ಪ್ರಧಾನಿ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ 
ದೇಶ

ಡಿಲಿಮಿಟೇಷನ್ ಕುರಿತು ಕೇಂದ್ರ ಸರ್ಕಾರ ಮತ್ತೆ ವಿಶೇಷ ಅಧಿವೇಶನ ಕರೆಯುವ ಸುಳಿವು; ಪ್ರಧಾನಿ ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ | Mallikarjun Kharge

ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕಾಗಿ ಮತ್ತೊಮ್ಮೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯುವ ಸುಳಿವು ಸಿಕ್ಕ ಹಿನ್ನೆಲೆ ಇಂದು(ಆ. 27) ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ವಿಶೇಷ ಅಧಿವೇಶನ ಕರೆಯುವ ಮೊದಲು ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಕುರಿತು ಸರ್ವಪಕ್ಷ ಸಭೆ ಕರೆಯುವ ಹಾಗೂ ಆ ಪ್ರಸ್ತಾವನೆಗಳನ್ನು ಪರಿಶೀಲಿಸಲು ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಸಮಯ ನೀಡುವ ತಮ್ಮ ಬೇಡಿಕೆಯನ್ನು ಪರಿಶೀಲಿಸುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಖರ್ಗೆಯವರು, ಕ್ಷೇತ್ರ ಪುನರ್​ ವಿಂಗಡಣೆ, ಸಂಸತ್ತಿನ ಮಳೆಗಾಲದ ಅಧಿವೇಶನ ಮುಂದೂಡಿಕೆಯಲ್ಲಿನ ವಿಳಂಬ ಮತ್ತು ನಿನ್ನೆ ಸಂಜೆ ದೂರದರ್ಶನ ಸಂದರ್ಶನದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಉಲ್ಲೇಖಿಸಿದ ವಿಶೇಷ ಅಧಿವೇಶನದ ಕುರಿತಾಗಿ ಇಂದು ನಾನು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಕ್ಷೇತ್ರ ಪುನರ್​ ವಿಂಗಡಣೆಗೆ ಸರ್ಕಾರದ ಪ್ರಸ್ತಾವನೆಗಳನ್ನು ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆಯುವಂತೆ ವಿನಂತಿಸಿ ನಾನು ನಿಮಗೆ ಕೊನೆಯದಾಗಿ ಜುಲೈ 16, 2026 ರಂದು ಪತ್ರ ಬರೆದಿದ್ದೆ. ವಿಶೇಷ ಅಧಿವೇಶನದಲ್ಲಿ ನೀವು ಪರಿಗಣಿಸುತ್ತಿರುವ ಪ್ರಸ್ತಾವನೆಗಳನ್ನು ಪರಿಚಯಿಸುವ ಮೊದಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಸ್ತಾವನೆಗಳನ್ನು ವಿವರವಾಗಿ ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ನೀಡುವಂತೆ ನಾನು ನಿಮ್ಮನ್ನು ವಿನಂತಿಸಿದ್ದೆ ಎಂಬುದನ್ನು ನೆನಪಿಸಿದ್ದಾರೆ.

ಅಲ್ಲದೇ, ಲೋಕಸಭೆಯಲ್ಲಿ ರಾಜ್ಯವಾರು ಸಂಖ್ಯಾಬಲವನ್ನು ಇನ್ನೂ 25 ವರ್ಷಗಳ ಕಾಲ ಇದೇ ರೀತಿ ಕಾಯ್ದುಕೊಳ್ಳಬೇಕು ಮತ್ತು 2029ರ ಲೋಕಸಭಾ ಚುನಾವಣೆಯಿಂದ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆದು ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಾಕಷ್ಟು ಸಮಯ ನೀಡಬೇಕು. ಇದು ದೇಶಕ್ಕೆ ಅಗಾಧ ಮಹತ್ವವನ್ನು ಹೊಂದಿರುವ ವಿಷಯವಾಗಿದೆ. ದಯವಿಟ್ಟು ನೀವು ಏಪ್ರಿಲ್ 16 ಮತ್ತು 17, 2026 ರಂದು ಪ್ರಯತ್ನಿಸಿದಂತೆ ಮತ್ತೆ ಬುಲ್ಡೋಜರ್ ಮಾಡಲು ಪ್ರಯತ್ನಿಸಬೇಡಿ ಎಂದು ಕೋರಿದ್ದಾರೆ (ಏಜೆನ್ಸೀಸ್).