ಇಂಡಿಗೋ ಸಂಸ್ಥೆಯ ಷೇರು ಕುಸಿತ
- ಸಂಕಷ್ಟದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ
- ಬಿಕ್ಕಟ್ಟಿನ ಬೆನ್ನಲ್ಲೇ ಇಂಡಿಗೋ ಷೇರು ಕುಸಿತ
ನವದೆಹಲಿ: ಕಳೆದ ಕೆಲವು ದಿನಗಳಿಂದ ಇಂಡಿಗೋ ಏರ್‌ಲೈನ್ಸ್ ತೀವ್ರ ಬಿಕ್ಕಟ್ಟಿನಲ್ಲಿರುವುದು ಸದ್ಯ ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಇದು ವಿಮಾನ ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಪೈಲೆಟ್ ಕೊರೆತೆ, ಆಂತರಿಕ ಸಮಸ್ಯೆಗಳಿಂದ ಹೆಚ್ಚಿನ ಸಂಖ್ಯೆಯ ಇಂಡಿಗೋ ವಿಮಾನಗಳನ್ನು ದಿಢೀರ್ ರದ್ದುಗೊಳಿಸಿದ ಸಂಸ್ಥೆಯ ನಿರ್ಧಾರದಿಂದ ಕಂಗೆಟ್ಟಿರುವ ಅಪಾರ ಸಂಖ್ಯೆಯ ಪ್ರಯಾಣಿಕರು, ಏರ್‌ಲೈನ್ಸ್ ಸಂಸ್ಥೆಗೆ ಹಿಡಿಶಾಪ ಹಾಕಿದ್ದಾರೆ.
ಅತ್ತ ಸಹಜ ಸ್ಥಿತಿಯತ್ತ ಮರಳಲು ತೀರ ಹರಸಾಹಸ ಪಡುತ್ತಿರುವ ಇಂಡಿಗೋ ಸಂಸ್ಥೆಯ ಮೂಲ ಕಂಪನಿ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಷೇರುಗಳು ಇದೀಗ ತೀವ್ರವಾಗಿ ಕುಸಿತ ಕಂಡಿವೆ. ಕಳೆದ ಐದು ಸೆಷನ್ನಲ್ಲಿ ಶೇ.9ಕ್ಕಿಂತ ಹೆಚ್ಚು ನಷ್ಟ ಉಂಟಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇಂದು (ಡಿ.08) ಇಂಡಿಗೋ ಷೇರುಗಳು ದಿಢೀರ್ ಶೇ.7ರಷ್ಟು ಕುಸಿದಿದೆ. ನಂತರದಲ್ಲಿ, ಸ್ವಲ್ಪ ಚೇತರಿಸಿಕೊಂಡಿದ್ದೇ ಆದರೂ ಬ್ಯಾಕ್ ಟು ಬ್ಯಾಕ್ ಹೊಡೆತಕ್ಕೆ ಸಿಲುಕಿರುವುದಂತು ಸ್ಪಷ್ಟ. ಬೆಳಗ್ಗೆ 10 ಗಂಟೆಗೆ, ಶೇ.3.92 (210.50 ರೂ.) ನಷ್ಟದೊಂದಿಗೆ 5,160 ರೂ.ನಲ್ಲಿ ಟ್ರೇಡಿಂಗ್ನಡೆದಿದೆ. ಆದಾಗ್ಯೂ, ಇಂಡಿಗೋ ವಿಮಾನಯಾನ ಸಂಸ್ಥೆಯು ಡಿಜಿಸಿಎಯ ಹೊರಡಿಸಿದ ಹೊಸ ಎಫ್‌ಡಿಟಿಎಲ್ ನಿಯಮಗಳಿಗೆ ಅನುಸಾರವಾಗಿ ತಯಾರಿ ನಡೆಸಲು ವಿಫಲವಾಗಿದ್ದೇ ಈಗಾಗಿರುವ ದೊಡ್ಡ ಎಡವಟ್ಟಿಗೆ ಮೂಲ ಕಾರಣ.
ಇನ್ನೂ ಆರಿಲ್ಲ ಪ್ರಯಾಣಿಕರ ಜ್ವಾಲೆ
ಸದ್ಯ ಕಂಪನಿಯ ಕಾರ್ಯಾಚರಣೆಗಳು ಯಥಾಸ್ಥಿತಿಗೆ ಮರಳುತ್ತಿರುವುದು ಪ್ರಯಾಣಿಕರಲ್ಲಿ ಕೊಂಚ ನಿರಾಳ ಮೂಡಿಸಿದ್ದೇ ಆದರೂ ಕಿಡಿಕಾರುವ ಮನಸ್ಥಿತಿ ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ನಿನ್ನೆಯವರೆಗಿನ ಅಪ್ಡೇಟ್ಗಳನ್ನು ನೋಡಿ ಹೇಳುವುದಾದರೆ, ಇಂಡಿಗೋ ಭಾನುವಾರ 1,650 ವಿಮಾನಗಳನ್ನು ನಿರ್ವಹಿಸಿದೆ. ರದ್ದಾದ ಮತ್ತು ವಿಳಂಬವಾದ ಫ್ಲೈಟ್ಗಳ ಕಾರಣಕ್ಕೆ ಕಂಪನಿಯು ಗ್ರಾಹಕರಿಗೆ 610 ಕೋಟಿ ರೂ. ರೀಫಂಡ್ ಕೂಡ ನೀಡಿದೆ. ಇದರೊಟ್ಟಿಗೆ 3000ಕ್ಕೂ ಹೆಚ್ಚು ಪ್ರಯಾಣಿಕರ ಲಗೇಜ್ಗಳನ್ನು ಸುರಕ್ಷಿತವಾಗಿ ಹಿಂತಿರುಗಿಸಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).