ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
- ಕೇಸ್ವಾಪಸ್ ಪಡೆಯುವಂತೆ ಯುವಕನ ಮೇಲೆ ಹಲ್ಲೆ
- ಕಬ್ಬಿಣದ ರಾಡ್ ಹಾಗೂ ಲಾಠಿಗಳಿಂದ ಥಳಿಸಿದ ಆರೋಪ
- ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿಗಳು
ಉತ್ತರ ಪ್ರದೇಶ: ಹಳೆಯ ಪ್ರಕರಣವೊಂದನ್ನು ಹಿಂಪಡೆಯುವಂತೆ ಒತ್ತಾಯಿಸಿ ಯುವಕನೊಬ್ಬನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ನಡೆದಿದೆ. ವಾಜಿದ್‌ಪುರ ಮಾರುಕಟ್ಟೆಯಲ್ಲಿ ನಡೆದಿರುವ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು, ನಗಲಾ ಭಾನಚಂದ್ ನಿವಾಸಿ ಮುನೇಸ್ ಕುಮಾರ್ ಅವರ ಪುತ್ರ ಶಿವ ಕುಮಾರ್ ಮೇಲೆ ಭೀಕರ ಹಲ್ಲೆ ಮಾಡಲಾಗಿದೆ. ಕೆಲಸದ ನಿಮಿತ್ತ ವಾಜಿದ್‌ಪುರ ಮಾರುಕಟ್ಟೆಗೆ ತೆರಳಿದ್ದ ವೇಳೆ ನಾಲ್ಕೈದು ಮಂದಿ ಆರೋಪಿಗಳು ಅವರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ಹಾಗೂ ಬಡಿಗೆಗಳಿಂದ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕುತ್ತಿಗೆಗೆ ಟಾವೆಲ್ ಹಾಕಿ ಎಳೆದಾಡಿದ ಆರೋಪಿಗಳು
ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಶಿವ ಕುಮಾರ್ ಕುತ್ತಿಗೆಗೆ ಟಾವೆಲ್ನಿಂದ ಕುಣಿಕೆ ಫಂದಾ ಹಾಕಿ ರಸ್ತೆಯಲ್ಲಿ ಎಳೆದಾಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಕೋರ್ಟ್‌ಗೆ ಹೋಗಬೇಡ ಎಂದು ಹಲ್ಲೆ?
ಈ ಹಲ್ಲೆಯ ಹಳೆಯ ವಿವಾದವೇ ಕಾರಣ ಎಂದು ಸಂತ್ರಸ್ತನ ತಂದೆ ಆರೋಪಿಸಿದ್ದಾರೆ. ಆರೋಪಿಗಳೊಂದಿಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಆಗಸ್ಟ್ 28ರಂದು ನಡೆಯಲಿರುವ ವಿಚಾರಣೆಗೆ ಶಿವ ಕುಮಾರ್ ಹಾಜರಾಗದಂತೆ ತಡೆಯುವುದು ಹಾಗೂ ಹಳೆಯ ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹೇರುವುದು ಹಲ್ಲೆಯ ಉದ್ದೇಶವಾಗಿತ್ತು ಎಂದು ಅವರು ದೂರಿದ್ದಾರೆ.
ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಶಿವ ಕುಮಾರ್ ಅವರನ್ನು ಸಿಕಂದರಾರಾವ್ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ರೆಫರ್ ಮಾಡಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ,(ಏಜೆನ್ಸೀಸ್).