- ದೇಶಾದ್ಯಂತ ಇಂಡಿಗೋ ವಿಮಾನಗಳ ರದ್ದತಿ
- ಬಿಕ್ಕಟ್ಟಿನ ಲಾಭ ಪಡೆಯಲು ಮುಂದಾದ ಇತರ ವಿಮಾನಯಾನ ಸಂಸ್ಥೆಗಳು
- ಟಿಕೆಟ್ ಬೆಲೆಗಳಲ್ಲಿ ಸುಮಾರು ಎರಡರಿಂದ ಮೂರು ಪಟ್ಟು ಹೆಚ್ಚಳ
ನವದೆಹಲಿ: ಇಂಡಿಗೋ ವಿಮಾನಗಳ ರದ್ದತಿ ಸದ್ಯ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟಿನ ಲಾಭ ಪಡೆಯಲು ಇತರ ವಿಮಾನಯಾನ ಸಂಸ್ಥೆಗಳು ಮುಂದಾಗಿರುವುದು ಸದ್ಯ ಬೇಸರದ ಸಂಗತಿ.
ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿರುವುದು ಅಪಾರ ಸಂಖ್ಯೆಯ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ. ಈ ಕುರಿತು ಹಲವರು ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪರದಾಟದ ಸ್ಥಿತಿ-ಗತಿಗಳನ್ನು ಪರಿ ಪರಿಯಾಗಿ ವಿಡಿಯೋ ಮೂಲಕ ವಿವರಿಸಿದ್ದಾರೆ.
ಅತ್ತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿದ್ದು, ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂಕಷ್ಟದ ನಡುವೆಯೇ ಇತರೆ ವಿಮಾನಯಾನ ಸಂಸ್ಥೆಗಳು ತಮ್ಮ ಫ್ಲೈಟ್ ಟಿಕೆಟ್ ಬೆಲೆಯನ್ನು ಹೆಚ್ಚಿಸಿವೆ. ಇಂಡಿಗೋ ಎಫೆಕ್ಟ್ನಿಂದ ಲಾಭ ಪಡೆಯಲು ಮುಂದಾಗಿರುವ ಸಂಸ್ಥೆಗಳು, ದೇಶದಲ್ಲಿ ವಿಮಾನ ಟಿಕೆಟ್ ಬೆಲೆಗಳನ್ನು ಏರಿಸಿವೆ. ಸಾಮಾನ್ಯ ದಿನಗಳಿಗಿಂತ ಟಿಕೆಟ್ ಬೆಲೆಗಳಲ್ಲಿ ಸುಮಾರು ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.
ಹೈದರಾಬಾದ್‌ನಿಂದ ದೆಹಲಿಗೆ ವಿಮಾನ ಟಿಕೆಟ್‌ನ ಬೆಲೆ 82 ಸಾವಿರ ರೂ.ಗಿಂತ ಜಾಸ್ತಿಯಾಗಿದೆ ಎಂದು ವರದಿಯಾಗಿದೆ. ವಿಮಾನ ಟಿಕೆಟ್ ಬುಕಿಂಗ್ ವೆಬ್‌ಸೈಟ್‌ಗಳು ಎರಡು ಏರ್ಪೋರ್ಟ್ನಿಂದ 25 ಗಂಟೆಗಳ ಪ್ರಯಾಣದ ಸಮಯವನ್ನು ತೋರಿಸುತ್ತಿವೆ. ಇದರ ಮಧ್ಯೆ, ದೆಹಲಿಯಿಂದ ಹೈದರಾಬಾದ್‌ಗೆ ವಿಮಾನ ಟಿಕೆಟ್‌ಗಳ ಬೆಲೆಗಳು 48 ಸಾವಿರ ರೂ.ಗಿಂತ ಅಧಿಕವಾಗಿದೆ. ಇದು ಪ್ರಯಾಣಿಕರಿಗೆ ದೊಡ್ಡ ಹೊಡೆತ ನೀಡುತ್ತಿದೆ.
ದೇಶದ ಅತ್ಯಂತ ಜನನಿಬಿಡ ನಗರಗಳಾದ ಮುಂಬೈ-ದೆಹಲಿ ನಡುವಿನ ವಿಮಾನಗಳ ಟಿಕೆಟ್ ದರಗಳು ತೀವ್ರವಾಗಿ ಹೆಚ್ಚಾಗಿದೆ. ಮುಂಬೈ-ದೆಹಲಿ, ದೆಹಲಿ-ಮುಂಬೈ ಮಾರ್ಗಗಳಲ್ಲಿನ ಅನೇಕ ವಿಮಾನಯಾನ ಸಂಸ್ಥೆಗಳ ಟಿಕೆಟ್ ಬೆಲೆಗಳು ಇದೀಗ 20 ಸಾವಿರದಿಂದ 40 ಸಾವಿರ ರೂ.ವರೆಗೆ ಹೆಚ್ಚಳ ಕಂಡಿವೆ. ಇತರ ಮಾರ್ಗಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಸಾಮಾನ್ಯ ಸಮಯದಲ್ಲಿ, ದೆಹಲಿ-ಮುಂಬೈ ಒಂದು ರೌಂಡ್ ಟ್ರಿಪ್ ಟಿಕೆಟ್‌ನ ಬೆಲೆ, ಕಡೆಯ ಕ್ಷಣದಲ್ಲಿ ಬುಕ್ ಮಾಡಿದರೂ ಸಹ, ಸುಮಾರು 20 ಸಾವಿರ ರೂ. ತೋರಿಸುತ್ತದೆ. ಈಗ, ಬೆಲೆ ಇದ್ದಕ್ಕಿದ್ದಂತೆ 60,000 ರೂ.ಗೆ ಏರಿಕೆ ಆಗಿರುವುದು ಸದ್ಯ ಭಾರೀ ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯ ದಿನಗಳಲ್ಲಿ 10,000 ರೂ. ಇದ್ದ ಮುಂಬೈ-ಶ್ರೀನಗರ ಮಾರ್ಗದ ಟಿಕೆಟ್ ಬೆಲೆ ಈಗ ಇದ್ದಕ್ಕಿದ್ದಂತೆ 62 ಸಾವಿರಕ್ಕೆ ಜಿಗಿದಿದೆ. ಆದಾಗ್ಯೂ, ರೌಂಡ್ ಟ್ರಿಪ್ ಟಿಕೆಟ್ ಸುಮಾರು 92 ಸಾವಿರ ರೂ. ತಲುಪಿದೆ.
ಅಂದಹಾಗೆ, ದೇಶದ ಅತಿದೊಡ್ಡ ವಿಮಾನ ಸಂಸ್ಥೆ ಎಂಬ ಹೆಸರಿಗೆ ಭಾಜನವಾಗಿರುವ ಇಂಡಿಗೋ ಏರ್ಲೈನ್ಸ್ನ ಬಿಕ್ಕಟ್ಟು ಈಗಲೂ ಹಾಗೆ ಮುಂದುವರಿದಿದ್ದು, ದೇಶವ್ಯಾಪಿ ಅನೇಕ ವಿಮಾನ ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಸುಮಾರು 12 ಗಂಟೆಗಳಿಂದ ಊಟ ನೀರು ಇಲ್ಲದೇ ತಮ್ಮ ಲಗೇಜುಗಳನ್ನು ಮರಳಿ ಪಡೆಯುವುದಕ್ಕಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಬಿಕ್ಕಟ್ಟು ಸತತ ನಾಲ್ಕನೇ ದಿನವೂ ಮುಂದುವರೆದಿವೆ. ಸುಮಾರು 20 ವರ್ಷ ಇತಿಹಾಸ ಹೊಂದಿರುವ ದೇಶ ಅತಿದೊಡ್ಡ ವಿಮಾನಯಾನ ಸಂಸ್ಥೆ ಪ್ರಸ್ತುತ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ.
ಕ್ಯಾಬಿನ್ ಸಿಬ್ಬಂದಿ ಸಮಸ್ಯೆಗಳು ಮತ್ತು ತಂತ್ರಜ್ಞಾನ ಸಮಸ್ಯೆಗಳು ಸೇರಿ ಹಲವಾರು ಕಾರಣಗಳಿಂದಾಗಿ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ 104, ದೆಹಲಿ ವಿಮಾನ ನಿಲ್ದಾಣದಲ್ಲಿ 225, ಬೆಂಗಳೂರಿನಲ್ಲಿ 102 ಮತ್ತು ಹೈದರಾಬಾದ್‌ನಲ್ಲಿ 92 ವಿಮಾನಗಳನ್ನು ರದ್ದು ಮಾಡಲಾಗಿದೆ. ಭೋಪಾಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ,(ಏಜೆನ್ಸೀಸ್).