ದೆಹಲಿ: ಇಂಡಿಗೋ ತನ್ನ ನೂರಾರು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದು ಸರ್ಕಾರದ ಏಕಸ್ವಾಮ್ಯ ಮಾದರಿಯ ಪರಿಣಾಮ ಎಂದು ಕಿಡಿ ಕಾರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ದೇಶಕ್ಕೆ ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯಗಳಲ್ಲ, ಬದಲಾಗಿ ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಯ ಅಗತ್ಯವಿದೆ ಎಂದು ಹೇಳಿದರು.
ಇಂಡಿಗೋ ವೈಫಲ್ಯವು ಸರ್ಕಾರದ ಏಕಸ್ವಾಮ್ಯ ನೀತಿಗೆ ಸ್ಪಷ್ಟ ನಿದರ್ಶನವಾಗಿದ್ದು, ವಿಮಾನಗಳ ವಿಳಂಬ, ಟಿಕೆಟ್ ರದ್ದತಿ ಮತ್ತು ಅಸಹಾಯಕತೆಯಿಂದ ಸಾಮಾನ್ಯ ಭಾರತೀಯರು ಬೆಲೆ ತೆರುತ್ತಿದ್ದಾರೆ. ಭಾರತ ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಗೆ ಅರ್ಹವಾಗಿದೆ ಎಂದರು.
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ರಾಹುಲ್ರಿಂದ ಈ ಹೇಳಿಕೆ ಹೊರ ಬಿದ್ದಿದ್ದು, ಈಗಾಗಲೇ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶುಕ್ರವಾರವಷ್ಟೇ, ಸಂಸ್ಥೆಯು 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 220 ಕ್ಕೂ ಹೆಚ್ಚು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 90 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ಬಿಕ್ಕಟ್ಟಿಗೆ ಕ್ಯಾಬಿನ್ ಸಿಬ್ಬಂದಿ ಕೊರತೆ ಮತ್ತು ಇತರ ಅಂಶಗಳನ್ನು ದೂಷಿಸಿರುವ ಇಂಡಿಗೋ, ತನ್ನ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ. ಹೊಸ ವಿಮಾನ ಕರ್ತವ್ಯ ಸಮಯ ಮಿತಿಗಳು ಮಾನದಂಡಗಳಿಂದ ಸಡಿಲಿಕೆ ಕೋರಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದೆ. ಇಂಡಿಗೋದ ವಿನಂತಿಯನ್ನು ಪರಿಶೀಲಿಸುತ್ತಿರುವುದಾಗಿ, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ವಾಯುಯಾನ ನಿಯಂತ್ರಕ ಸಂಸ್ಥೆ ಮಾಹಿತಿ ನೀಡಿದೆ.
ಇದೇ ವಿಷಯವಾಗಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, 2026ರ ಫೆಬ್ರವರಿ 10 ವೇಳೆಗೆ ಪರಿಸ್ಥಿತಿ ತಿಳಿಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ನೆಟ್‌ವರ್ಕ್ ಮೇಲೆ ನಿಗಾ ಇಡಲು ಡಿಜಿಸಿಎ ಮತ್ತು ಸಚಿವಾಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಮತ್ತು ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆಯನ್ನು ಸಾಮಾನ್ಯಗೊಳಿಸುವಂತೆ ಇಂಡಿಗೊಗೆ ಸೂಚಿಸಿದ್ದೇನೆ ಎಂದು ನಾಯ್ಡು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ(ಏಜೆನ್ಸೀಸ್).