ವಾರಣಾಸಿಯಲ್ಲಿ ಕಾಂಟ್ ರೈಲು ನಿಲ್ದಾಣದಿಂದ ಗೋದಲಿ ಚೌಕ್‌ವರೆಗೆ ರೋಪ್‌ವೇ ಸಿದ್ಧತೆ.
ಪ್ರಮುಖ ಘಾಟ್ಗೆ 45 ನಿಮಿಷಗಳಲ್ಲಿ ಇನ್ನು 15-16 ನಿಮಿಷಗಳಲ್ಲಿ ಕಾಶಿಗೆ ಪ್ರಯಾಣ ಸಾಧ್ಯ.
2 ಕಿ.ಮೀ ದೂರ, ಪ್ರತಿ ಕೇಬಲ್ ಕಾರಿನ ಕ್ಯಾಬಿನ್‌ನಲ್ಲಿ 10 ಜನರು ಕೂರುವಷ್ಟು ಸಾಮರ್ಥ್ಯವಿದೆ.
ವಾರಣಾಸಿ: ವಿಶ್ವದ ಅತ್ಯಂತ ಹಳೆಯ ಪವಿತ್ರ ನಗರಗಳಲ್ಲಿ ಒಂದಾದ ವಾರಣಾಸಿಯಲ್ಲಿ ಸದಾ ಜನರು ತುಂಬಿರುತ್ತಾರೆ. ಇಲ್ಲಿನ ಬೀದಿಯಲ್ಲಿ ಸಂಚಾರ ದಟ್ಟಣೆಯೊಂದು ಪ್ರಮುಖ ಸಮಸ್ಯೆ. ಹಬ್ಬ-ಹರಿದಿನದಲ್ಲಂತೂ ಗಂಟೆ ಗಟ್ಟಲೇ ಕಾಯಬೇಕು. ಅಲ್ಲದೆ ಪ್ರಮುಖ ಘಾಟ್ಗಳಿಗೆ ಪ್ರಯಾಣಿಸಲು ರೈಲು ನಿಲ್ದಾಣದಿಂದ ಪ್ರಮುಖ 45 ನಿಮಿಷ ಬೇಕಾಗುತ್ತದೆ. ಈ ಮೂಲ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಹೌದು, ಕಾಶಿ ನಗರವು ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಆ ಮೂಲಕ ಜಗತ್ತಿನಲ್ಲಿ ಬೊಲಿವಿಯಾ ಮತ್ತು ಮೆಕ್ಸಿಕೋ ನಂತರ, ಸಾರ್ವಜನಿಕ ಸಾರಿಗೆಗಾಗಿ ಇಂತಹ ರೋಪ್‌ವೇ ಹೊಂದಲಿರುವ ವಿಶ್ವದ ಮೂರನೇ ನಗರ ಎಂಬ ಖ್ಯಾತಿಗೆ ವಾರಣಾಸಿ ಪಾತ್ರವಾಗಲಿದೆ. ವಾರಣಾಸಿ ಕಾಂಟ್ ರೈಲು ನಿಲ್ದಾಣದಿಂದ ಗೋದೋಲಿಯಾ ಚೌಕ್ ಅನ್ನು ಸಂಪರ್ಕಿಸುತ್ತದೆ.
ಈ ರೋಪ್‌ವೇ ವಾಣಿಜ್ಯ ಸೇವೆಗಾಗಿ ಕಾರ್ಯರೂಪಕ್ಕೆ ಬಂದ ನಂತರ, ಕೇವಲ 15 ರಿಂದ 16 ನಿಮಿಷಗಳಲ್ಲಿ ನೀವು ಗಮ್ಯ ಸ್ಥಾನಗಳನ್ನು ತಲುಪಬಹುದು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅವಿಮುಕ್ತಕಾಶಿ ಎಂಬುವವರು ಹಂಚಿಕೊಂಡಿದ್ದಾರೆ. ರೋಪ್ ವೇ ಪ್ರಯಾಣದ ಮೂಲಕ ಬನಾರಸ್ ನಗರ ಹೇಗಿದೆ ನೋಡಿ ಎನ್ನುವ ವಿಡಿಯೋ ಸಹ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ಕಾಶಿಗೆ ರೋಪ್‌ವೇ ಮೂಲಕ ಪ್ರಯಾಣಿಸುವ ವ್ಯವಸ್ಥೆಯ ಕಾಮಗಾರಿ ಶೇ. 96 ರಷ್ಟು ಪೂರ್ಣಗೊಂಡಿದೆ. ಅಂತಿಮ ಹಂತದ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದು, ಡಿಸೆಂಬರ್ 2026 ಅಥವಾ ಜನವರಿಯಲ್ಲಿ ವಾಣಿಜ್ಯ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಹೇಳಲಾಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಪ್ರತಿಯೊಂದು ರೋಪ್‌ವೇ ಕಾರಿನಲ್ಲಿ ಹಲವಾರು ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇರುವುದನ್ನು ತೋರಿಸಲಾಗಿದೆ. ಈ ಕಾರುಗಳು ಕಾಶಿ ವಿಶ್ವನಾಥ ದೇವಾಲಯ ಮತ್ತು ನಗರದ ಘಾಟ್‌ಗಳಿಂದ ಪ್ರೇರಿತವಾದ ವಿಶೇಷ ವಿನ್ಯಾಸವನ್ನು ಹೊಂದಿವೆ. ಸವಾರಿಯ ಸಮಯದಲ್ಲಿ, ವಾಹನಗಳಲ್ಲಿ ಸಂಚರಿಸಲು ಕಷ್ಟಕರವಾದ ಜನನಿಬಿಡ ರಸ್ತೆಗಳ ಮೇಲೆಯೇ ರೋಪ್‌ವೇ ಸಾಗುತ್ತದೆ. ರೈಲು ನಿಲ್ದಾಣ ಮತ್ತು ಜನವಸತಿ ಪ್ರದೇಶಗಳ ಮೇಲೂ ಕ್ಯಾಬಿನ್‌ಗಳು ಸಾಗುವ ದೃಶ್ಯಗಳು ವೀಡಿಯೊದಲ್ಲಿವೆ.
150 ಕೇಬಲ್ ಕಾರ್ ವ್ಯವಸ್ಥೆ ಇದ್ದು, ಪ್ರತಿ ಕ್ಯಾಬಿನ್‌ನಲ್ಲಿ 10 ಪ್ರಯಾಣಿಕರು ಕುಳಿತುಕೊಳ್ಳಬಹುದು. ಇದು ಗಂಟೆಗೆ ಸುಮಾರು 3,000 ಪ್ರಯಾಣಿಕರನ್ನು ಒಂದು ದಿಕ್ಕಿನಲ್ಲಿ ಸಾಗಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ಕ್ಯಾಂಟ್‌ನಿಂದ ಗೋಡೋಲಿಯಾ ಅಂದಾಜು ದರ 50 ರೂಪಾಯಿ ಇರಲಿದ್ದು, ಸಣ್ಣ ನಿಲ್ದಾಣಗಳ ನಡುವಿನ ಕನಿಷ್ಠ ದರ 10 ರಿಂದ 20 ರೂಪಾಯಿ ಇರಬಹುದು ಎಂದು ಊಹಿಸಲಾಗಿದೆ. ಸ್ಥಳೀಯ ನಿವಾಸಿಗಳಿಗೆ 'ಕಾಶಿ ಸ್ಮಾರ್ಟ್ ಪಾಸ್' ಮೂಲಕ ಶೇ. 20 ರಷ್ಟು ರಿಯಾಯಿತಿಯೂ ಸಿಗುವ ಸಾಧ್ಯತೆಯಿದೆ.
ವಾರಣಾಸಿಯ ಸೂರ್ಯಾಸ್ತ ಮತ್ತು ಮಳೆಯ ದೃಶ್ಯಗಳು ಇಲ್ಲಿಂದ ನೋಡುವುದೇ ಕಣ್ಣಿಗೆ ಹಬ್ಬ ಉತ್ತಮ ವೀಕ್ಷಣೆಗಾಗಿ ಕಟ್ಟಡಗಳ ಮೇಲ್ಛಾವಣಿಗಳಿಗೆ ಒಂದೇ ರೀತಿಯ ಬಣ್ಣ ಬಳಿಯಬೇಕು. ಸಾರ್ವಜನಿಕರ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿದೆ, ಇದು ಮೆಚ್ಚಬೇಕಾದದ್ದೇ ಎಂದಿದ್ದಾರೆ. ಇನ್ನೂ ಕೆಲವರು ಕಾಶಿ ನಗರವನ್ನು ಕಾಲ್ನಡಿಗೆಯಲ್ಲಿ ಅನ್ವೇಷಿಸುವುದೇ ಒಂದು ಮಜಾ. ರೋಪ್‌ವೇ ಹೊರಗಿನಿಂದ ನೋಡಲು ಚೆನ್ನಾಗಿರಬಹುದು, ಆದರೆ ನಡಿಗೆಯ ಅನುಭವವೇ ಬೇರೆ. 2014 ರ ಮೊದಲು ಬನಾರಸ್ ಇಂತಹ ವಿಶ್ವದರ್ಜೆಯ ಮೂಲಸೌಕರ್ಯವನ್ನು ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸ್ವಿಸ್ ಕಂಪನಿ 'ಬಾರ್ಥೋಲೆಟ್ ಮ್ಯಾಶಿನೆನ್‌ಬೌ ಎಜಿ' ಮತ್ತು ಭಾರತೀಯ ಸಂಸ್ಥೆ 'ವಿಶ್ವ ಸಮುದ್ರ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್' ಸಹಯೋಗದಲ್ಲಿ ರೋಪ್ ವೇ ಯೋಜನೆ ರೂಪುಗೊಂಡಿದೆ, (ಏಜೆನ್ಸೀಸ್).