ಭಾರತ - ಇಂಡೋನೇಷ್ಯಾ ರಕ್ಷಣಾ ಒಪ್ಪಂದ 
ದೇಶ

ಆಪರೇಷನ್​ ಸಿಂಧೂರ್​ ಬಳಿಕ ಭಾರತದಿಂದ ಬ್ರಹ್ಮೋಸ್​ ಮಿಸೈಲ್​ ಖರೀದಿಗೆ ಮುಂದಾದ ಇಂಡೋನೇಷ್ಯಾ | Brahmos

ಪ್ರಮುಖ ಮುಖ್ಯಾಂಶಗಳು

  • ಭಾರತ - ಇಂಡೋನೇಷ್ಯಾ ರಕ್ಷಣಾ ಒಪ್ಪಂದ
  • 350 ಮಿಲಿಯನ್​ ಡಾಲರ್​ ನೀಡಿ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಮುಂದಾದ ಇಂಡೋನೇಷ್ಯಾ
  • ಆಪರೇಷನ್​ ಸಿಂಧೂರ್​ನಲ್ಲಿ ಅಬ್ಬರಿಸಿದ್ದ ಭಾರತದ ಬ್ರಹ್ಮೋಸ್ ಮಿಸೈಲ್​
ನವದೆಹಲಿ: ಭಾರತೀಯ ರಕ್ಷಣಾ ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ದಾಖಲಾಗಿದ್ದು, ವಿಶ್ವದ ಅತ್ಯಂತ ವೇಗದ ಮತ್ತು ನಿಖರವಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್​(Brahmos)ನ್ನು ಖರೀದಿಸಲು ಇಂಡೋನೇಷ್ಯಾ ಅಂತಿಮವಾಗಿ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಂಡೋನೇಷ್ಯಾ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ರಿಕೊ ರಿಕಾರ್ಡೊ ಸಿರೈಟ್ ಈ ಮಹತ್ವದ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಏನಿದು ಬ್ರಹ್ಮೋಸ್ ಡೀಲ್?

ಕಳೆದ ಹಲವು ತಿಂಗಳುಗಳಿಂದ ಎರಡೂ ದೇಶಗಳ ನಡುವೆ ನಡೆಯುತ್ತಿದ್ದ ಸಮಾಲೋಚನೆಗಳು ಇದೀಗ ಅಂತಿಮವಾಗಿದೆ. ಸುಮಾರು 200 ಮಿಲಿಯನ್ ಡಾಲರ್‌ನಿಂದ 350 ಮಿಲಿಯನ್ ಡಾಲರ್‌ವರೆಗಿನ ಮೌಲ್ಯದ ಈ ಒಪ್ಪಂದವು, ಇಂಡೋನೇಷ್ಯಾದ ಮಿಲಿಟರಿ ಸಾಮರ್ಥ್ಯವನ್ನು, ವಿಶೇಷವಾಗಿ ಕಡಲ ರಕ್ಷಣಾ ವಲಯದಲ್ಲಿ ಆಧುನೀಕರಿಸಲು ಭಾರಿ ನೆರವಾಗಲಿದೆ. ಈಗಾಗಲೇ ಫಿಲಿಪೈನ್ಸ್ ಬ್ರಹ್ಮೋಸ್ ಕ್ಷಿಪಣಿ ಖರೀದಿಸಿರುವ ಆಗ್ನೇಯ ಏಷ್ಯಾದ ಮೊದಲ ರಾಷ್ಟ್ರವಾಗಿದ್ದರೆ, ಈಗ ಇಂಡೋನೇಷ್ಯಾ ಕೂಡ ಭಾರತದ ರಕ್ಷಣಾ ಮಿತ್ರರ ಪಟ್ಟಿಗೆ ಸೇರ್ಪಡೆಯಾಗಿದೆ.
ಬ್ರಹ್ಮೋಸ್ ಏಕೆ ವಿಶ್ವದ ಗಮನ ಸೆಳೆಯುತ್ತಿದೆ?
ಬ್ರಹ್ಮೋಸ್ ಎಂದರೆ ಕೇವಲ ಒಂದು ಕ್ಷಿಪಣಿಯಲ್ಲ; ಇದು ಭಾರತದ ಸ್ವಾವಲಂಬಿ ರಕ್ಷಣಾ ಶಕ್ತಿಯ ಪ್ರತೀಕ. ಭಾರತ ಮತ್ತು ರಷ್ಯಾ ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಈ ಕ್ಷಿಪಣಿ ಶಬ್ದದ ವೇಗಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ವೇಗದಲ್ಲಿ ಸಾಗಬಲ್ಲದಾಗಿದ್ದು, ಇದನ್ನು ಭೂಮಿ, ಯುದ್ಧನೌಕೆ, ಜಲಾಂತರ್ಗಾಮಿ ಮತ್ತು ಸುಖೋಯ್-30 ಎಂಕೆಐ ನಂತಹ ಫೈಟರ್ ಜೆಟ್‌ಗಳಿಂದಲೂ ಉಡಾವಣೆ ಮಾಡಬಹುದು.

ಆಪರೇಷನ್ ಸಿಂದೂರ್: ಬ್ರಹ್ಮೋಸ್‌ನ ನಿಜವಾದ ಪರಾಕ್ರಮ!

ಇತ್ತೀಚಿಗೆ ಭಾರತ ನಡೆಸಿದ್ದ ಆಪರೇಷನ್ ಸಿಂದೂರ್​ನಲ್ಲಿ ಈ ಕ್ಷಿಪಣಿಯ ಮಾರಕ ಸಾಮರ್ಥ್ಯವನ್ನು ಇಡೀ ಜಗತ್ತು ಕಂಡಿದೆ. ಪಾಕಿಸ್ತಾನದ ಹಿಡಿತದಲ್ಲಿರುವ ಪ್ರದೇಶದ ಒಳಗೆ ನುಗ್ಗಿ, ಭಯೋತ್ಪಾದಕರ ನೆಲೆಗಳು ಮತ್ತು ಕಮಾಂಡ್ ಕೇಂದ್ರಗಳನ್ನು ಬ್ರಹ್ಮೋಸ್ ಕ್ಷಿಪಣಿಗಳು ಕ್ಷಣಮಾತ್ರದಲ್ಲಿ ಚಿಂದಿ ಉಡಾಯಿಸಿದ್ದವು. ಈ ಕಾರ್ಯಾಚರಣೆಯ ಯಶಸ್ಸಿನ ನಂತರ, ಜಾಗತಿಕವಾಗಿ ಬ್ರಹ್ಮೋಸ್‌ಗಾಗಿ ಬೇಡಿಕೆ ಗಗನಕ್ಕೇರಿದೆ.

ಭಾರತದ ಜಾಗತಿಕ ರಕ್ಷಣಾ ರಾಯಭಾರಿ

ಭಾರತ ಈಗ ಕೇವಲ ಅಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶವಲ್ಲ, ಬದಲಿಗೆ ರಫ್ತು ಮಾಡುವ ದೇಶವಾಗಿ ಬೆಳೆದಿದೆ. ಫಿಲಿಪೈನ್ಸ್‌ಗೆ ಮೊದಲ ಬ್ಯಾಚ್‌ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಲುಪಿಸಿರುವ ಭಾರತ, ಇದೀಗ ಇಂಡೋನೇಷ್ಯಾದೊಂದಿಗೆ ಕೈಜೋಡಿಸಿದೆ. ಅಲ್ಲದೆ, ವಿಯೆಟ್ನಾಂ ಸೇರಿದಂತೆ ಇನ್ನೂ ಹಲವು ದೇಶಗಳು ಬ್ರಹ್ಮೋಸ್ ಖರೀದಿಗೆ ಭಾರತದೊಂದಿಗೆ ಮಾತುಕತೆ ನಡೆಸುತ್ತಿವೆ,(ಏಜನ್ಸೀಸ್​).