ನವದೆಹಲಿ: ಇಂಡಿಗೋ ವಿಮಾನಗಳ(IndiGo flights) ಅವ್ಯವಸ್ಥೆ ಸತತ 8ನೇ ದಿನವೂ ಮುಂದುವರೆದಿದ್ದು, ಇಂದು(ಡಿ. 09) ಸುಮಾರು 500 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು ಮತ್ತು ದೆಹಲಿಯಲ್ಲಿ ಹೆಚ್ಚಿನ ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಂಡಿವೆ. ಬೆಂಗಳೂರಿಗೆ ಆಗಮಿಸುವ 58 ಮತ್ತು ಇಲ್ಲಿಂದ ನಿರ್ಗಮಿಸುವ 63 ಸೇರಿ ಒಟ್ಟು 121 ವಿಮಾನಗಳ ಪ್ರಯಾಣ ರದ್ದುಗೊಂಡಿದೆ. ದೆಹಲಿಯಲ್ಲಿ 152 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 58 ವಿಮಾನಗಳು, ಚೆನ್ನೈನಲ್ಲಿ ಕನಿಷ್ಠ 81 ವಿಮಾನಗಳು, ಮುಂಬೈ 31, ಲಕ್ನೋ 26 ಹಾಗೂ ಅಹಮದಾಬಾದ್ನಲ್ಲಿ 16 ವಿಮಾನಗಳ ಹಾರಾಟ ರದ್ದಾಗಿದೆ. ಇನ್ನು ಈ ಬಿಕ್ಕಟ್ಟಿನಿಂದಾಗಿ ಇಂಡಿಗೋ ಚಳಿಗಾಲದ ವೇಳಾಪಟ್ಟಿಯಲ್ಲಿ ಹಲವಾರು ಮಾರ್ಗಗಳಲ್ಲಿ ಹಾರಾಟ ನಡೆಸಲು ತೊಂದರೆಯಾಗಬಹುದು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, ಸರ್ಕಾರವು ದಂಡವಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯ ಸ್ಲಾಟ್ ಹಂಚಿಕೆಯನ್ನು ಖಂಡಿತವಾಗಿಯೂ ಕಡಿತಗೊಳಿಸಲಿದೆ. ಚಳಿಗಾಲದ ವೇಳಾಪಟ್ಟಿಯಿಂದ ಕೆಲವು ಮಾರ್ಗಗಳನ್ನು ಕಡಿಮೆ ಮಾಡಲು ನಾವು ಆದೇಶ ಹೊರಡಿಸುತ್ತೇವೆ. ಇವುಗಳನ್ನು ಇತರೆ ವಿಮಾನಯಾನ ಸಂಸ್ಥೆಗಳಿಗೆ ಮರು ನಿಯೋಜಿಸಲಾಗುತ್ತದೆ. ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದಾಗ ಮಾತ್ರ ಇಂಡಿಗೋಗೆ ಮರಳಿ ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.
ಇಂಡಿಗೋ 90 ದೇಶೀಯ ಮತ್ತು 40 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ತಾಣಗಳಲ್ಲಿ 2,200 ಕ್ಕೂ ಹೆಚ್ಚು ದೈನಂದಿನ ವಿಮಾನ ಪ್ರಯಾಣಗಳನ್ನು ನಿರ್ವಹಿಸುತ್ತದೆ (ಏಜೆನ್ಸೀಸ್).