ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ 
ದೇಶ

ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ? ಯುಜಿಸಿ ಹೊಸ ನಿಯಮಗಳ ಕುರಿತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು? UGC

ಪ್ರಮುಖ ಮುಖ್ಯಾಂಶಗಳು

  • ಯುಜಿಸಿ ಉನ್ನತ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು 2026 ಹೆಸರಿನಲ್ಲಿ ನೂತನ ನಿಯಮಗಳ ಜಾರಿ
  • ಈ ನಿಯಮಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ
  • ಈ ನಿಯಮಗಳಿಂದ ಯಾವುದೇ ತಾರತಮ್ಯ ಉಂಟಾಗುವುದಿಲ್ಲ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ನೂತನ ನಿಯಮಗಳ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ನಿಯಮಗಳಿಂದ ಯಾವುದೇ ತಾರತಮ್ಯ ಉಂಟಾಗುವುದಿಲ್ಲ ಮತ್ತು ಯಾರೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಇತ್ತೀಚೆಗೆ ಹೊಸ ನಿಯಮಗಳನ್ನು ರೂಪಿಸಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು, 2026 ರ ಪ್ರಕಾರ ಇದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕುಂದುಕೊರತೆ ಪರಿಹಾರ ಮತ್ತು ಅನನುಕೂಲಕರ ಗುಂಪುಗಳನ್ನು ಬೆಂಬಲಿಸಲು ರಚನಾತ್ಮಕ ಚೌಕಟ್ಟನ್ನು ರೂಪಿಸುತ್ತದೆ.
ಆದರೆ ಯುಜಿಸಿಯ ಹೊಸ ನಿಯಮಗಳು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾಜಿಕ ಗುಂಪುಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿವೆ ಮತ್ತು ಯುಜಿಸಿ ನಿಯಮಗಳಲ್ಲಿ ಜಾತಿ ಆಧಾರಿತ ತಾರತಮ್ಯ ಎಂಬ ಪರಿಭಾಷೆಯನ್ನು ವ್ಯಾಖ್ಯಾನಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ದೆಹಲಿಯ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪ್ರಧಾನ ಕಚೇರಿಯ ಹೊರಗೆ ಮೇಲ್ಜಾತಿಯ ಸಮುದಾಯಗಳ ವಿದ್ಯಾರ್ಥಿಗಳು ಇಂದು ಪ್ರತಿಭಟನೆಯನ್ನು ಘೋಷಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು, ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಂದ ವರದಿಯಾದ ಬೃಹತ್ ವಿದ್ಯಾರ್ಥಿಗಳ ಅಶಾಂತಿಯ ನಂತರ ಪ್ರತಿಭಟನೆಗೆ ಕರೆ ನೀಡಲಾಯಿತು. ಇತ್ತೀಚೆಗೆ, ಹಿರಿಯ ಅಧಿಕಾರಿಯೊಬ್ಬರು ಮತ್ತು ಬಿಜೆಪಿ ಯುವ ಘಟಕದ ನಾಯಕರೊಬ್ಬರು ಈ ನೀತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.

ಯುಜಿಸಿ ಕಾಯ್ದೆ ಏನು ಹೇಳುತ್ತಿದೆ?

ಯುಜಿಸಿಯ ಹೊಸ ನಿಯಮಗಳ ಪ್ರಕಾರ, ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಸಮಾನ ಅವಕಾಶ ಕೇಂದ್ರವನ್ನು ಸ್ಥಾಪಿಸಬೇಕು ಮತ್ತು ನಾಗರಿಕ ಸಮಾಜದ ಗುಂಪುಗಳು, ಪೊಲೀಸ್ ಮತ್ತು ಜಿಲ್ಲಾಡಳಿತ, ಅಧ್ಯಾಪಕರು, ಸಿಬ್ಬಂದಿ, ಸ್ಥಳೀಯ ಮಾಧ್ಯಮ, ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಮನ್ವಯ ಸಾಧಿಸಬೇಕು. ಕಾನೂನು ನೆರವನ್ನು ಸುಗಮಗೊಳಿಸಲು ಕೇಂದ್ರವು ಜಿಲ್ಲಾ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸುತ್ತದೆ.
ಸಂಸ್ಥೆಯ ಮುಖ್ಯಸ್ಥರು ರಚಿಸಿದ ಸಮಾನ ಅವಕಾಶ ಕೇಂದ್ರವು ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅಂಗವಿಕಲ ವ್ಯಕ್ತಿಗಳು (ಪಿಡಬ್ಲ್ಯೂಡಿ), ಮಹಿಳೆಯರ ಪ್ರಾತಿನಿಧ್ಯಗಳನ್ನು ಹೊಂದಿರುತ್ತದೆ.
ಯುಜಿಸಿಯ ಹೊಸ ನಿಯಮಗಳ ಅಡಿಯಲ್ಲಿ, ಕೇಂದ್ರವು ಸಮಾನತೆಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ, ಅನನುಕೂಲಕರ ಗುಂಪುಗಳಿಗೆ ಶೈಕ್ಷಣಿಕ, ಆರ್ಥಿಕ ಮಾರ್ಗದರ್ಶನ ನೀಡಲು ಮತ್ತು ಅಧಿಕಾರಿಗಳು ಮತ್ತು ನಾಗರಿಕ ಸಮಾಜದೊಂದಿಗೆ ಸಮನ್ವಯ ಸಾಧಿಸಲು ಜವಾಬ್ದಾರವಾಗಿರುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲ ಸೃಷ್ಟಿಸಿರುವ ಯುಜಿಸಿ ನಿಯಮ

#ಶ್ಯೇಮ್​ಆನ್​ಯುಜಿಸಿ ಎಂಬ ಹ್ಯಾಷ್​ಟ್ಯಾಗ್​ X (ಟ್ವಿಟ್ಟರ್​) ನಲ್ಲಿ ಭಾರಿ ಪ್ರಚಾರ ಪಡೆಯುತ್ತಿದ್ದು, ಯುಜಿಸಿಯ ಹೊಸ ನಿಯಮಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಹೊಸ ಯುಜಿಸಿ ಈಕ್ವಿಟಿ ನಿಯಮಗಳು 2026,ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರದ ಅಪರಾಧಿಗಳು ಎಂದು ಬ್ರಾಂಡ್ ಮಾಡುತ್ತದೆ. ಕೇವಲ ಮೀಸಲಾತಿ ಇಲ್ಲದ ಕುಟುಂಬಗಳಲ್ಲಿ ಜನಿಸಿದ ಕಾರಣಕ್ಕಾಗಿ ನಮಗೆ ಸುಳ್ಳು ಆರೋಪಗಳಿಂದ ಯಾವುದೇ ರಕ್ಷಣೆ ಇಲ್ಲದಂತಾಗಿದ್ದು, ಇದು ಕಾಲೇಜ್​ ಕ್ಯಾಂಪಸ್​ನ್ನು ಯುದ್ಧಭೂಮಿಯಾಗಿ ಬದಲಾಯಿಸುವ ನಿಯಮಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ,(ಏಜನ್ಸೀಸ್​​​).