19ನೇ ದಿನಕ್ಕೆ ಕಾಲಿಟ್ಟ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ
- ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 19ನೇ ದಿನಕ್ಕೆ
- ಅಂದು ತಂದೆ ಸೋನಮ್ ವಾಂಗ್ಯಾಲ್‌ಗೆ ಜ್ಯೂಸ್ ಕುಡಿಸಿದ್ದ ಇಂದಿರಾ ಗಾಂಧಿ
- ವಾಂಗ್ಚುಕ್ ಸಾಯದಂತೆ ನೋಡಿಕೊಳ್ಳಿ ಎಂದ ದೆಹಲಿ ಹೈಕೋರ್ಟ್
ನವದೆಹಲಿ: ದೇಶದಲ್ಲಿ ನೀಟ್ (NEET) ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯನ್ನು ಆಗ್ರಹಿಸಿ ಪರಿಸರವಾದಿ ಸೋನಮ್ ವಾಂಗ್ಚುಕ್ (Sonam Wangchuk Hunger Strike) ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಇಂದಿಗೆ (ಜು.16) 19 ನೇ ದಿನವನ್ನು ಪ್ರವೇಶಿಸಿದ್ದು, ಇಲ್ಲಿವರೆಗೆ ಅವರು ಸುಮಾರು 9 ಕಿ.ಲೋ ತೂಕವನ್ನು ಕಳೆದುಕೊಂಡಿದ್ದಾರೆ. ಸೋಮನ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂದರ್ಭದಲ್ಲಿ ಅವರ ತಂದೆ ಸೋನಮ್ ವಾಂಗ್ಯಾಲ್ ಅವರು ನಡೆಸಿದ್ದ ಉಪವಾಸ ಸತ್ಯಗ್ರಹವನ್ನು ಹಲವರು ನೆನಪಿಸಿಕೊಳ್ಳುತ್ತಿದ್ದಾರೆ.
ಲಡಾಖ್ ಜನರಿಗಾಗಿ ಉಪವಾಸ ಮಾಡಿದ್ದ ಸೋನಮ್ ವಾಂಗ್ಯಾಲ್!
1984 ರಲ್ಲಿ ಸೋನಮ್ ವಾಂಗ್ಚುಕ್ ಅವರ ತಂದೆ ಸೋಮನ್ ವಾಂಗ್ಯಾಲ್ ಅವರು ಲಡಾಖ್ನ ಸಮೂದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ ಅಂದಿನ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ತಮ್ಮ ಕೈಯಾರೆ ವಾಂಗ್ಯಾಲ್ ಅವರಿಗೆ ಜ್ಯೂಸ್ ಕುಡಿಸುವ ಮೂಲಕ ಅವರ ಮನವಿಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.
ವಾಂಗ್ಚುಕ್ ಸಾಯದಂತೆ ನೋಡಿಕೊಳ್ಳಿ!
ಸೋನಮ್ ವಾಂಗ್ಚುಕ್ ಅವರ ಉಪವಾಸ 18 ನೇ ದಿನ ತಲುಪಿದ ಹಿನ್ನಲೆ, ಈ ಉಪವಾಸ ಸತ್ಯಾಗ್ರಹ ಹೀಗೆ ಮುಂದುವರಿದರೆ ಸೋನಮ್ ವಾಂಗ್ಚುಕ್ ಸಾಯುತ್ತಾರೆಂದು, ಕೇಂದ್ರ ಸರ್ಕಾರ ಈ ಕುರಿತು ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಪ್ರತಿಯೊಬ್ಬ ಪ್ರಜೆಯ ಜೀವ ಅಮೂಲ್ಯವಾಗಿದ್ದು, ಸೋನಮ್ ವಾಂಗ್ಚುಕ್ ಅವರ ಪ್ರಾಣವನ್ನು ಉಳಿಸಲು ಬೇಕಾದ ಎಲ್ಲಾ ವೈಧ್ಯಕೀಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿದೆ, (ಏಜನ್ಸೀಸ್).