ನವದೆಹಲಿ: ಕಳೆದ ಕೆಲವು ದಿನಗಳ ಇಂಡಿಗೋ ವಿಮಾನಗಳ(IndiGo flights) ಅವ್ಯವಸ್ಥೆಯ ಲಾಭ ಪಡೆದ ಇತರೆ ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್ ದರವನ್ನು ಎಗ್ಗಿಲ್ಲದೇ ಹೆಚ್ಚಿಸಿದ್ದರ ಬಗ್ಗೆ ಟೀಕೆ ವ್ಯಕ್ತವಾಗಿದೆ. ಇಂದು(ಡಿ. 06) ಕೇಂದ್ರ ಸರ್ಕಾರ ನಿಗದಿತ ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಅಸಾಧಾರಣವಾಗಿ ಹೆಚ್ಚಿನ ವಿಮಾನ ದರಗಳನ್ನು ವಿಧಿಸುತ್ತಿರುವ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದೆ. ಈಗ ನಿಗದಿಪಡಿಸಲಾದ ದರ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅಧಿಕೃತ ನಿರ್ದೇಶನವನ್ನು ನೀಡಲಾಗಿದೆ ಎಂದು ಹೇಳಿದೆ.
ಪರಿಸ್ಥಿತಿ ಸಂಪೂರ್ಣವಾಗಿ ಸ್ಥಿರವಾಗುವವರೆಗೆ ಬೆಲೆ ಮಿತಿಗಳು ಜಾರಿಯಲ್ಲಿರುತ್ತವೆ. ಸಚಿವಾಲಯವು ನೈಜ-ಸಮಯದ ಡೇಟಾ ಮತ್ತು ವಿಮಾನಯಾನ ಸಂಸ್ಥೆಗಳು ಮತ್ತು ಆನ್‌ಲೈನ್ ಪ್ರಯಾಣ ವೇದಿಕೆಗಳೊಂದಿಗೆ ಸಕ್ರಿಯ ಸಮನ್ವಯದ ಮೂಲಕ ದರ ಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ನಿಗದಿತ ಮಾನದಂಡಗಳಿಂದ ಯಾವುದೇ ವಿಚಲನ ಕಂಡುಬಂದರೆ ತಕ್ಷಣದ ಸರಿಪಡಿಸುವ ಕ್ರಮವನ್ನು ಮಾಡುತ್ತದೆ ಎಂದು ತಿಳಿಸಿದೆ.
ಅವ್ಯವಸ್ಥೆಯನ್ನು ಲಾಭ ಮಾಡಿಕೊಂಡ ಇತರೆ ಸಂಸ್ಥೆಗಳು
ಅತಿದೊಡ್ಡ ವಿಮಾನಯಾನ ಸಂಸ್ಥೆಯ ಅವ್ಯವಸ್ಥೆಯನ್ನು ಲಾಭ ಮಾಡಿಕೊಂಡ ಇತರೆ ಸಂಸ್ಥೆಗಳು ದೆಹಲಿ, ಮುಂಬೈ, ಕೋಲ್ಕತ್ತಾ ಹಾಗೂ ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ದೇಶೀಯ ವಿಮಾನ ದರಗಳು ಮೂರು ಮತ್ತು ನಾಲ್ಕು ಪಟ್ಟು ಹೆಚ್ಚಾಗಿಸಿವೆ.
ಉದಾಹರಣೆಗೆ ದೆಹಲಿ-ಮುಂಬೈ ನಡುವಿನ ತಡೆರಹಿತ ವಿಮಾನದ ಟಿಕೆಟ್ ಬೆಲೆಗಳು 65,460 ರೂ.ಗಳಿಗೆ ಏರಿಸಿವೆ. ಒಂದು ನಿಲುಗಡೆ ಆಯ್ಕೆಗಳ ಬೆಲೆ 38,376 ರಿಂದ 48,972 ರೂ.ಗಳವರೆಗೆ ಇವೆ. ಇಷ್ಟಲ್ಲದೇ ಇಂದು(ಡಿ. 06) ಕೋಲ್ಕತ್ತಾ-ಮುಂಬೈ ನಡುವಿನ ಒಂದು-ಮಾರ್ಗ, ಒಂದು-ನಿಲುಗಡೆ ಎಕಾನಮಿ-ಕ್ಲಾಸ್ ವಿಮಾನ ಟಿಕೆಟ್‌ನ ಬೆಲೆ 90,000 ರೂ.ಗಳಾಗಿತ್ತು. ಬೆಂಗಳೂರು-ನವದೆಹಲಿ ದರಗಳು ಸಹ 88,000 ರೂ.ಗಳಿಗೆ ಏರಿಸಿವೆ.
ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಶಿಸ್ತು ಕಾಯ್ದುಕೊಳ್ಳುವುದು ಮತ್ತು ಸಂಕಷ್ಟದಲ್ಲಿರುವ ಪ್ರಯಾಣಿಕರ ಶೋಷಣೆಯನ್ನು ತಡೆಯುವುದು ಈ ನಿರ್ದೇಶನದ ಉದ್ದೇಶವಾಗಿದೆ ಎಂದು ಸರ್ಕಾರ ತನ್ನ ನಿರ್ದೇಶನದಲ್ಲಿ ತಿಳಿಸಿದೆ (ಏಜೆನ್ಸೀಸ್).