ವಾಷಿಂಗ್ಟನ್: ಮಗುವಿನ ಜನ್ಮ ನೀಡುವ ಸಮಯದಲ್ಲೇ ಭಾರತೀಯ ಮೂಲದ ಮಹಿಳೆಯೊಬ್ಬರು ( Indian woman ) ಹೃದಯಾಘಾತದಿಂದ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಹರಿತಾ ಎಂದು ಗುರುತಿಸಲಾಗಿದೆ. ಈಕೆ ತೆಲುಗು ಮಹಿಳೆ. ಮಗುವಿಗೆ ಜನ್ಮ ನೀಡುವ ಸಮಯದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತನ್ನ ನವಜಾತ ಶಿಶುವನ್ನು ಕೈಯಿಂದ ಎತ್ತಿಕೊಂಡು ಮುದ್ದಾಡುವ ಮುನ್ನವೇ ವಿಧಿ ಆಕೆಯ ಜೀವವನ್ನು ಕಸಿದುಕೊಂಡಿದ್ದು, ಆಕೆಯ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ತಾಯಿಯಾಗುವ ಖುಷಿಯನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದ ಹರಿತಾ, ಗರ್ಭದಲ್ಲಿದ್ದ ಮಗುವಿನೊಂದಿಗೆ ಪ್ರತಿದಿನ ಮಾತನಾಡುತ್ತಿದ್ದರು. ಮಗುವಿಗೆ ಕಥೆಗಳನ್ನು ಹೇಳುತ್ತಾ, ತಾನು ಆತನನ್ನು ನೋಡಲು ಎಷ್ಟು ಕಾತುರದಿಂದ ಕಾಯುತ್ತಿದ್ದೇನೆ ಎಂಬುದನ್ನು ಪ್ರೀತಿಯಿಂದ ವಿವರಿಸುತ್ತಿದ್ದರು. ಒಂಬತ್ತು ತಿಂಗಳುಗಳ ಕಾಲ ಮಗುವನ್ನು ಅತ್ಯಂತ ಜೋಪಾನವಾಗಿ ಹೊತ್ತುಕೊಂಡಿದ್ದ ಆಕೆಯ ಮನಸ್ಸು ಆನಂದದಿಂದ ತುಂಬಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು ಎಂಬುದನ್ನು ಆಕೆ ಊಹಿಸಿರಲಿಲ್ಲ. ಹೆರಿಗೆಯ ನೋವು ಶುರುವಾದಾಗ ತನ್ನ ಮುದ್ದು ಮಗುವನ್ನು ಕಣ್ಣುತುಂಬಿಕೊಳ್ಳುವ ಆಕೆಯ ಕನಸು ಅಪೂರ್ಣವಾಗಿಯೇ ಉಳಿಯಿತು.
ಪೂರ್ಣ ಗರ್ಭಾವಸ್ಥೆಯ ಬಳಿಕ ಹರಿತಾಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ, ಕುಟುಂಬದವರು ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆರಂಭದಲ್ಲಿ ವೈದ್ಯರು ಸಹಜ ಹೆರಿಗೆಗೆ (ನಾರ್ಮಲ್ ಡೆಲಿವರಿ) ಪ್ರಯತ್ನಿಸಿದರು. ಆದರೆ, ಹೆರಿಗೆಯ ಪ್ರಕ್ರಿಯೆ ಮುಂದುವರೆದಂತೆ ಆಕೆಯ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಉಸಿರಾಟದಲ್ಲಿ ತೀವ್ರ ತೊಂದರೆ ಉಂಟಾಗಿದ್ದರಿಂದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರ ಸ್ವರೂಪ ಪಡೆದುಕೊಂಡಿತು.
ಹರಿತಾಳ ಹದಗೆಡುತ್ತಿರುವ ಆರೋಗ್ಯವನ್ನು ಗಮನಿಸಿದ ವೈದ್ಯಕೀಯ ತಂಡವು, ಮಗುವಿನ ಜೀವ ಉಳಿಸಲು ತಕ್ಷಣವೇ ತುರ್ತು ಸಿ-ಸೆಕ್ಷನ್ (Cesarean) ಶಸ್ತ್ರಚಿಕಿತ್ಸೆಯನ್ನು ನಡೆಸಿತು. ವೈದ್ಯರ ಸಮಯೋಚಿತ ಪ್ರಯತ್ನದಿಂದ ಗಂಡು ಮಗು ಸುರಕ್ಷಿತವಾಗಿ ಜನಿಸಿತು. ಆದರೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹರಿತಾ ಅವರಿಗೆ ಹಠಾತ್ ಹೃದಯಾಘಾತ (Cardiac Arrest) ಸಂಭವಿಸಿತು. ವೈದ್ಯರು ಆಕೆಯ ಜೀವ ಉಳಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ, ಆಕೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.
ಮಗು ಜನಿಸಿದ ಸಂಭ್ರಮದಲ್ಲಿರಬೇಕಾದ ಆ ಕುಟುಂಬದಲ್ಲಿ ಈಗ ಮರಣದ ದಟ್ಟ ಕಾರ್ಮೋಡ ಆವರಿಸಿದೆ. ಹರಿತಾಳ ಪ್ರಾಣಪಕ್ಷಿ ಹಾರಿಹೋಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ಬಂಧು-ಬಳಗ ಹಾಗೂ ಸ್ನೇಹಿತರು ಕಣ್ಣೀರಿನಲ್ಲಿ ಮುಳುಗಿದರು. ನವಜಾತ ಶಿಶುವು ತನ್ನ ಹುಟ್ಟಿನ ಕ್ಷಣದಲ್ಲೇ ತಾಯಿಯ ಪ್ರೀತಿ-ಸ್ಪರ್ಶದಿಂದ ವಂಚಿತವಾಗಿರುವುದು ಎಲ್ಲರಲ್ಲೂ ಮರುಗುವಂತೆ ಮಾಡಿದೆ. ಅಮೆರಿಕದಲ್ಲಿ ನಡೆದ ಈ ದುರ್ಘಟನೆಯು ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದೆ.
ಹಬ್ಬದ ಸಂಭ್ರಮದಲ್ಲಿರಬೇಕಾದ ಆ ಮನೆಯಲ್ಲಿ ಈಗ ಆಕ್ರಂದನ ಮುಗಿಲುಮುಟ್ಟಿದೆ. ಹೆರಿಗೆಯ ನೋವಿನಲ್ಲೂ ಮಗುವಿನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ತಾಯಿಯೊಬ್ಬಳ ಈ ಅಕಾಲಿಕ ಅಂತ್ಯವು ಮಾತೃತ್ವದ ಮೌಲ್ಯ ಮತ್ತು ಹೆರಿಗೆಯ ಸಮಯದಲ್ಲಿ ತಾಯಂದಿರು ಎದುರಿಸುವ ಆರೋಗ್ಯದ ಅಪಾಯಗಳ ಗಂಭೀರತೆಯನ್ನು ಮತ್ತೊಮ್ಮೆ ಕಣ್ಣಿಗೆ ಕಟ್ಟಿದೆ. ಹರಿತಾಳ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಆಕೆಯ ಕುಟುಂಬಕ್ಕೆ ನೀಡಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ, (ಏಜೆನ್ಸೀಸ್).