- ಮಹಿಳೆಯೊಬ್ಬರು ಮೊದಲ ಬಾರಿಗೆ ಬ್ಲಿಂಕಿಟ್ ಬಳಸಿ ತನಗೆ ಬೇಕಾದ ವಸ್ತುವನ್ನು ತರಿಸಿಕೊಂಡು ಸಂಭ್ರಮಿಸಿದ್ದಾರೆ
- ತಂತ್ರಜ್ಞಾನವು ಕೇವಲ ಯುವಜನತೆಗೆ ಮಾತ್ರವಲ್ಲ, ಹಿರಿಯ ತಲೆಮಾರಿನವರಿಗೂ ಹೇಗೆ ಹೊಸ ಲೋಕವನ್ನು ಪರಿಚಯಿಸಬಹುದು
- ಸಾಮಾನ್ಯವಾಗಿ ಹಿರಿಯರು ಇಂತಹ ತಾಂತ್ರಿಕ ವಿಷಯಗಳಿಗೆ ಮಕ್ಕಳನ್ನು ಅವಲಂಬಿಸುತ್ತಾರೆ
Blinkit Order: ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳೆಯೊಬ್ಬರು ಮೊದಲ ಬಾರಿಗೆ ಬ್ಲಿಂಕಿಟ್ ಬಳಸಿ ತನಗೆ ಬೇಕಾದ ವಸ್ತುವನ್ನು ತರಿಸಿಕೊಂಡು ಸಂಭ್ರಮಿಸುತ್ತಿರುವ ವಿಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗಿದೆ. ಆದಾಗ್ಯೂ, ತಂತ್ರಜ್ಞಾನವು ಕೇವಲ ಯುವಜನತೆಗೆ ಮಾತ್ರವಲ್ಲ, ಹಿರಿಯ ತಲೆಮಾರಿನವರಿಗೂ ಹೇಗೆ ಹೊಸ ಲೋಕವನ್ನು ಪರಿಚಯಿಸಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಘಟನೆ ಏನು?
ಪ್ರಣಾಲಿ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಅವರ ತಾಯಿ ಮೊದಲ ಬಾರಿಗೆ ಬ್ಲಿಂಕಿಟ್ (Blinkit) ಎಂಬ ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್ ಅನ್ನು ಬಳಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾರೆ. ಸಾಮಾನ್ಯವಾಗಿ ಹಿರಿಯರು ಇಂತಹ ತಾಂತ್ರಿಕ ವಿಷಯಗಳಿಗೆ ಮಕ್ಕಳನ್ನು ಅವಲಂಬಿಸುತ್ತಾರೆ. ಆದರೆ, ಇಲ್ಲಿ ಪ್ರಣಾಲಿಯವರ ತಾಯಿ ತಾವೇ ಸ್ವತಃ ಪ್ರಯತ್ನಿಸಿ ಯಶಸ್ವಿಯಾಗಿ ಆರ್ಡರ್ ಮಾಡಿದ್ದು, ಆ ನಂತರ ಅವರು ವ್ಯಕ್ತಪಡಿಸಿದ ಮುಗ್ಧ ಸಂಭ್ರಮ ನೆಟ್ಟಿಗರ ಮನ ಗೆದ್ದಿದೆ.
"ಅವರು ಮುಗ್ಧ ಪೋಷಕರ ಕೊನೆಯ ತಲೆಮಾರಿನವರು. ಅವಳು ಹೇಗೆ ಆರ್ಡರ್ ಮಾಡಬೇಕೆಂದು ನಮ್ಮನ್ನು ಕೇಳದೆ @letsblinkit ನಿಂದ ತನ್ನ ಮೊದಲ ಆರ್ಡರ್ ಮಾಡಿ ತುಂಬಾ ಸಂತೋಷವಾಗಿದ್ದಾಳೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?
ವಿಡಿಯೋ ಆರಂಭದಲ್ಲಿ ಮಹಿಳೆಯು ತುಂಬಾ ಖುಷಿಯಿಂದ ಕೋಣೆಗೆ ಪ್ರವೇಶಿಸಿ ಮಗಳ ಬಳಿ ನಾನು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ್ದೇನೆ ಎಂದು ಹೇಳುತ್ತಾ ಬರುತ್ತಾಳೆ. ಈ ವೇಳೆ ಮಗಳು ಆಶ್ಚರ್ಯದಿಂದ ನೋಡುತ್ತಾ, ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಇದು ನಿಮ್ಮ ಮೊದಲ ಆರ್ಡರ್ ಎಂದು ಪ್ರಶ್ನಿಸುತ್ತಾಳೆ.
ಇದಾದ ಬಳಿಕ ಮತ್ತೊಬ್ಬ ಮಗಳು ಕೋಣೆಗೆ ಪ್ರವೇಶಿಸಿ, ತನ್ನ ತಾಯಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ನನ್ನ ತಾಯಿ ಮೊದಲ ಬಾರಿಗೆ ಬ್ಲಿಂಕಿಟ್ನಿಂದ ಆರ್ಡರ್ ಮಾಡಿದ್ದಾರೆ ಎಂದು ಹೆಮ್ಮೆ ಪಡುತ್ತಿರುವುದನ್ನು ಕಾಣಬಹುದಾಗಿದೆ.
ಸಿಹಿ ಮತ್ತು ಮುಗ್ಧ ಪ್ರತಿಕ್ರಿಯೆಗಳು
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸಾವಿರಾರು ಜನರು ಮಹಿಳೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಅತ್ಯಂತ ಭಾವುಕರಾಗಿ, "ಓಹ್, ನನಗೂ ನನ್ನ ತಾಯಿಯೊಂದಿಗೆ ಇದು ಅನುಭವವಾಗಿದೆ. ಇದು ತುಂಬಾ ಸಿಹಿ ಮತ್ತು ಮುಗ್ಧವಾಗಿದೆ," ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ತಮ್ಮ ತಾಯಿಯ ಡಿಜಿಟಲ್ ಪಯಣವನ್ನು ನೆನಪಿಸಿಕೊಳ್ಳುತ್ತಾ, "ನನ್ನ ತಾಯಿ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ನನಗೆ ಫೋಟೋ ಕಳುಹಿಸಿದಾಗ ತುಂಬಾ ಉತ್ಸುಕರಾಗಿದ್ದರು," ಎಂದು ಹಂಚಿಕೊಂಡಿದ್ದಾರೆ (ಏಜೆನ್ಸೀಸ್).