Nuclear Weapons 
ದೇಶ

Nuclear Weapons: ಯಾರ ತಂಟೆಗೂ ಹೋಗಲ್ಲ, ಬಂದ್ರೆ ಮಾತ್ರ ಬಿಡಲ್ಲ! ಭಾರತದ 'ನೋ ಫಸ್ಟ್ ಯೂಸ್' ಪ್ಲಾನ್ ಈಗ ಮತ್ತಷ್ಟು ಭೀಕರ!

ನವದೆಹಲಿ: ಭಾರತ ತನ್ನ ಪರಮಾಣು ಶಸ್ತ್ರಾಸ್ತ್ರ (Nuclear Weapons) ನೀತಿಯಲ್ಲಿ ಅತ್ಯಂತ ಮಹತ್ವದ ಮತ್ತು ಸಡನ್ ಬದಲಾವಣೆ ಮಾಡಿಕೊಂಡಿದೆ. ದೇಶದ ರಕ್ಷಣೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತವು 12 ಅಣ್ವಸ್ತ್ರಗಳನ್ನು (Nuclear Warheads) 'ಸನ್ನದ್ಧ ಸ್ಥಿತಿ'ಯಲ್ಲಿ (ಯಾವಾಗ ಬೇಕಾದರೂ ಪ್ರಯೋಗಿಸಲು ಸಿದ್ಧವಾಗಿರುವಂತೆ) ನಿಯೋಜನೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ನಿಗಾ ಇಡುವ ಪ್ರಮುಖ ಸಂಸ್ಥೆಯಾದ 'ಸಿಪ್ರಿ' (SIPRI) ತನ್ನ ಹೊಸ ವರದಿಯಲ್ಲಿ ಈ ಮಹತ್ವದ ರಹಸ್ಯವನ್ನು ಬಹಿರಂಗಪಡಿಸಿದೆ.

ಏನಿದು ಹೊಸ ಬದಲಾವಣೆ?

ದಶಕಗಳಿಂದಲೂ ಭಾರತದ ರಕ್ಷಣಾ ನೀತಿ ಬೇರೆಯದ್ದೇ ಆಗಿತ್ತು. ಅಣ್ವಸ್ತ್ರಗಳು ಮತ್ತು ಅವುಗಳನ್ನು ಶತ್ರು ದೇಶಗಳ ಮೇಲೆ ಹಾಕುವ ಮಿಸೈಲ್ (ಕ್ಷಿಪಣಿ) ಅಥವಾ ರಾಕೆಟ್‌ಗಳನ್ನು ಬೇರೆ ಬೇರೆ ರಹಸ್ಯ ಜಾಗಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿತ್ತು. ಯುದ್ಧದ ಪರಿಸ್ಥಿತಿ ಬಂದರೆ ಮಾತ್ರ ಅವುಗಳನ್ನು ಒಟ್ಟಿಗೆ ಸೇರಿಸಿ ದಾಳಿಗೆ ಬಳಸಲಾಗುತ್ತಿತ್ತು. ಆದರೆ, ಈಗ ಮೊದಲ ಬಾರಿಗೆ ಭಾರತವು ತನ್ನ 12 ಅಣ್ವಸ್ತ್ರಗಳನ್ನು ನೇರವಾಗಿ ಕ್ಷಿಪಣಿಗಳು ಅಥವಾ ಸಬ್‌ಮರಿನ್‌ಗಳ (ಜಲಾಂತರ್ಗಾಮಿ) ಜೊತೆ ಜೋಡಿಸಿ, ದಾಳಿಗೆ ರೆಡಿಯಾಗಿರುವಂತೆ ಯುದ್ಧ ನೆಲೆಗಳಲ್ಲಿ ಇರಿಸಿದೆ ಎಂದು ಸ್ವೀಡನ್ ಮೂಲದ ಸಿಪ್ರಿ ಸಂಸ್ಥೆ ತಿಳಿಸಿದೆ.

ವರದಿಯಲ್ಲಿರುವ ಪ್ರಮುಖ ಅಂಶಗಳು

ಹೆಚ್ಚಿದ ಅಣ್ವಸ್ತ್ರಗಳ ಸಂಖ್ಯೆ: ಜನವರಿ 2026ರ ಹೊತ್ತಿಗೆ ಭಾರತದ ಬಳಿ ಇರುವ ಒಟ್ಟು ಅಣ್ವಸ್ತ್ರಗಳ ಸಂಖ್ಯೆ 190ಕ್ಕೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ ಅಲ್ಪ ಏರಿಕೆಯಾಗಿದೆ.
ಮೂರು ಕಡೆಯಿಂದಲೂ ದಾಳಿ ಸಾಮರ್ಥ್ಯ: ಭಾರತವು ಭೂಮಿ, ಆಕಾಶ (ವಿಮಾನ) ಮತ್ತು ಸಮುದ್ರ (ಜಲಾಂತರ್ಗಾಮಿ) ಮೂರೂ ಮಾರ್ಗಗಳ ಮೂಲಕ ಅಣ್ವಸ್ತ್ರ ದಾಳಿ ನಡೆಸುವ ಭದ್ರತಾ ವ್ಯವಸ್ಥೆಯನ್ನು (Nuclear Triad) ಸಂಪೂರ್ಣವಾಗಿ ಬಲಪಡಿಸಿಕೊಂಡಿದೆ.
ಭೂಗತ ನೆಲೆಗಳಲ್ಲಿ ಸಿದ್ಧತೆ: ಶತ್ರು ದೇಶಗಳ ಕಣ್ಣಿಗೆ ಬೀಳದಂತೆ ಭೂಮಿಯ ಒಳಗಿರುವ ಸೈಲೋಗಳಲ್ಲಿ (Underground Silos) ಮತ್ತು ಅತ್ಯಾಧುನಿಕ ಪರಮಾಣು ಜಲಾಂತರ್ಗಾಮಿ ನೌಕೆಗಳಲ್ಲಿ ಈ ರೆಡಿ-ಟು-ಫೈರ್ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ.

ಭಾರತದ 'ನೋ ಫಸ್ಟ್ ಯೂಸ್' ನೀತಿ

ಭಾರತವು ಅಣ್ವಸ್ತ್ರಗಳನ್ನು ದಾಳಿಗೆ ಸಿದ್ಧವಾಗಿಟ್ಟಿದ್ದರೂ, ತನ್ನ ಹಳೆಯ ಮತ್ತು ಪ್ರಮುಖ ನೀತಿಯಾದ "ನೋ ಫಸ್ಟ್ ಯೂಸ್" (No First Use) ಗೆ ಬದ್ಧವಾಗಿದೆ.
ಇದರ ಅರ್ಥವೇನು?: ಯಾವುದೇ ದೇಶದ ಮೇಲೆಯೂ ಭಾರತ ಮೊದಲು ಅಣ್ವಸ್ತ್ರ ದಾಳಿ ಮಾಡುವುದಿಲ್ಲ. ಆದರೆ, ಯಾವುದೇ ಶತ್ರು ದೇಶ ಭಾರತದ ಭೂಭಾಗದ ಮೇಲಾಗಲಿ ಅಥವಾ ಭಾರತೀಯ ಸೈನಿಕರ ಮೇಲಾಗಲಿ ಅಣ್ವಸ್ತ್ರ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಭಾರತವು ಅತ್ಯಂತ ಭೀಕರವಾಗಿ ತಿರುಗೇಟು ನೀಡಲು ಈ ಸಿದ್ಧತೆ ಮಾಡಿಕೊಂಡಿದೆ. ಭಾರತದ ಈ ಕ್ರಮವು ಯಾವುದೇ ದೇಶದೊಂದಿಗೆ ಯುದ್ಧ ಮಾಡಲು ಅಲ್ಲ, ಬದಲಿಗೆ ಶತ್ರುಗಳು ಭಾರತದ ತಂಟೆಗೆ ಬರದಂತೆ ತಡೆಯಲು (Deterrence) ಮಾತ್ರ ಎಂದು ವರದಿ ಹೇಳಿದೆ,(ಏಜೆನ್ಸೀಸ್​).