Nitish Mishra | ಬಿಹಾರದ ಮಾಜಿ ಕೈಗಾರಿಕಾ ಸಚಿವ ನಿತೀಶ್ ಮಿಶ್ರಾ ( ಕೃಪೆ-X)
ಪಟನಾ: ಬಿಹಾರದ ನೂತನ ಮುಖ್ಯಮಂತ್ರಿ ನಿತೀಶ್ ಕುಮಾರ್ರ ಹೊಸ ಸಚಿವ ಸಂಪುಟದಿಂದ ಮಾಜಿ ಕೈಗಾರಿಕಾ ಸಚಿವ ನಿತೀಶ್ ಮಿಶ್ರಾರನ್ನು ಕೈ ಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮಿಶ್ರಾರ ಹಿಂದಿನ ಸರ್ಕಾರದಲ್ಲಿ ಸಾಧನೆ, ಬಿಹಾರದ ಕೈಗಾರಿಕಾ ಅಭಿವೃದ್ಧಿಯ ಸ್ಥಿತಿಯನ್ನು ಗಮನಿಸಿದರೆ ಹೊರಗಿಟ್ಟಿರುವುದರ ಹಿಂದಿನ ತರ್ಕವೇನು ಎಂದು ಅನೇಕರು ಪ್ರಶ್ನಿಸಿದ್ದಾರೆ.
ಮಧುಬನಿ ಜಿಲ್ಲೆಯ ಝಂಝಾರ್‌ಪುರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮಿಶ್ರಾ, ರಾಜಕೀಯ ಹಿನ್ನಲೆ ಇರುವು ಕುಟುಂಬದಿಂದಲೇ ಬಂದವರು. ಇವರು ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರ ಮಗ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಲಲಿತ್ ನಾರಾಯಣ್ ಮಿಶ್ರಾ ಅವರ ಸೋದರಳಿಯ ಎನ್ನಲಾಗಿದೆ.
ನಿತೀಶ್ ಮಿಶ್ರಾ ಭಾರತ ಮತ್ತು ನೆದರ್‌ಲ್ಯಾಂಡ್ಸ್‌ನ ವಿದ್ಯಾಭ್ಯಾಸ ಮುಗಿಸಿದ್ದು, ಎಂಬಿಎ ಪದವಿ ಪಡೆದಿದ್ದಾರೆ, ಯುಕೆಯ ಹಲ್ ವಿಶ್ವವಿದ್ಯಾಲಯದಿಂದ ಜಾಗತಿಕ ರಾಜಕೀಯ ಆರ್ಥಿಕತೆಯಲ್ಲಿ ಪಿಜಿ ಡಿಪ್ಲೊಮಾ ಪಡೆದಿದ್ದಾರೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಶಾಲೆಯಲ್ಲಿ ಕಾರ್ಯನಿರ್ವಾಹಕ ನಾಯಕತ್ವ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಿಶ್ರಾ, ಬಿಹಾರ ಮೂಲದ ಆರ್ಥಿಕ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರು ಮತ್ತು ಮುಜಫರ್ಪುರದ ನಿರ್ವಹಣಾ ಕಾಲೇಜಿನಲ್ಲಿ ಆಡಳಿತಾತ್ಮಕ ಜವಾಬ್ದಾರಿ ನಿಭಾಯಿಸಿದ್ದಾರೆ. 2005 ರಿಂದ 2015 ರವರೆಗೆ ಬಿಹಾರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ವಿಪತ್ತು ನಿರ್ವಹಣೆ, ಸ್ವತಂತ್ರ ಉಸ್ತುವಾರಿ ಸಹಾಯಕ ಸಚಿವರಾಗಿ ಮತ್ತು ಕಬ್ಬು ಕೈಗಾರಿಕೆಗಳು, ಸ್ವತಂತ್ರ ಉಸ್ತುವಾರಿ ಸಹಾಯಕ ಸಚಿವರಾಗಿ ಸೇರಿದಂತೆ ಅನೇಕ ಖಾತೆಗಳನ್ನು ವಹಿಸಿಕೊಂಡಿದ್ದರು.
ಬಿಜೆಪಿಯ ಬಿಹಾರ ಘಟಕದ ಉಪಾಧ್ಯಕ್ಷ
ನೂತನ ಸಚಿವರ ಪಟ್ಟಿ ಪ್ರಕಟವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣದ ಬಳಕೆದಾರರು ಮಿಶ್ರಾರ ಹಿಂದಿನ ಅಭಿವೃದ್ದಿ ಕಾರ್ಯಗಳನ್ನು ಉಲ್ಲೇಖಿಸಿದ್ದು, ಮಿಶ್ರಾ, ದಶಕಗಳಿಂದ ಬಿಹಾರವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಿದ್ದರು. ಹಲವಾರು ಕಷ್ಟಗಳ ನಡುವೆಯೂ ಕಾರ್ಮಿಕರು ಭಾರತದ ಎಲ್ಲಾ ಭಾಗಗಳಿಗೆ ವಲಸೆ ಹೋಗುವ ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಒತ್ತಾಯಿಸುತ್ತಿದ್ದರು ಎಂದಿದ್ದಾರೆ.
ನಿತೀಶ್ ಮಿಶ್ರಾರ ಕಡೆಗಣನೆ ಕುರಿತು ನಿರಾಶೆಯನ್ನು ವ್ಯಕ್ತಪಡಿಸಿದ ಉದ್ಯಮಿ ಅವಿನಾಶ್ ಕೆ ಝಾ, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬಿಹಾರದ ಹೊಸ ಸಚಿವ ಸಂಪುಟಕ್ಕೆ ನಿತೀಶ್ ಮಿಶ್ರಾ ಅವರನ್ನು ಸೇರಿಸಿಕೊಳ್ಳದಿರುವುದು ನಿರಾಶಾದಾಯಕ ನಡೆಯಾಗಿದೆ, ಕೈಗಾರಿಕಾ ಸಚಿವರಾಗಿ ಕಾರ್ಯ ಶ್ಲಾಘನೀಯ, ಹೂಡಿಕೆ ಮತ್ತು ಬೆಳವಣಿಗೆಗೆ ಚಾಲನೆ ನೀಡಲು ರಾಜ್ಯಕ್ಕೆ ಅವರಂತಹ ನಾಯಕರ ಅವಶ್ಯಕತೆ ಇದೆ, ಬಿಜೆಪಿಯಿಂದ ಇದು ನಿರಾಶಾದಾಯಕ ನಡೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ನಾಯಕರುಗಳು ಭಾಗವಹಿಸಿದ್ದರು(ಏಜೆನ್ಸೀಸ್).