ಗುಜರಾತ್ ಮೂಲದ ವಜ್ರದ ಉದ್ಯಮಿ ಅಪಹರಣ: ಬರೋಬ್ಬರಿ 44 ಕೋಟಿ ರೂ. ಕೊಟ್ಟ ಬಳಿಕ ಬಿಡುಗಡೆ! Diamond Trader
- ಮಾಲಿಯಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ಮೂಲದ ವಜ್ರದ ಉದ್ಯಮಿ ಬಿಡುಗಡೆ
- 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಸಶಸ್ತ್ರ ಅಪಹರಣಕಾರರು
- ಅಪಹರಣಕಾರರ ಜತೆ ಸತತವಾಗಿ ಸಂಧಾನ ಸಭೆ ನಡೆಸಿದ ಉದ್ಯಮಿಯ ಕುಟುಂಬ
- ಕೊನೆಗೆ 44 ಕೋಟಿ ರೂ. ನೀಡಿದ ಬಳಿಕ ಉದ್ಯಮಿಯನ್ನು ಬಿಡುಗಡೆ ಮಾಡಿದ ಅಪಹರಣಕಾರರು
ಬಮಾಕೋ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ಮೂಲದ ಉದ್ಯಮಿಯೊಬ್ಬರು ( Diamond Trader ) ಕೋಟ್ಯಂತರ ರೂಪಾಯಿ ನೀಡಿ ಪ್ರಾಣಾಪಾಯದಿಂದ ಪಾರಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಪಹರಣಕಾರರ ಈ ಕೃತ್ಯದಿಂದ ಇಡೀ ವಜ್ರೋದ್ಯಮ ಕ್ಷೇತ್ರವೇ ಇದೀಗ ತಲ್ಲಣಗೊಂಡಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಅಪಹರಣಕ್ಕೊಳಗಾಗಿದ್ದ 75 ವರ್ಷದ ಭಾರತೀಯ ಮೂಲದ ವಜ್ರದ ಉದ್ಯಮಿ ಧೀರೂ ರಮಣಿ ಕೊನೆಗೂ ಸಶಸ್ತ್ರ ಅಪಹರಣಕಾರರ ಬಂಧನದಿಂದ ಬಿಡುಗಡೆಯಾಗಿದ್ದಾರೆ. ಉದ್ಯಮಿಯನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಅವರ ಕುಟುಂಬಸ್ಥರು ಅಪಹರಣಕಾರರಿಗೆ ಬರೋಬ್ಬರಿ 4 ಮಿಲಿಯನ್ ಯುರೋ (ಸುಮಾರು 44 ಕೋಟಿ ರೂಪಾಯಿ) ನೀಡಿದ್ದಾರೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ.
ಮಾಲಿಯಲ್ಲಿ ಇತ್ತೀಚೆಗೆ ಚಿನ್ನದ ಗಣಿಯೊಂದನ್ನು ಖರೀದಿಸಿದ್ದ ಧೀರೂ ರಮಣಿ, ಉದ್ಯಮದ ನಿಮಿತ್ತ ಕಳೆದ ಕೆಲವು ಸಮಯದಿಂದ ಅಲ್ಲೇ ವಾಸಿಸುತ್ತಿದ್ದರು. ಈ ವೇಳೆ ಸಶಸ್ತ್ರ ದುಷ್ಕರ್ಮಿಗಳ ಗುಂಪೊಂದು ಅವರನ್ನು ಅಪಹರಿಸಿತ್ತು. ಆರಂಭದಲ್ಲಿ ದುಷ್ಕರ್ಮಿಗಳು ರಮಣಿ ಅವರ ಬಿಡುಗಡೆಗಾಗಿ ಭಾರಿ ಪ್ರಮಾಣದ ಅಂದರೆ ಸುಮಾರು 100 ಕೋಟಿ ರೂಪಾಯಿ ಹಣ ನೀಡುವಂತೆ ಬೆದರಿಕೆ ಒಡ್ಡಿದ್ದರು.
ಆದರೆ, ಅಮೆರಿಕದಲ್ಲಿ ನೆಲೆಸಿರುವ ರಮಣಿ ಅವರ ಕುಟುಂಬಸ್ಥರು ಅಪಹರಣಕಾರರೊಂದಿಗೆ ಸತತ ಸಂಧಾನ ನಡೆಸಿ, ಕೊನೆಗೆ ಬಿಡುಗಡೆ ಮೊತ್ತವನ್ನು 44 ಕೋಟಿ ರೂಪಾಯಿಗೆ ಇಳಿಸುವಲ್ಲಿ ಯಶಸ್ವಿಯಾದರು. ಕಳೆದ ವಾರ ಕುಟುಂಬಸ್ಥರು ನಿಗದಿತ ಹಣವನ್ನು ಪಾವತಿಸಿದ ಬಳಿಕವೇ ಅಪಹರಣಕಾರರು ರಮಣಿ ಅವರನ್ನು ಮುಕ್ತಗೊಳಿಸಿದ್ದಾರೆ ಎಂದು ಪಿಟಿಐ ಸಂಸ್ಥೆಗೆ ಮೂಲಗಳು ಮಾಹಿತಿ ನೀಡಿವೆ.
ಬಿಡುಗಡೆಯಾಗಿದ್ದರೂ ಧೀರೂ ರಮಣಿ ಅವರು ಸದ್ಯ ಮಾಲಿಯಲ್ಲೇ ಉಳಿದುಕೊಂಡಿದ್ದಾರೆ. ಅಪಹರಣ ನಡೆದ ಸಂದರ್ಭಗಳು ಮತ್ತು ಅವರ ಬಿಡುಗಡೆಯ ಹಿಂದಿನ ಪ್ರಕ್ರಿಯೆಗಳ ಕುರಿತು ಅಲ್ಲಿನ ಸ್ಥಳೀಯ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸುತ್ತಿವೆ. ಇಡೀ ಸಂಧಾನ ಪ್ರಕ್ರಿಯೆಯನ್ನು ಅಮೆರಿಕದಲ್ಲಿರುವ ರಮಣಿ ಕುಟುಂಬವೇ ಸ್ವತಃ ನಡೆಸಿದ್ದು, ಇದರಲ್ಲಿ ಯಾವುದೇ ಭಾರತೀಯ ಸರ್ಕಾರಿ ಸಂಸ್ಥೆಗಳು ಭಾಗಿಯಾಗಿರಲಿಲ್ಲ.
ಮೂಲತಃ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಧಾರಾ ಗ್ರಾಮದವರಾದ ಧೀರೂ ರಮಣಿ, 1980ರ ದಶಕದಿಂದಲೂ ಸೂರತ್‌ನ ವಜ್ರದ ವ್ಯಾಪಾರದಲ್ಲಿ ಸಕ್ರಿಯರಾಗಿದ್ದರು. ತದನಂತರ ಅಮೆರಿಕಕ್ಕೆ ಸ್ಥಳಾಂತರಗೊಂಡ ಅವರ ಕುಟುಂಬ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ವಜ್ರದ ಉದ್ಯಮವನ್ನು ನಡೆಸಿಕೊಂಡು ಬರುತ್ತಿದೆ.
ಇನ್ನು ಅಪಹರಣ ನಡೆದ ಏಪ್ರಿಲ್ ಅವಧಿಯಲ್ಲೇ ಮಾಲಿಯ ರಾಜಧಾನಿ ಬಮಾಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಜಾಗರೂಕತೆಯಿಂದಿರುವಂತೆ ಭದ್ರತಾ ಸಲಹೆ ನೀಡಿತ್ತು. ಮಾಲಿಯ ಪ್ರಮುಖ ಪ್ರದೇಶಗಳಲ್ಲಿ ನಿರಂತರ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು ಮತ್ತು ಸುರಕ್ಷಿತವಾಗಿರಲು ಭಾರತೀಯರಿಗೆ ಸೂಚಿಸಲಾಗಿತ್ತಾದರೂ, ಆ ಪ್ರಕಟಣೆಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಅಪಹರಣದ ಉಲ್ಲೇಖವಿರಲಿಲ್ಲ, (ಏಜೆನ್ಸೀಸ್).