ಭಾರತದ ಜಿಡಿಪಿ ಬೆಳವಣಿಗೆಯ ದರ ಶೇ. 7.8ಕ್ಕೆ ಏರಿಕೆ: ಆರ್‌ಬಿಐ ಅಂದಾಜು ಮೀರಿಸಿದ ಆರ್ಥಿಕ ಪ್ರಗತಿ! GDP Growth
- 2026-27ರ ಮೊದಲ ತ್ರೈಮಾಸಿಕದಲ್ಲಿ ಶೇ 7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲು
- ಆರ್‌ಬಿಐ ಅಂದಾಜು ಮತ್ತು ಮಾರುಕಟ್ಟೆ ನಿರೀಕ್ಷೆಗಳನ್ನು ಮೀರಿಸಿದ ಆರ್ಥಿಕ ಪ್ರಗತಿ
- ಸೇವಾ ವಲಯ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ
- ಹೂಡಿಕೆ ಮತ್ತು ಖಾಸಗಿ ಬಳಕೆ ವೆಚ್ಚದಿಂದ ದೇಶದ ಆರ್ಥಿಕತೆಗೆ ಬಲವಾದ ಆಸರೆ
- ಜಾಗತಿಕ ಅನಿಶ್ಚಿತತೆಯ ನಡುವೆಯೂ ದೃಢವಾದ ಹೆಜ್ಜೆ ಇಟ್ಟ ಭಾರತೀಯ ಆರ್ಥಿಕತೆ
ನವದೆಹಲಿ: ಭಾರತದ ಆರ್ಥಿಕ ಪ್ರಗತಿಯು ಮತ್ತೊಮ್ಮೆ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, 2026-27ನೇ ಸಾಲಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 7.8ರಷ್ಟು ಭರ್ಜರಿ ಬೆಳವಣಿಗೆಯನ್ನು ( GDP Growth ) ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಸೋಮವಾರ ಅಧಿಕೃತವಾಗಿ ಘೋಷಿಸಿದೆ. ಗಣಿ ವಲಯದ ಹಿನ್ನಡೆ ಹಾಗೂ ಪ್ರಾಥಮಿಕ ಕ್ಷೇತ್ರದ ಮಂದಗತಿಯ ನಡುವೆಯೂ ಸೇವಾ ವಲಯ, ಉತ್ಪಾದನೆ ಮತ್ತು ಹೂಡಿಕೆ ಚಟುವಟಿಕೆಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಈ ಅಭಿವೃದ್ಧಿ ಸಾಧ್ಯವಾಗಿದ್ದು, ಇದು ಖಾಸಗಿ ಮುನ್ಸೂಚನೆಗಳು ಹಾಗೂ ಆರ್‌ಬಿಐ ಅಂದಾಜಿಗಿಂತಲೂ ಮೀರಿ ನಿಂತು ದೇಶದ ಬಲವಾದ ಆರ್ಥಿಕ ಚೈತನ್ಯವನ್ನು ಜಗತ್ತಿಗೆ ಸಾರಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾಹಿತಿಯ ಪ್ರಕಾರ, 2022-23ರ ಸ್ಥಿರ ಬೆಲೆಗಳ ಆಧಾರದ ಮೇಲೆ 2027ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಭಾರತದ ನೈಜ ಜಿಡಿಪಿ 81.36 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 75.46 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಅಲ್ಲದೆ, ನಾಮಮಾತ್ರದ ಜಿಡಿಪಿಯು ಶೇ. 10.3ರಷ್ಟು ಏರಿಕೆಯಾಗಿ 80 ಲಕ್ಷ ಕೋಟಿ ರೂಪಾಯಿಗಳಿಂದ 88.27 ಲಕ್ಷ ಕೋಟಿ ರೂಪಾಯಿಗಳಿಗೆ ವಿಸ್ತರಿಸಿದೆ. ಉತ್ಪಾದನೆಯನ್ನು ಅಳೆಯುವ ನೈಜ ಒಟ್ಟು ಮೌಲ್ಯವರ್ಧಿತ (GVA) ಕೂಡ ಶೇ. 8.2ರಷ್ಟು ಪ್ರಗತಿ ಸಾಧಿಸಿ 73.82 ಲಕ್ಷ ಕೋಟಿ ರೂಪಾಯಿಗಳಿಗೆ ಮುಟ್ಟಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಬಲವಾದ ಆರ್ಥಿಕ ಬೆಳವಣಿಗೆಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ದಾಖಲಾಗಿದ್ದ ಶೇ. 6.9ರ ಪ್ರಗತಿಗಿಂತ ಗಮನಾರ್ಹವಾಗಿ ಹೆಚ್ಚಿದೆ. ಆದಾಗ್ಯೂ, ಜನವರಿ-ಮಾರ್ಚ್ ತ್ರೈಮಾಸಿಕದ ಪರಿಷ್ಕೃತ ಶೇ. 8.6ರ ಬೆಳವಣಿಗೆಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಮಂದಗೊಂಡಿದೆ. ಜೂನ್ ತ್ರೈಮಾಸಿಕಕ್ಕೆ ಆರ್‌ಬಿಐ ಅಂದಾಜಿಸಿದ್ದ ಶೇ. 7ರ ಮುನ್ಸೂಚನೆಗಿಂತ ಈ ನೈಜ ಬೆಳವಣಿಗೆ ದರವು ಬರೋಬ್ಬರಿ 80 ಮೂಲ ಅಂಕ (BPS) ಅಧಿಕವಾಗಿದೆ. ತನ್ನ ಆಗಸ್ಟ್ ತಿಂಗಳ ಹಣಕಾಸು ನೀತಿ ಹೇಳಿಕೆಯಲ್ಲಿ ಆರ್ಥಿಕತೆಯು ನಿರೀಕ್ಷೆಗಿಂತ ಉತ್ತಮ ನಿರ್ವಹಣೆ ತೋರಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದ್ದರೂ, ಇಡೀ ಆರ್ಥಿಕ ವರ್ಷಕ್ಕೆ ಶೇ. 6.7ರ ಬೆಳವಣಿಗೆಯನ್ನು ಮಾತ್ರ ಅಂದಾಜಿಸಿದೆ.
ಸೇವಾ ವಲಯವೇ ಮುಂಚೂಣಿ
ಈ ಆರ್ಥಿಕ ಪ್ರಗತಿಯಲ್ಲಿ ಸೇವಾ ವಲಯವೇ ದೇಶದ ಆರ್ಥಿಕತೆಯ ಮುಖ್ಯ ಇಂಜಿನ್ ಆಗಿ ಮುಂಚೂಣಿಯಲ್ಲಿದೆ. ಹಣಕಾಸು, ರಿಯಲ್ ಎಸ್ಟೇಟ್, ಐಟಿ ಮತ್ತು ವೃತ್ತಿಪರ ಸೇವೆಗಳು ಶೇ. 12.1ರಷ್ಟು ಬಲವಾದ ವಿಸ್ತರಣೆ ಕಂಡ ಹಿನ್ನೆಲೆಯಲ್ಲಿ ತೃತೀಯ ಕ್ಷೇತ್ರವು ಶೇ. 10ರಷ್ಟು ಭರ್ಜರಿ ಬೆಳವಣಿಗೆ ದಾಖಲಿಸಿದೆ. ಇದರೊಂದಿಗೆ ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂವಹನ ಸಂಬಂಧಿತ ಸೇವೆಗಳು ಶೇ. 8.5ರಷ್ಟು ಹಾಗೂ ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು ಶೇ. 7.5ರಷ್ಟು ಪ್ರಗತಿ ಸಾಧಿಸಿವೆ.
ದ್ವಿತೀಯ ಕ್ಷೇತ್ರವು ಶೇ. 8.6ರಷ್ಟು ಬೆಳವಣಿಗೆಯನ್ನು ಕಂಡಿದ್ದು, ಉತ್ಪಾದನಾ ವಲಯದ ಜಿವಿಎ (GVA) ಶೇ. 9.2ರಷ್ಟು ವಿಸ್ತರಣೆಗೊಂಡಿದೆ. ಹಾಗೆಯೇ ವಿದ್ಯುತ್, ಗ್ಯಾಸ್, ನೀರು ಸರಬರಾಜು ಹಾಗೂ ಯುಟಿಲಿಟಿ ಸೇವೆಗಳು ಶೇ. 8.9ರಷ್ಟು ಮತ್ತು ನಿರ್ಮಾಣ ವಲಯವು ಶೇ. 7.7ರಷ್ಟು ಪ್ರಗತಿ ಸಾಧಿಸಿವೆ. ಆದರೆ ಪ್ರಾಥಮಿಕ ಕ್ಷೇತ್ರವು ಸ್ವಲ್ಪ ಹಿನ್ನಡೆ ಅನುಭವಿಸಿದ್ದು, ಕೇವಲ ಶೇ. 2.9ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು ಶೇ. 3.6ರಷ್ಟು ವಿಸ್ತರಿಸಿದರೆ, ಗಣಿಗಾರಿಕೆ ಮತ್ತು ಕಲ್ಲುಗಣಿ ಚಟುವಟಿಕೆಗಳು ಶೇ. 2.4ರಷ್ಟು ಕುಸಿತವನ್ನು ದಾಖಲಿಸಿವೆ.
ಜಾಗತಿಕ ವ್ಯಾಪಾರ ಅನಿಶ್ಚಿತತೆ ಹಾಗೂ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಇಂಧನ ಮತ್ತು ಕಚ್ಚಾ ವಸ್ತುಗಳ ವೆಚ್ಚದಲ್ಲಿ ಏರಿಳಿತ ಉಂಟಾಗಿದ್ದರೂ, ಈ ಆರ್ಥಿಕ ಅಂಕಿಅಂಶಗಳು ಒಟ್ಟಾರೆ ಬೆಳವಣಿಗೆಯು ಆರ್ಥಿಕತೆಯ ಒಂದೇ ಒಂದು ವಲಯಕ್ಕೆ ಸೀಮಿತವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಕೈಗಾರಿಕಾ ಚಟುವಟಿಕೆಗಳು ಹಾಗೂ ಸೇವಾ ವಲಯ ಎರಡೂ ಅತ್ಯಂತ ದೃಢವಾದ ಪ್ರದರ್ಶನವನ್ನು ನೀಡುವ ಮೂಲಕ ತ್ರೈಮಾಸಿಕದಾದ್ಯಂತ ದೇಶದ ಆರ್ಥಿಕತೆಯನ್ನು ಗಟ್ಟಿಯಾಗಿ ಮುನ್ನಡೆಸಿವೆ.
ವೆಚ್ಚದ ದೃಷ್ಟಿಯಿಂದ ನೋಡುವುದಾದರೆ, ಆರ್ಥಿಕತೆಯಲ್ಲಿ ಹೂಡಿಕೆಯ ಪ್ರಮುಖ ಸೂಚಕವಾಗಿರುವ ಒಟ್ಟು ಸ್ಥಿರ ಬಂಡವಾಳ ರಚನೆಯು (GFCF) ಸ್ಥಿರ ಬೆಲೆಗಳ ಆಧಾರದ ಮೇಲೆ ಶೇ. 11.9ರಷ್ಟು ಗಮನಾರ್ಹ ಏರಿಕೆ ಕಂಡಿದ್ದು, ಇದು ಕಳೆದ ವರ್ಷದ ಶೇ. 5.8ರ ಪ್ರಗತಿಗಿಂತ ಅತ್ಯಂತು ಚುರುಕಾಗಿದೆ. ಹಾಗೆಯೇ ಖಾಸಗಿ ಅಂತಿಮ ಬಳಕೆ ವೆಚ್ಚವು ಶೇ. 7.1ರಷ್ಟು ಹಾಗೂ ಸರ್ಕಾರದ ಅಂತಿಮ ಬಳಕೆ ವೆಚ್ಚವು ಶೇ. 4.3ರಷ್ಟು ವೃದ್ಧಿಸಿವೆ. ಇನ್ನು ಸರಕು ಮತ್ತು ಸೇವೆಗಳ ರಫ್ತು ನೈಜ ರೂಪದಲ್ಲಿ ಶೇ. 12ರಷ್ಟು ಭರ್ಜರಿಯಾಗಿ ಹೆಚ್ಚಾದರೆ, ಆಮದು ಶೇ. 1.1ರಷ್ಟು ಇಳಿಕೆಗೊಂಡು ಒಟ್ಟು ಜಿಡಿಪಿಗೆ ಹೆಚ್ಚಿನ ಬಲ ತುಂಬಿದೆ. ಪ್ರಸ್ತುತ ಬೆಲೆಗಳ ಪ್ರಕಾರ, ಖಾಸಗಿ ಬಳಕೆಯು ಜಿಡಿಪಿಯ ಶೇ. 55.6ರಷ್ಟಿದ್ದರೆ, ಒಟ್ಟು ಸ್ಥಿರ ಬಂಡವಾಳ ರಚನೆಯು ಶೇ. 34.3ರಷ್ಟಿದೆ (ಕಳೆದ ವರ್ಷ ಇದು ಶೇ. 31.4ರಷ್ಟಿತ್ತು).
ಅಪರೂಪದ ಸಾಧನೆ ಅಂದ್ರು ಪ್ರಧಾನಿ ಮೋದಿ
ಭಾರತದ 2026-27ನೇ ಸಾಲಿನ ಮೊದಲ ತ್ರೈಮಾಸಿಕದ ಶೇ. 7.8ರಷ್ಟು ಬಲವಾದ ಜಿಡಿಪಿ ಬೆಳವಣಿಗೆಯನ್ನು 'ಅಪರೂಪದ ಸಾಧನೆ' ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ಆರ್ಥಿಕ ಅನಿಶ್ಚಿತತೆಗಳು, ತೈಲ ಬೆಲೆ ಏರಿಕೆಯ ಆಘಾತಗಳು ಹಾಗೂ ಪೂರೈಕೆ ಸರಪಳಿ ಸಮಸ್ಯೆಗಳ ನಡುವೆಯೂ ದೇಶದ ಜನರ ಸಾಮೂಹಿಕ ಶಕ್ತಿಯು ಈ ಸಾಧನೆ ಮಾಡಲು ನೆರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶದ ಪ್ರಗತಿಯ ಬಗ್ಗೆ ನಿರಾಶಾವಾದಿ ಮಾತುಗಳನ್ನಾಡಿದ್ದವರ ಊಹೆಗಳು ಸುಳ್ಳಾಗಿ, ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ ಎಂಬರ್ಥದಲ್ಲಿ "Doomsayers were doomed and India bloomed...yet again!" ಎಂದು ಬಣ್ಣಿಸುವ ಮೂಲಕ ದೇಶದ ಆರ್ಥಿಕ ಚೈತನ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ನಿರೀಕ್ಷೆಗಿಂತ ಬಲವಾಗಿ ಮೂಡಿಬಂದಿರುವ ಈ ಮೊದಲ ತ್ರೈಮಾಸಿಕದ ಅಂಕಿಅಂಶಗಳು 2027ನೇ ಹಣಕಾಸು ವರ್ಷದ ಆರಂಭದಲ್ಲೇ ಆರ್ಥಿಕತೆಗೆ ಭದ್ರವಾದ ಆಸರೆಯನ್ನು ಕಲ್ಪಿಸಿವೆಯಾದರೂ, ಮುಂದಿನ ದಿನಗಳ ಕೃಷಿ ಹಾಗೂ ಜಾಗತಿಕ ಸವಾಲುಗಳಿಂದಾಗಿ ಭವಿಷ್ಯದ ಚಿತ್ರಣವು ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಅಸಮರ್ಪಕ ಮಳೆ, ಎಲ್ ನಿನೋ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಜಾಗತಿಕ ವ್ಯಾಪಾರ ಅನಿಶ್ಚಿತತೆಗಳು ಆರ್ಥಿಕ ಬೆಳವಣಿಗೆಗೆ ಹಿನ್ನಡೆ ತರಬಹುದಾದ ಪ್ರಮುಖ ಅಪಾಯಗಳೆಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ. ಆದಾಗ್ಯೂ, ಬಾಹ್ಯ ಆಘಾತಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ದೇಶೀಯ ಬಳಕೆ ಮತ್ತು ಹೂಡಿಕೆಗಳು ಎಷ್ಟು ಬಲವಾಗಿವೆ ಎಂಬುದನ್ನು ಈ ಮೊದಲ ತ್ರೈಮಾಸಿಕದ ದತ್ತಾಂಶಗಳು ಸ್ಪಷ್ಟವಾಗಿ ಸಾಬೀತುಪಡಿಸಿವೆ,
(ಏಜೆನ್ಸೀಸ್).