Cemetery 
ದೇಶ

ಸ್ಮಶಾನದಲ್ಲಿ ಅಮಾನವೀಯ ಕೃತ್ಯ: ಚಿತಾಭಸ್ಮ ಮೈ ಹಚ್ಚಿಕೊಂಡು ಶವದ ಬುರುಡೆ ಹೊತ್ತೊಯ್ದ ವ್ಯಕ್ತಿ! ಮುಂದೆನಾಯ್ತು..? | Cemetery

ಮಧ್ಯಪ್ರದೇಶ: ಮನುಷ್ಯತ್ವವೇ ನಾಚುವಂತಹ ಘಟನೆಯೊಂದು ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ನಡೆದಿದೆ. ಸ್ಮಶಾನದಲ್ಲಿ ಉರಿಯುತ್ತಿದ್ದ ಚಿತೆಯನ್ನು ಅಪವಿತ್ರಗೊಳಿಸಿದ ವ್ಯಕ್ತಿಯೊಬ್ಬ, ಚಿತಾಭಸ್ಮದಿಂದ ಸ್ನಾನ ಮಾಡಿ,(ಮೈ ಹಚ್ಚಿಕೊಂಡು) ಮೃತರ ಬುರುಡೆ ಹಾಗೂ ಮೂಳೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಮನೆಗೆ ಹೊತ್ತೊಯ್ದಿದ್ದಾನೆ. ಈ ಅಘೋರಿ ಸದೃಶ ಕೃತ್ಯದಿಂದ ಕೆರಳಿದ ಗ್ರಾಮಸ್ಥರು ಆತನಿಗೆ ಧರ್ಮದೇಟು ನೀಡಿರುವುದಲ್ಲದೆ, ಇಡೀ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಹೌದು, ದತಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆದಿತ್ತು. ಚಿತೆ ಇನ್ನೂ ಉರಿಯುತ್ತಿದ್ದಾಗಲೇ ಅಲ್ಲಿಗೆ ಬಂದ ಆರೋಪಿ, ಚಿತೆಯ ಪವಿತ್ರತೆಯನ್ನು ಹಾಳು ಮಾಡಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ ಉರಿಯುತ್ತಿದ್ದ ಚಿತೆಯ ಭಸ್ಮವನ್ನು (ಬೂದಿ) ತನ್ನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಸುಡುತ್ತಿದ್ದ ಶವದ ತಲೆಬುರುಡೆ ಮತ್ತು ಕೆಲವು ಎಲುಬುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ತನ್ನ ಮನೆಗೆ ಕೊಂಡೊಯ್ದಿದ್ದಾನೆ.

ಗ್ರಾಮಸ್ಥರ ಆಕ್ರೋಶ ಮತ್ತು ಹಿಂಸಾಚಾರ

ಈ ವಿಲಕ್ಷಣ ಮತ್ತು ಅಸಹ್ಯಕರ ವರ್ತನೆಯನ್ನು ಕಂಡ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ನೂರಾರು ಜನರು ಆತನ ಮನೆಯ ಮುಂದೆ ಜಮಾಯಿಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮತ್ತು ಮೃತ ಆತ್ಮಕ್ಕೆ ಅಪಮಾನ ಮಾಡಿದ್ದಕ್ಕಾಗಿ ಆಕ್ರೋಶಗೊಂಡ ಜನಸಮೂಹವು ಆರೋಪಿಯ ಮೇಲೆ ಹಲ್ಲೆ ಮಾಡಿದೆ. ಈ ವೇಳೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸಾಮಾಜಿಕ ಬಹಿಷ್ಕಾರದ ನಿರ್ಧಾರ

ಘಟನೆಯ ಬಳಿಕ ಗ್ರಾಮದ ಹಿರಿಯರು ಮತ್ತು ಪಂಚಾಯಿತಿ ತುರ್ತು ಸಭೆ ನಡೆಸಿತು. ಆರೋಪಿಯ ಈ ಕೃತ್ಯವು ಇಡೀ ಗ್ರಾಮಕ್ಕೆ ಕಳಂಕ ತಂದಿದೆ ಎಂದು ಅಭಿಪ್ರಾಯಪಟ್ಟ ಗ್ರಾಮಸ್ಥರು, ಆರೋಪಿ ಮತ್ತು ಆತನ ಸಂಪೂರ್ಣ ಕುಟುಂಬವನ್ನು ಗ್ರಾಮದಿಂದ ಹೊರಗಿಡಲು ನಿರ್ಧರಿಸಿದ್ದಾರೆ. ಆ ಕುಟುಂಬದೊಂದಿಗೆ ಯಾರೂ ಯಾವುದೇ ವ್ಯವಹಾರ ಮಾಡಬಾರದು ಮತ್ತು ಅವರಿಗೆ ಯಾವುದೇ ನೆರವು ನೀಡಬಾರದು ಎಂದು ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ.

ಪೊಲೀಸ್ ಕಾರ್ಯಾಚರಣೆ

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ಮಾನಸಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳದಂತೆ ಪೊಲೀಸರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್​).