ಚಂಡೀಗಢ: ಬ್ರಿಟನ್ನಲ್ಲಿ ಹರಿಯಾಣ ಮೂಲದ 30 ವರ್ಷದ ಯುವಕನನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದು(Student death), ಮೃತದೇಹವನ್ನು ಅಂತ್ಯಕ್ರಿಯೆಗೆ ದೇಶಕ್ಕೆ ತರಲು ಸಹಾಯ ಮಾಡುವಂತೆ ಕೋರಿ ಆತನ ಕುಟುಂಬವು ವಿದೇಶಾಂಗ ಸಚಿವ ಜೈ ಶಂಕರ್ಗೆ ಪತ್ರ ಬರೆದಿದೆ ಎಂದು ಭಾನುವಾರ(ನ. 30) ವರದಿಯಾಗಿದೆ.
ವಿಜಯ್ ಕುಮಾರ್ ಶಿಯೋರನ್(30) ಕೊಲೆಯಾದ ವಿದ್ಯಾರ್ಥಿ. ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡ್ತಿದ್ದ ಎನ್ನಲಾಗಿದೆ. ನ. 25ರಂದು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
ಚರ್ಖಿ ದಾದ್ರಿ ಜಿಲ್ಲೆಯ ಬಾಧ್ರಾ ಉಪವಿಭಾಗದ ಜಗಂಬಾಸ್ ಗ್ರಾಮದ ಮೃತ ವಿಜಯ್ಕುಮಾರ್ ಹಿರಿಯ ಸಹೋದರ ರವಿ ಕುಮಾರ್, ಮೃತದೇಹ ತರಲು ಸಹಾಯ ಕೋರಿ ಪತ್ರ ಬರೆದಿದ್ದಾರೆ.
ಜೈ ಶಂಕರ್ಗೆ ಪತ್ರದಲ್ಲಿ, ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ನನ್ನ ಕಿರಿಯ ಸಹೋದರ ವಿಜಯ್ ಕುಮಾರ್ ಅವರನ್ನು ನ. 25ರಂದು ಕೆಲವು ವ್ಯಕ್ತಿಗಳು ಇರಿದು ಹತ್ಯೆ ಮಾಡಿದ್ದಾರೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಸ್ಥಳೀಯ ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ದುರದೃಷ್ಟಕರ ಘಟನೆಯಿಂದ ನಮ್ಮ ಕುಟುಂಬವು ದುಃಖಿತವಾಗಿದೆ. ಈ ನೋವಿನ ಸಮಯದಲ್ಲಿ ನನ್ನ ಸಹೋದರನ ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ಭಾರತಕ್ಕೆ ತರಲು ಸಚಿವಾಲಯದ ಬೆಂಬಲವನ್ನು ನಾವು ಕೋರುತ್ತೇವೆ ಎಂದು ಬರೆದಿದ್ದಾರೆ.
ಇನ್ನೂ ವಿದ್ಯಾರ್ಥಿ ಸಾವಿನ ಬಗ್ಗೆ ಇಂಗ್ಲೆಂಡ್‌ನ ವೆಸ್ಟ್ ಮರ್ಸಿಯಾ ಪೊಲೀಸರು ಮಾತನಾಡಿದ್ದು, ವೋರ್ಸೆಸ್ಟರ್‌ನಲ್ಲಿ ಕೊಲೆ ತನಿಖೆ ಪ್ರಾರಂಭವಾದ ಬಳಿಕ ನಾವು ಮಾಹಿತಿಗಾಗಿ ಮನವಿ ಮಾಡಿದ್ದೇವೆ. ಮಂಗಳವಾರ ಬೆಳಿಗ್ಗೆ (ನ. 25) ಬೆಳಿಗ್ಗೆ 4:15 ರ ಸುಮಾರಿಗೆ ಬಾರ್ಬೋರ್ನ್ ರಸ್ತೆಯಲ್ಲಿ 30 ವರ್ಷದ ವ್ಯಕ್ತಿಯೊಬ್ಬರು ಗಂಭೀರ ಗಾಯಗಳೊಂದಿಗೆ ಅಧಿಕಾರಿಗಳಿಗೆ ಕಂಡು ಬಂದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಂದೇ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು. ಕೊಲೆ ಶಂಕೆ ಮೇಲೆ ಐವರನ್ನು ಬಂಧಿಸಿದ್ದು, ಈಗ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಘಟನೆಗೆ ಕಾರಣವೇನು ಎಂಬ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).