ದೇಶ, ಒಂದು ಚುನಾವಣೆ (One Nation, One Election) ನಂತಹ ಐತಿಹಾಸಿಕ ಮಸೂದೆಗಳನ್ನು ಮರು-ಮಂಡಿಸಿ, ಪಾಸ್ ಮಾಡಿಕೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತೆರೆಮರೆಯಲ್ಲಿ ಭಾರಿ ರಣತಂತ್ರ ರೂಪಿಸುತ್ತಿದೆ ಎಂದು ವರದಿಯಾಗಿದೆ.
ಇದಕ್ಕೆ ಪೂರಕವೆಂಬಂತೆ, ಟಿಎಂಸಿಯ 20 ಬಂಡಾಯ ಸಂಸದರು ಕೇಂದ್ರ ಸಚಿವ ಭೂಪೇಂದ್ರ ಯಾದವ್ ನಿವಾಸದಲ್ಲಿ ಸಭೆ ನಡೆಸಿದ್ದು, ಸಂಸತ್ತಿನಲ್ಲಿ ಎನ್‌ಡಿಎಗೆ ಬೆಂಬಲ ನೀಡಲು ಸಜ್ಜಾಗಿದ್ದಾರೆ. ಟಿಎಂಸಿಯ ಒಟ್ಟು 29 ಲೋಕಸಭಾ ಸಂಸದರಲ್ಲಿ 20 ಮಂದಿ ಬಂಡಾಯ ಎದ್ದಿರುವುದರಿಂದ, ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅವರು ಸುರಕ್ಷಿತವಾಗಿದ್ದಾರೆ. ಈ ಬಂಡಾಯಗಾರರು ಪ್ರತ್ಯೇಕ ಬಣವಾಗಿ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದರೆ, ಲೋಕಸಭೆಯಲ್ಲಿ ಎನ್‌ಡಿಎ ಬಲ ಮೊದಲ ಬಾರಿಗೆ 300ರ ಗಡಿ ದಾಟಲಿದೆ.

2/3 ಬಹುಮತಕ್ಕಾಗಿ ತಂತ್ರ: ಲೆಕ್ಕಾಚಾರ ಹೇಗಿದೆ..?

ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಪಾಸ್ ಮಾಡಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3) ವಿಶೇಷ ಬಹುಮತದ ಅಗತ್ಯವಿದೆ. ಕಳೆದ ಏಪ್ರಿಲ್‌ನಲ್ಲಿ ಇದೇ ಬಹುಮತದ ಕೊರತೆಯಿಂದಾಗಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಒಳಗೊಂಡ ತಿದ್ದುಪಡಿ ವಿಧೇಯಕವು ಕೇವಲ 54 ಮತಗಳ ಅಂತರದಿಂದ ಸೋತಿತ್ತು. ಆ ಸೋಲಿನಿಂದ ಪಾಠ ಕಲಿತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈ ಬಾರಿ ಸಂಖ್ಯಾಬಲವನ್ನು ಗಟ್ಟಿಗೊಳಿಸಲು ಮುಂದಾಗಿದೆ.
ಪ್ರಸ್ತುತ ಲೋಕಸಭೆಯ 543 ಸೀಟುಗಳ ಪೈಕಿ ಮೂರು ಸ್ಥಾನಗಳು ಖಾಲಿ ಇವೆ. ಹೀಗಾಗಿ 2/3ರ ಬಹುಮತಕ್ಕೆ 360 ಸಂಸದರ ಬೆಂಬಲ ಬೇಕು. ಎನ್‌ಡಿಎನ ಸದ್ಯದ ಬಲ 293 ಆಗಿದೆ.
ಟಿಎಂಸಿ ರೆಬೆಲ್ಸ್ ಬಲ: 20 ಬಂಡಾಯ ಸಂಸದರು ಕೈಜೋಡಿಸಿದರೆ ಎನ್‌ಡಿಎ ಬಲ 313 ಕ್ಕೆ ಏರಲಿದೆ.
ಡಿಎಂಕೆ ಲೆಕ್ಕಾಚಾರ: ಇತ್ತೀಚೆಗೆ ತಮಿಳುನಾಡು ಚುನಾವಣೆಯಲ್ಲಿ ಸೋತು, ಕಾಂಗ್ರೆಸ್‌ನಿಂದ ದೂರವಾಗಿರುವ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದೊಂದಿಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದ್ದು, ಒಂದು ವೇಳೆ ಡಿಎಂಕೆಯ 22 ಸಂಸದರು ವಿಷಯಾಧಾರಿತ ಬೆಂಬಲ ನೀಡಿದರೆ ಈ ಸಂಖ್ಯೆ 335ಕ್ಕೆ ತಲುಪಲಿದೆ.
ಶಿವಸೇನಾ (UBT): ಉದ್ಧವ್ ಠಾಕ್ರೆ ಬಣದ 9 ಸಂಸದರ ಪೈಕಿ 6 ಮಂದಿಯನ್ನು ಸೆಳೆಯಲು ಪ್ರಯತ್ನ ನಡೆಯುತ್ತಿದ್ದು, ಇದು ಯಶಸ್ವಿಯಾದರೆ ಬಲ 341 ಕ್ಕೆ ತಲುಪಲಿದೆ.
ಪಕ್ಷೇತರರ ಬೆಂಬಲ: ಕಳೆದ ಬಾರಿ ಸಿಕ್ಕ ಹಳೇ ಹೆಚ್ಚುವರಿ ಮತಗಳು ಹಾಗೂ ಪಕ್ಷೇತರರ ಬೆಂಬಲ ಸೇರಿದರೆ ಎನ್‌ಡಿಎ ಬಲ 348ಕ್ಕೆ ತಲುಪಲಿದ್ದು, ಮ್ಯಾಜಿಕ್ ನಂಬರ್‌ಗೆ ಕೇವಲ 12 ಮತಗಳಷ್ಟೇ ಬಾಕಿ ಉಳಿಯಲಿವೆ. ಇದನ್ನು ಸಣ್ಣ ಪಕ್ಷಗಳು ಹಾಗೂ ಕ್ರಾಸ್ ವೋಟಿಂಗ್ ಮೂಲಕ ಭರ್ತಿ ಮಾಡಲು ಬಿಜೆಪಿ ಗೇಮ್ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.

ರಾಜ್ಯಸಭೆಯಲ್ಲೂ ಎನ್‌ಡಿಎಗೆ ಆನೆ ಬಲ!

ಕೇವಲ ಲೋಕಸಭೆಯಷ್ಟೇ ಅಲ್ಲ, ಮೇಲ್ಮನೆಯಾದ ರಾಜ್ಯಸಭೆಯಲ್ಲೂ ಎನ್‌ಡಿಎ ಕಮಾಲ್ ಮಾಡುತ್ತಿದೆ. ಈಗಾಗಲೇ ಎನ್‌ಡಿಎ ಬಲ ರಾಜ್ಯಸಭೆಯಲ್ಲಿ 150ರ ಗಡಿ ದಾಟಿದೆ. ಅಲ್ಲಿ 2/3ರ ಬಹುಮತಕ್ಕೆ 164 ಮತಗಳ ಅಗತ್ಯವಿದೆ.
ಟಿಎಂಸಿಯ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಈಗಾಗಲೇ ರಾಜೀನಾಮೆ ನೀಡಿದ್ದು, ಅವರು ಬಿಜೆಪಿ ಬೆಂಬಲದೊಂದಿಗೆ ಮತ್ತೆ ಆಯ್ಕೆಯಾಗುವ ಸಾಧ್ಯತೆ ಇದೆ. ಅವರ ಹಾದಿಯಲ್ಲೇ ಇತರ ಟಿಎಂಸಿ ಸಂಸದರು ಕೂಡ ರಾಜೀನಾಮೆ ನೀಡಿ ಉಪಚುನಾವಣೆ ಮೂಲಕ ಮರು ಆಯ್ಕೆಯಾಗುವ ತಂತ್ರ ರೂಪಿಸಿದ್ದಾರೆ. ಇದರೊಂದಿಗೆ ಡಿಎಂಕೆಯ 8 ರಾಜ್ಯಸಭಾ ಸಂಸದರ ಬೆಂಬಲವೂ ಸಿಕ್ಕರೆ, ರಾಜ್ಯಸಭೆಯಲ್ಲೂ ಮೋದಿ ಸರ್ಕಾರಕ್ಕೆ ಯಾವುದೇ ಬಿಲ್ ಪಾಸ್ ಮಾಡುವುದು ಕಷ್ಟವಾಗುವುದಿಲ್ಲ.
ಒಟ್ಟಾರೆಯಾಗಿ, ಬಂಗಾಳದ ಟಿಎಂಸಿ ಬಿಕ್ಕಟ್ಟು ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೆ, ಪ್ರಮುಖ ಮಸೂದೆಗಳ ಜಾರಿಗೆ ದಾರಿಯಾಗುವ ಮುನ್ಸೂಚನೆ ನೀಡುತ್ತಿದೆ(ಏಜೆನ್ಸೀಸ್​).