ಇಂಡೋ-ಅಫ್ಘಾನ್ ಟೆಸ್ಟ್​: ರಾಹುಲ್, ಗಿಲ್ ಆಕರ್ಷಕ ಶತಕ; ಮೊದಲ ದಿನವೇ ಟೀಮ್ ಇಂಡಿಯಾ ಬೃಹತ್ ಮೊತ್ತ!  
ದೇಶ

ಇಂಡೋ-ಅಫ್ಘಾನ್ ಟೆಸ್ಟ್​: ರಾಹುಲ್, ಗಿಲ್ ಆಕರ್ಷಕ ಶತಕ; ಮೊದಲ ದಿನವೇ ಟೀಮ್ ಇಂಡಿಯಾ ಬೃಹತ್ ಮೊತ್ತ! INDvAFG

ಚಂಡೀಗಢ: ನ್ಯೂ ಚಂಡೀಗಢದ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತೀಯ(INDvAFG) ಬ್ಯಾಟರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ದಿನದ ಆಟದ ಮುಕ್ತಾಯಕ್ಕೆ ೩ ವಿಕೆಟ್ ಕಳೆದುಕೊಂಡು ೩೬೮ ರನ್‌ಗಳ ಬೃಹತ್ ಮೊತ್ತ ಪೇರಿಸುವ ಮೂಲಕ ಪ್ರವಾಸಿ ಪಡೆಗೆ ಮೊದಲ ದಿನವೇ ಶಾಕ್ ನೀಡಿದೆ.
ಭಾರತದ ಈ ದೃಢ ಆಟಕ್ಕೆ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ (೧೨ನೇ ಟೆಸ್ಟ್ ಶತಕ) ಮತ್ತು ನಾಯಕ ಶುಭಮನ್ ಗಿಲ್ (೧೧ನೇ ಟೆಸ್ಟ್ ಶತಕ) ಅವರ ಶತಕದ ವೈಭವ ಪ್ರಮುಖ ಕಾರಣವಾಯಿತು.

ಟಿ20 ಮೂಡ್‌ನಿಂದ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೊಂಡ ರಾಹುಲ್!

ಐಪಿಎಲ್ ಮುಗಿದ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಒಗ್ಗಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್. ರಾಹುಲ್ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಮತ್ತೊಬ್ಬ ಆರಂಭಿಕ ಯಶಸ್ವಿ ಜೈಸ್ವಾಲ್ (24 ರನ್) ಬೇಗನೆ ಔಟಾದರೂ, ರಾಹುಲ್ ಮಾತ್ರ ಅಫ್ಘಾನ್ ಬೌಲರ್‌ಗಳನ್ನು ಮನಬಂದಂತೆ ಕಾಡಿದರು. ಟೆಸ್ಟ್ ಮಾದರಿಯಲ್ಲೂ ಆಕ್ರಮಣಕಾರಿ ಶಾಟ್‌ಗಳನ್ನು ಬಾರಿಸಿದ ಅವರು ಸುಂದರ ಶತಕ ಸಿಡಿಸಿ ಮಿಂಚಿದರು.
ದಿನದಾಟದ ಬಳಿಕ ಮಾತನಾಡಿದ ರಾಹುಲ್, ಸುದೀರ್ಘ ಕಾಲ ಟಿ20 ಆಡಿದ ನಂತರ ಟೆಸ್ಟ್‌ಗೆ ಬದಲಾಗುವುದು ಸವಾಲಾಗಿತ್ತು. ಆರಂಭದಲ್ಲಿ ಕೆಲವು ರಿಸ್ಕಿ ಶಾಟ್‌ಗಳನ್ನು ಆಡಿದೆ, ಆದರೆ ನನ್ನ ನೈಸರ್ಗಿಕ ಆಟವನ್ನು ನಾನು ಕಟ್ಟಿಹಾಕಿಕೊಳ್ಳಲಿಲ್ಲ. ಅತಿಯಾಗಿ ಯೋಚನೆ ಮಾಡದೆ ಆಡಿದ್ದು ಕೈಹಿಡಿಯಿತು ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಾಯಿ ಸುದರ್ಶನ್ ಭರವಸೆಯ ಆಟ; ತವರು ನೆಲದಲ್ಲಿ ಗಿಲ್ ಅಬ್ಬರ!

ರಾಹುಲ್ ಜೊತೆಯಾದ ತಮಿಳುನಾಡು ಮೂಲದ ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು. ದೇವದತ್ ಪಡಿಕ್ಕಲ್ ಬದಲಿಗೆ ಪ್ಲೇಯಿಂಗ್ ಇಲೆವೆನ್ ಸೇರಿದ ಸಾಯಿ, ರಾಹುಲ್ ಜೊತೆಗೂಡಿ 136 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಆದರೆ, ಕೇವಲ 19 ರನ್‌ಗಳಿಂದ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಮಿಸ್ ಮಾಡಿಕೊಂಡು (81 ರನ್) ಔಟಾದರು.
ಸುದರ್ಶನ್ ನಿರ್ಗಮನದ ಬಳಿಕ ಕ್ರೀಸ್‌ಗೆ ಬಂದ ನಾಯಕ ಶುಭಮನ್ ಗಿಲ್, ತಮ್ಮ ತವರು ಮೈದಾನದಲ್ಲಿ ಅಫ್ಘಾನಿಸ್ತಾನದ ಎಲ್ಲಾ ತಂತ್ರಗಳನ್ನೂ ಧೂಳೀಪಟ ಮಾಡಿದರು. ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಿದ ಗಿಲ್, ದಿನದ ಅಂತ್ಯಕ್ಕೆ103 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಭಾನುವಾರ ಎರಡನೇ ದಿನದ ಆಟದಲ್ಲಿ ಈ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಇರಾದೆ ಅವರದ್ದಾಗಿದೆ.

ಫಾರ್ಮ್‌ಗೆ ಮರಳಿದ ರಿಷಭ್ ಪಂತ್: ಮೂರು ಸಿಕ್ಸರ್‌ಗಳ ಧಮಾಕಾ!

ಇನ್ನಿಂಗ್ಸ್‌ನ ಮತ್ತೊಂದು ವಿಶೇಷವೆಂದರೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಫಾರ್ಮ್‌ಗೆ ಮರಳಿರುವುದು. ಐಪಿಎಲ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವನ್ನೂ ತ್ಯಜಿಸಿದ್ದ ಪಂತ್ ತೀವ್ರ ಒತ್ತಡದಲ್ಲಿದ್ದರು. ಆದರೆ, ಬಿಳಿ ಉಡುಪಿನಲ್ಲಿ ಹಳೆಯ ಲಯಕ್ಕೆ ಮರಳಿದ ಪಂತ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ ಮೊದಲ ದಿನವೇ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
ಪ್ರಸ್ತುತ ಭಾರತ 368 ರನ್ ಗಳಿಸಿದ್ದು ಭಾನುವಾರ ಬೆಳಿಗ್ಗೆ ಅಫ್ಘಾನಿಸ್ತಾನ ತಂಡ ಬೇಗನೆ ವಿಕೆಟ್ ಪಡೆಯದಿದ್ದರೆ, ಪಂದ್ಯ ಸಂಪೂರ್ಣವಾಗಿ ಪ್ರವಾಸಿಗರ ಕೈಯಿಂದ ಜಾರಿಹೋಗುವುದರಲ್ಲಿ ಸಂಶಯವಿಲ್ಲ,(ಏಜೆನ್ಸೀಸ್​).