ಇನ್‌ಫ್ಲೇಷನ್ ಮ್ಯಾನ್ ಮೋದಿ ಮತ್ತೆ ಸ್ಟ್ರೈಕ್ ಮಾಡಿದ್ದಾರೆ! ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ!
ನವದೆಹಲಿ: ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಮುಕ್ತಾಯಗೊಳ್ಳುತ್ತಿದ್ದಂತೆಯೇ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸೋಮವಾರ (ಮೇ,25) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವ್ಯಂಗ್ಯವಾಡಿರುವ ರಾಹುಲ್ ಗಾಂಧಿ, ಇನ್‌ಫ್ಲೇಷನ್ ಮ್ಯಾನ್ ಮೋದಿ ಮತ್ತೆ ಸ್ಟ್ರೈಕ್ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಜೆಪಿ ನೀತಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ದೇಶ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಂತುಗಳಲ್ಲಿ ಬೆಲೆ ಏರಿಸಿ ಸಾರ್ವಜನಿಕರ ಜೇಬು ಲೂಟಿ ಮಾಡುತ್ತಿದ್ದಾರೆ: ರಾಹುಲ್ ಆಕ್ರೋಶ
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾದ ಬೆನ್ನಲ್ಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಹಣದುಬ್ಬರದ ಸರದಾರ ಮೋದಿ ಮತ್ತೆ ಜನಸಾಮಾನ್ಯರ ಮೇಲೆ ಮುಗಿಬಿದ್ದಿದ್ದಾರೆ. ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಒಮ್ಮೆಗೆ ಏರಿಸದೆ ಕಂತುಗಳಲ್ಲಿ ಏರಿಸುತ್ತಿದ್ದಾರೆ. ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ಅವರ ಜೇಬನ್ನು ಅತ್ಯಂತ ಚಾಣಾಕ್ಷತನದಿಂದ ಲೂಟಿ ಮಾಡುವುದೇ ಇದರ ಹಿಂದಿರುವ ಅಸಲಿ ತಂತ್ರ ಎಂದು ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ರಾಗಾ, ದೇಶದಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ನಾನು ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಎಚ್ಚರಿಸುತ್ತಲೇ ಇದ್ದೆ. ಆದರೆ ಮೋದಿ ಅವರು ಎಂದಿನಂತೆ ಚುನಾವಣೆಗಳ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು. ಈಗ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬರೋಬ್ಬರಿ 8 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯ ಸರಣಿ ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಚುನಾವಣೆಯಲ್ಲಿ ಸುಳ್ಳು ಭರವಸೆ, ನಂತರ ಜೇಬಿಗೆ ಕತ್ತರಿ!"
ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿದ ರಾಹುಲ್ ಗಾಂಧಿ, ಇನ್‌ಫ್ಲೇಷನ್ ಮ್ಯಾನ್ ಮೋದಿ ಅವರ ಏಕೈಕ ಕೆಲಸವೆಂದರೆ, ಚುನಾವಣೆಗಳು ಬಂದಾಗ ಜನರಿಗೆ ಬಣ್ಣ ಬಣ್ಣದ ಸುಳ್ಳು ಭರವಸೆಗಳನ್ನು ನೀಡುವುದು ಮತ್ತು ಚುನಾವಣೆಗಳು ಮುಗಿದ ತಕ್ಷಣ ಸಾರ್ವಜನಿಕರ ಜೇಬಿನ ಮೇಲೆ ನಿರಂತರವಾಗಿ ಆರ್ಥಿಕ ದಾಳಿ ನಡೆಸುವುದು ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಕೂಡ ಪ್ರಧಾನಿ ಮೋದಿ ಅವರನ್ನು ಹಣದುಬ್ಬರದ ಸರದಾರ ಎಂದು ಜರೆದಿದ್ದು, ವ್ಯವಸ್ಥಿತವಾಗಿ ಜನಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದೆ.
ದೇಶಾದ್ಯಂತ ಇಂಧನ ದರಗಳ ಸರಣಿ ಏರಿಕೆಯ ಶಾಕ್!
ಕಳೆದ ಎರಡು ವಾರಗಳ ಅವಧಿಯಲ್ಲಿ ಸೋಮವಾರ (ಮೇ, 25) ದೇಶದಲ್ಲಿ ಬರೋಬ್ಬರಿ ನಾಲ್ಕನೇ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಪರಿಷ್ಕರಿಸಲಾಗಿದೆ. ತೈಲ ಕಂಪನಿಗಳು ಮೇ 15 ರವರೆಗೆ ದರಗಳನ್ನು ಸ್ಥಗಿತಗೊಳಿಸಿದ್ದವು, ಆದರೆ ಮೇ 15 ರಿಂದ ನಿಯಮಿತ ದರ ಪರಿಷ್ಕರಣೆ ಆರಂಭವಾದಾಗಿನಿಂದ ಇಂಧನ ಬೆಲೆಗಳು ಪ್ರತಿ ಲೀಟರ್‌ಗೆ ಸುಮಾರು 7.5 ರೂಪಾಯಿಗಳಷ್ಟು ಭಾರಿ ಏರಿಕೆ ಕಂಡಿವೆ.
ಸೋಮವಾರದ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2.61 ರೂಪಾಯಿ ಏರಿಕೆಯಾಗಿ 102.12 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 2.71 ರೂಪಾಯಿ ಹೆಚ್ಚಳವಾಗಿ 95.20 ರೂಪಾಯಿಗೆ ತಲುಪಿದೆ. ಇನ್ನು ಕರ್ನಾಟಕದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಇತರೆ ಪ್ರಮುಖ ನಗರಗಳಲ್ಲೂ ತೈಲ ದರಗಳು ಶತಕದ ಗಡಿಯನ್ನು ದಾಟಿ ಮುನ್ನುಗ್ಗುತ್ತಿದ್ದು, ಮಧ್ಯಮ ವರ್ಗದ ಜನರ ಬಜೆಟ್ ಸಂಪೂರ್ಣವಾಗಿ ಬುಡಮೇಲಾಗಿದೆ.
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾರ್ವಜನಿಕರಿಗೆ, ಇಂಧನ ದರಗಳ ಈ ನಿರಂತರ ಸರಣಿ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸಂಸತ್ತಿನ ಮುಂಬರುವ ಅಧಿವೇಶನಗಳಲ್ಲೂ ಈ ವಿಷಯ ಭಾರಿ ರಾಜಕೀಯ ಚಂಡಮಾರುತ ಸೃಷ್ಟಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).