ಸಚಿವ ಕೆ.ರಾಮ್​ ಮೋಹನ್ ನಾಯ್ಡು ಮತ್ತು ರಾಹುಲ್ ಗಾಂಧಿ 
ದೇಶ

ಇಂಡಿಗೋ ಬಿಕ್ಕಟ್ಟು; ರಾಹುಲ್ ಗಾಂಧಿಯ ಏಕಸ್ವಾಮ್ಯ ಆರೋಪಕ್ಕೆ ಕೇಂದ್ರ ಸಚಿವ ರಾಮ್​​ಮೋಹನ್ ನಾಯ್ಡು ತಿರುಗೇಟು | Ram mohan Naidu

ನವದೆಹಲಿ: ಕಳೆದ ಕೆಲವು ದಿನಗಳಿಂದ ಅವ್ಯವಸ್ಥೆಯ ಗೂಡಾಗಿರುವ ಇಂಡಿಗೋ ವಿಮಾನಗಳ ಹಾರಾಟದ ಬಗ್ಗೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದ ಏಕಸ್ವಾಮ್ಯ ಆರೋಪಕ್ಕೆ ಶನಿವಾರ(ಡಿ. 06) ಕೇಂದ್ರ ವಿಮಾನಯಾನ ಸಚಿವ ಕೆ.ರಾಮ್​ ಮೋಹನ್ ನಾಯ್ಡು(Ram mohan Naidu) ತಿರುಗೇಟು ನೀಡಿದ್ದಾರೆ.
ಐಎಎನ್​ಎಸ್​ ಜೊತೆ ಮಾತನಾಡಿರುವ ರಾಮ್​ ಮೋಹನ್ ನಾಯ್ಡು, ಇದು ರಾಜಕೀಯ ವಿಷಯವಲ್ಲ, ಬದಲಾಗಿ ಸಾರ್ವಜನಿಕ ವಿಷಯ. ಸರ್ಕಾರ ಯಾವಾಗಲೂ ಹೆಚ್ಚಿನ ಸ್ಪರ್ಧೆಯನ್ನು ತರಲು ಪ್ರಯತ್ನಿಸಿದೆ. ಗುತ್ತಿಗೆ ವೆಚ್ಚವನ್ನು ಕಡಿಮೆ ಮಾಡಲು ನಾವು ಕಾನೂನನ್ನು ಪರಿಚಯಿಸಿದ್ದೇವೆ. ಹೆಚ್ಚಿನ ವಿಮಾನಗಳು ವಾಯುಯಾನಕ್ಕೆ ಸೇರಲು ಅವಕಾಶ ನೀಡುತ್ತೇವೆ. ಸ್ಪರ್ಧೆ ಹೆಚ್ಚಾಗಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ದೇಶದಲ್ಲಿ ವಾಯುಯಾನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಜನರು ಈ ವಲಯವನ್ನು ಪ್ರವೇಶಿಸಲು ಇದು ಒಂದು ಅವಕಾಶ. ಸರ್ಕಾರವೂ ಇದನ್ನೇ ಬಯಸುತ್ತದೆ. ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡಿದ್ರೆ ಉತ್ತಮ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಇಂಡಿಗೋ ವಿಮಾನಗಳ ಅವ್ಯವಸ್ಥೆ ಬಗ್ಗ ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದ ರಾಹುಲ್ ಗಾಂಧಿ, ಇಂಡಿಗೋ ವೈಫಲ್ಯವು ಈ ಕೇಂದ್ರ ಸರ್ಕಾರದ ಏಕಸ್ವಾಮ್ಯ ಮಾದರಿಯ ಕೊಡುಗೆಯಾಗಿದೆ. ಮತ್ತೊಮ್ಮೆ, ವಿಳಂಬ, ರದ್ದತಿ ಮತ್ತು ಅಸಹಾಯಕತೆಯಲ್ಲಿ ಸಾಮಾನ್ಯ ಭಾರತೀಯರು ಬೆಲೆ ತೆರುತ್ತಾರೆ. ಭಾರತವು ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಗೆ ಅರ್ಹವಾಗಿದೆ. ಆದರೆ ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯಗಳಲ್ಲ ಎಂದು ಬರೆದಿದ್ದರು.
ಕಳೆದ ಆರು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಸಾವಿರಾರು ವಿಮಾನ ಪ್ರಯಾಣಗಳನ್ನು ರದ್ದು ಮಾಡಿ ಪ್ರಯಾಣಿಕರನ್ನು ತೊಂದರೆಗೆ ಸಿಲುಕಿಸಿದೆ. ಇಂಡಿಗೋ ಸಂಸ್ಥೆಯ ಪ್ರಸ್ತುತ ಈ ಬಿಕ್ಕಟ್ಟು ಪ್ರಾಥಮಿಕವಾಗಿ ಪೈಲಟ್‌ಗಳ ಕೊರತೆಯಿಂದ ಉಂಟಾಗಿದೆ ಎನ್ನಲಾಗಿದೆ (ಏಜೆನ್ಸೀಸ್).