Election Commission | ಬಲವಂತದ ಮತದಾನಕ್ಕೆ ದೆಹಲಿಯಿಂದಲೇ ಬ್ರೇಕ್​ ಹಾಕಿದ ಜ್ಞಾನೇಶ್ ಕುಮಾರ್ ಟೀಮ್​!  
ದೇಶ

ಇಸಿಐ ವಾರ್ ರೂಮ್ ಮ್ಯಾಜಿಕ್; ಬಲವಂತದ ಮತದಾನಕ್ಕೆ ದೆಹಲಿಯಿಂದಲೇ ಬ್ರೇಕ್​ ಹಾಕಿದ ಜ್ಞಾನೇಶ್ ಕುಮಾರ್ ಟೀಮ್​! | Election Commission

Election Commission: ಮೊದಲೆಲ್ಲಾ ಪಶ್ಚಿಮ ಬಂಗಾಳದ ಚುನಾವಣೆ ಎಂದರೆ ಹಿಂಸಾಚಾರ ಮತ್ತು ಅಕ್ರಮಗಳ ಸುದ್ದಿಯೇ ಹೆಚ್ಚಾಗಿ ಕೇಳಿಬರುತ್ತಿತ್ತು. ಆದರೆ ಈ ಬಾರಿ ಕೇಂದ್ರ ಚುನಾವಣಾ ಆಯೋಗವು ಪರಿಸ್ಥಿತಿಯನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ದೆಹಲಿಯ ಕಚೇರಿಯನ್ನೇ ಅತ್ಯಾಧುನಿಕ ವಾರ್ ರೂಮ್ ಆಗಿ ಪರಿವರ್ತಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ, ಬಂಗಾಳದ ಪ್ರತಿ ಮತಗಟ್ಟೆಯನ್ನು ಆಯೋಗದ ಕಣ್ಗವಾಲಿನಲ್ಲಿಡಲಾಗಿದೆ.
ಚುನಾವಣಾ ಆಯೋಗದ ಈ ವಾರ್ ರೂಮ್ ಆಕ್ಷನ್ ಸಿನಿಮಾದ ಸೆಟ್‌ನಂತೆ ಭಾಸವಾಗುತ್ತಿದ್ದು, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬಂಗಾಳದ ಮತಗಟ್ಟೆಗಳ ದೃಶ್ಯಗಳು ಇಲ್ಲಿನ ದೊಡ್ಡದಾದ ಪರದೆಗಳ ಮೇಲೆ ನೇರ ಪ್ರಸಾರವಾಗುತ್ತಿವೆ. ಮತದಾನದ ದಿನದಂದು ಬೆಳಿಗ್ಗೆ 6:00 ಗಂಟೆಗೆ ಕಾರ್ಯಾರಂಭ ಮಾಡುತ್ತಿದ್ದ ಈ ಕೇಂದ್ರದಲ್ಲಿ, ಹಿರಿಯ ಅಧಿಕಾರಿಗಳು ಪ್ರತಿ ಸೆಕೆಂಡ್‌ನ ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಯಾವುದೇ ಮತಗಟ್ಟೆಯಲ್ಲಿ ಸಣ್ಣ ಗೊಂದಲ ಕಂಡುಬಂದರೂ ತಕ್ಷಣವೇ ಅದನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿತ್ತು.

ಗಂಟೆಗೊಮ್ಮೆ ಕಟ್ಟುನಿಟ್ಟಿನ ತಪಾಸಣೆ

ಬರೀ ಮೇಲ್ವಿಚಾರಣೆ ಮಾಡುವುದಷ್ಟೆ ಅಲ್ಲದೇ, ಆಯೋಗವು ಪ್ರತಿ ಗಂಟೆಗೆ ಒಂದೊಂದು ಉದ್ದೇಶದೊಂದಿಗೆ ಕಾರ್ಯಾಚರಣೆ ನಡೆಸುತ್ತಿತ್ತು.
  • ಬೆಳಿಗ್ಗೆ 9:00 ಗಂಟೆಗೆ ಮೊದಲ ಹಂತದ ಮತದಾನದ ಮಾದರಿಗಳನ್ನು ವಿಶ್ಲೇಷಿಸಿ, ಎಲ್ಲಿಯೂ ಅಕ್ರಮ ನಡೆಯದಂತೆ ನೋಡಿಕೊಳ್ಳಲಾಯಿತು.
  • ಬೆಳಿಗ್ಗೆ 10:00 ಗಂಟೆಯಿಂದ ವೆಬ್‌ಕಾಸ್ಟಿಂಗ್ ಮೂಲಕ ಬರುವ ಎಚ್ಚರಿಕೆಗಳನ್ನು ಗಮನಿಸಿ, ದೆಹಲಿಯಿಂದಲೇ ಸೂಚನೆ ನೀಡಿ ಬಂಗಾಳದ ಅಕ್ರಮಗಳನ್ನು ತಡೆಯಲಾಯಿತು.
  • ಮಧ್ಯಾಹ್ನದ ವೇಳೆಗೆ ಸೂಕ್ಷ್ಮ ಪ್ರದೇಶಗಳನ್ನು ಮರು ಮೌಲ್ಯಮಾಪನ ಮಾಡಲಾಯಿತು. ಸಂಜೆ 4:00 ಗಂಟೆಯವರೆಗೂ ಪ್ರತಿ ಹಂತದಲ್ಲೂ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು (QRT) ಸನ್ನದ್ಧವಾಗಿದ್ದವು.

ವೆಬ್‌ಕಾಸ್ಟಿಂಗ್: ಪಾರದರ್ಶಕತೆಯ ಅಸ್ತ್ರ

ಈ ಬಾರಿಯ ಚುನಾವಣೆಯ ಯಶಸ್ಸಿನ ಹಿಂದಿನ ರಹಸ್ಯವೆಂದರೆ 100% ವೆಬ್‌ಕಾಸ್ಟಿಂಗ್ ವ್ಯವಸ್ಥೆ. ಮತಗಟ್ಟೆಯ ಪ್ರವೇಶ ದ್ವಾರಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳು, ಮತದಾರರು ಯಾವುದೇ ಬೆದರಿಕೆ ಅಥವಾ ಒತ್ತಡವಿಲ್ಲದೆ ಮತ ಚಲಾಯಿಸಲು ಬರುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸುತ್ತಿದ್ದವು. ಇದು ಮತಗಟ್ಟೆ ವಶಪಡಿಸಿಕೊಳ್ಳುವಿಕೆ (Booth Capturing) ಮತ್ತು ಬಲವಂತದ ಮತದಾನಕ್ಕೆ ಪೂರ್ಣವಾಗಿ ಬ್ರೇಕ್ ಹಾಕಿತು. ದೆಹಲಿಯಲ್ಲಿ ವಾರ್ ರೂಮ್ ಇದ್ದರೆ, ಇತ್ತ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿಯ ಕಚೇರಿಯು ಗೋಡೆಗಳ ತುಂಬಾ ಪರದೆಗಳನ್ನು ಅಳವಡಿಸಲಾಗಿತ್ತು. ಯಾವುದೋ ಸಿನಿಮಾದ ನಿಯಂತ್ರಣ ಕೊಠಡಿಯಂತೆ ಕಾಣುತ್ತಿತ್ತು. ದೆಹಲಿಯಲ್ಲಿ ಏನಾದರೂ ಅಕ್ರಮ ಪತ್ತೆಯಾದರೆ ತಕ್ಷಣವೇ ಕೋಲ್ಕತ್ತಾ ಕಚೇರಿಗೆ ಕರೆ ಹೋಗುತ್ತಿತ್ತು ಮತ್ತು ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳು ಕೆಲವೇ ನಿಮಿಷಗಳಲ್ಲಿ ಕ್ರಮ ಕೈಗೊಳ್ಳುತ್ತಿದ್ದರು.

ಮತದಾನದ ನಂತರದ ಹಿಂಸಾಚಾರಕ್ಕೆ ಬ್ರೇಕ್!

ಬಂಗಾಳದ ಚುನಾವಣೆಗಳಲ್ಲಿ ಮತದಾನ ಮುಗಿದ ಬಳಿಕ ಹಿಂಸಾಚಾರ ನಡೆಯುವುದು ಸಾಮಾನ್ಯ ಎಂಬಂತಾಗಿತ್ತು. ಆದರೆ ಈ ಬಾರಿ ಅದನ್ನು ತಡೆಯಲು ಆಯೋಗವು 700 ಕಂಪನಿಗಳ ಕೇಂದ್ರ ಪಡೆಗಳನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನದಂದು ಈ ಹೈಟೆಕ್ ವಾರ್ ರೂಮ್ ಮತ್ತೆ ತನ್ನ ಕಾರ್ಯ ಆರಂಭಿಸಲಿದೆ ಮತ್ತು ಫಲಿತಾಂಶ ಪ್ರಕಟವಾಗುವವರೆಗೂ 360 ಡಿಗ್ರಿ ಕಣ್ಗಾವಲು ಮುಂದುವರಿಯಲಿದೆ ಎಂದು ವರದಿಯಾಗಿದೆ(ಏಜೆನ್ಸೀಸ್​).