ಹತ್ಯೆಯಾದ ನಿಕಿತಾ ಗೋಡಿಶಾಲಾ 
ದೇಶ

ಅಮೆರಿಕಾದಲ್ಲಿ ಭಾರತದ ಯುವತಿಯ ಬರ್ಬರ ಹತ್ಯೆ: ಆಕೆಯ ಮಾಜಿ ಗೆಳೆಯನೇ ಕೊಲೆ ಆರೋಪಿ | woman murder

ನ್ಯೂಯಾರ್ಕ್​: ಅಮೆರಿಕಾದ ಮೇರಿಲ್ಯಾಂಡ್‌ನ ಕೊಲಂಬಿಯಾದಲ್ಲಿ 27 ವರ್ಷದ ಭಾರತೀಯ ಮೂಲದ ನಿಕಿತಾ ಗೋಡಿಶಾಲಾ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಶವ ಆಕೆಯ ಮಾಜಿ ಗೆಳೆಯನ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಡಿ. 31ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಆಘಾತಾಕಾರಿ ಘಟನೆಯಲ್ಲಿ ಆಕೆಯ ಗೆಳೆಯ ಅರ್ಜುನ್ ಶರ್ಮಾ ಕೊಲೆ ಮಾಡಿ ಪೊಲೀಸ್ ಠಾಣೆ ತೆರಳಿ ನಿಕಿತಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಬಳಿಕ ಜ. 2ರಂದು ಭಾರತಕ್ಕೆ ವಾಪಾಸ್ ಆಗಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹೊವಾರ್ಡ್ ಕೌಂಟಿ ಪೊಲೀಸರು, ಶರ್ಮಾ ಜನವರಿ 2 ರಂದು ನಾಪತ್ತೆ ದೂರು ದಾಖಲಿಸಿದ್ದು, ಹೊಸ ವರ್ಷದ ಮುನ್ನಾದಿನದಿಂದ ಗೋಡಿಶಾಲಾ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾನೆ. ಮೇರಿಲ್ಯಾಂಡ್‌ನ ಕೊಲಂಬಿಯಾದ ಟ್ವಿನ್ ರಿವರ್ಸ್ ರಸ್ತೆಯಲ್ಲಿರುವ ತನ್ನ ಫ್ಲಾಟ್‌ನಲ್ಲಿ ಅವಳನ್ನು ಕೊನೆಯ ಬಾರಿಗೆ ನೋಡಿದ್ದಾಗಿ ತಿಳಿಸಿದ್ದಾನೆ. ಆದರೆ ಅರ್ಜುನ್ ದೂರು ನೀಡಿದ ದಿನವೇ ಭಾರತಕ್ಕೆ ತೆರಳಿದ್ದು, ಇದು ಅನುಮಾನಕ್ಕೆ ಬಂದು ಅವರ ಅಪಾರ್ಟ್​ಮೆಂಟ್ ಪರಿಶೀಲಿಸಿದಾಗ ನಿಕಿತಾ ಶವ ಪತ್ತೆಯಾಗಿದೆ. ಶವದ ಮೇಲೆ ಗಾಯಗಳಾಗಿದ್ದವು ಎಂದು ತಿಳಿಸಿದ್ದಾರೆ.
ಆರೋಪಿ ಅರ್ಜುನ್ ಶರ್ಮಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಆತನನ್ನು ಪತ್ತೆಹಚ್ಚಲು ಮತ್ತು ಕೊಲೆಯ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕೊಲೆಯಾದ ನಿಕಿತಾ ತೆಲಂಗಾಣ ಮೂಲದ ಸಿಕಂದರಾಬಾದ್​ನವರು ಎನ್ನಲಾಗಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿಕಿತಾ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲಾ ಕಾನ್ಸುಲರ್ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದೆ (ಏಜೆನ್ಸೀಸ್).