ನವದೆಹಲಿ: 2028ರ ವೇಳೆಗೆ ಭಾರತದಲ್ಲೇ ವಿನ್ಯಾಸಗೊಳಿಸಿ, ತಯಾರಿಸಲ್ಪಡುವ ಭಾರತೀಯ ಬ್ರ್ಯಾಂಡ್‌ನ ಮೊಬೈಲ್, ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ತರುವುದಾಗಿ ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆ್ಯಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಜಾಗತಿಕ ಕಂಪನಿಗಳ ಮಾದರಿಯಲ್ಲಿ ಭಾರತವೂ ಮೊಬೈಲ್ ಉದ್ಯಮದಲ್ಲಿ ತನ್ನದೇ ಆದ ಗುರುತನ್ನು ಸ್ಥಾಪಿಸಲಿದೆ ಎಂದು ಹೇಳಿದ ಸಚಿವರು, 2028ರ ಅಕ್ಟೋಬರ್ 23ರ ವೇಳೆಗೆ ಭಾರತದಲ್ಲೇ ವಿನ್ಯಾಸಗೊಳಿಸಿದ, ಉತ್ಪಾದನೆಯಾಗುವ ಮತ್ತು ಬ್ರ್ಯಾಂಡ್ ಹೊಂದಿರುವ ಮೊಬೈಲ್ ಫೋನ್‌ಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.
ಮೊಬೈಲ್ ಫೋನ್ ವಿನ್ಯಾಸಗೊಳಿಸುವುದು ಅತ್ಯಂತ ದೊಡ್ಡ ಪ್ರಕ್ರಿಯೆ. ಸಣ್ಣ ಸಾಧನದೊಳಗೆ ಆಂಟೆನಾ, ರೇಡಿಯೊ ಫ್ರೀಕ್ವೆನ್ಸಿ ಸಂವಹನ ವ್ಯವಸ್ಥೆ, ಪ್ರೊಸೆಸರ್, ಮೆಮೊರಿ, ಕ್ಯಾಮರಾ, ಡಿಸ್‌ಪ್ಲೇ ಮತ್ತು ವಿದ್ಯುತ್ ನಿರ್ವಹಣಾ ವ್ಯವಸ್ಥೆ ಸೇರಿದಂತೆ ಹಲವು ಘಟಕಗಳನ್ನು ಅಳವಡಿಸಬೇಕಾಗುತ್ತದೆ. ಅದರ ತೂಕ ಮತ್ತು ವಿದ್ಯುತ್ ಬಳಕೆಯನ್ನೂ ಸಮತೋಲನಗೊಳಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸುಮಾರು ಮೂರೂವರೆ ವರ್ಷಗಳ ಹಿಂದೆ ಭಾರತೀಯ ವಿನ್ಯಾಸಕರಿಗೆ ಮೊಬೈಲ್‌ನ ಮುಖ್ಯ ಸರ್ಕ್ಯೂಟ್ ಬೋರ್ಡ್ (PCB) ವಿನ್ಯಾಸಗೊಳಿಸುವ ಸವಾಲು ಕೊಡಲಾಗಿತ್ತು. ಇದಕ್ಕೆ ಎರಡು ಕಂಪನಿಗಳು ಮುಂದೆ ಬಂದವು. ಅವುಗಳಲ್ಲಿ ಒಂದು ಕಂಪನಿಯ ವಿನ್ಯಾಸವನ್ನು ಅಮೆರಿಕದ ಅತಿದೊಡ್ಡ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಕ್ಕೆ ಆಯ್ಕೆ ಮಾಡಲಾಗಿದೆ. ಆ ಕಂಪನಿಯು 5ಜಿ ಪ್ಲಸ್ ಮೊಬೈಲ್ ಫೋನ್ ವಿನ್ಯಾಸಗೊಳಿಸಿ, ತಯಾರಿಸಿ, ಗ್ರಾಹಕರಿಗೆ ತಲುಪಿಸಿದೆ ಎಂದರು.
ಭಾರತದಲ್ಲಿ ಮೊಬೈಲ್ ಫೋನ್, ಡ್ರೋನ್‌ಗಳು, ಕ್ಷಿಪಣಿಗಳು, ರೈಲು ಮತ್ತು ಸುಧಾರಿತ ಉಪಕರಣಗಳ ಉತ್ಪಾದನೆ ವೇಗದ ಪ್ರಗತಿ ಕಾಣುತ್ತಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಈಗ ಭಾರತದ ಮೂರನೇ ಅತಿದೊಡ್ಡ ರಫ್ತು ವಿಭಾಗವಾಗಿವೆ. ಮುಂದಿನ ದಿನಗಳಲ್ಲಿ ಎರಡನೇ ಸ್ಥಾನಕ್ಕೆ ಏರುವ ನಿರೀಕ್ಷೆಯಿದೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಮೇಕ್ ಇನ್ ಇಂಡಿಯಾ’ಗೆ ಆದ್ಯತೆ ನೀಡಲಾಗಿದೆ. ಹಿಂದಿನ ಸರ್ಕಾರಗಳ ನಿಯಮಗಳು ಮತ್ತು ನಿಯಂತ್ರಣಗಳು ಉತ್ಪಾದನಾ ವಲಯದ ಬೆಳವಣಿಗೆಗೆ ಅಡ್ಡಿಯಾಗಿದ್ದವು ಎಂದು ಟೀಕಿಸಿದರು.
2028ರ ವೇಳೆಗೆ ಭಾರತೀಯ ವಿನ್ಯಾಸ ಮತ್ತು ಬ್ರ್ಯಾಂಡ್ ಹೊಂದಿರುವ ಮೊಬೈಲ್ ಫೋನ್‌ಗಳನ್ನು ಪರಿಚಯಿಸುವ ಗುರಿ ಸಾಧಿಸಲು ದೇಶದಲ್ಲಿ ಈಗಾಗಲೇ ಬೆಳೆದಿರುವ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ,(ಏಜೆನ್ಸೀಸ್).