- ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ಕಾರ್ಯಾಚರಣೆ
- ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಬಲಿ
- ಹತ್ಯೆಯಾದ ಇಬ್ಬರು ಉಗ್ರರು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ
ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಬುಧವಾರ (ಫೆ.3) ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ (Terrorist) ಸಂಘಟನೆಯ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆಗೀಡಾದ ಭಯೋತ್ಪಾದಕರನ್ನು ಜೈಶ್-ಎ-ಮೊಹಮ್ಮದ್ ಕಮಾಂಡರ್‌ಗಳಾದ ಮಾವಿ ಮತ್ತು ಜುಬೈರ್ ಎಂದು ಗುರುತಿಸಲಾಗಿದ್ದು, ಅವರ ಶವಗಳ ಜತೆಯಲ್ಲಿ ಎಕೆ 47 ಮತ್ತು ಎಂ 4 ಕಾರ್ಬೈನ್ ರೈಫಲ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮಂಗಳವಾರ (ಫೆ.3) ಸಂಜೆ 4 ಗಂಟೆ ಸುಮಾರಿಗೆ ರಾಮನಗರದ ಜಾಫರ್ ಅರಣ್ಯ ಪ್ರದೇಶದ ಗುಹೆಯೊಳಗೆ ಭಯೋತ್ಪಾದಕರು ಅಡಗಿ ಕುಳುತ ಕುರಿತು ಮಾಹಿತಿ ದೊರೆತ ಹಿನ್ನಲೆ ಭಾರತೀಯ ಸೇವೆಯು ಕಾರ್ಯಾಚರಣೆಯನ್ನು ಆರಂಭಿಸಿದೆ.
ಭದ್ರತಾ ಪಡೆಗಳು ಗುಹೆಯ ಹತ್ತಿರ ಸಮೀಪಿಸುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಎರಡೂ ಕಡೆಯ ನಡುವೆ ಗುಂಡಿನ ಚಕಮಕಿಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ. ಭಯೋತ್ಪಾದಕರು ಕತ್ತಲೆಯ ಮರೆಯಲ್ಲಿ ಓಡಿಹೋಗಲು ಪ್ರಯತ್ನಿಸಿದಾಗ ಪ್ಯಾರಾಟ್ರೂಪರ್‌ಗಳು ಮತ್ತು ಶ್ವಾನ ದಳಗಳು ಅವರನ್ನು ಸುತ್ತುವರೆದಿದ್ದಾರೆ.
ಬುಧವಾರ (ಫೆ.4) ಬೆಳಿಗ್ಗೆ ಭದ್ರತಾ ಪಡೆಗಳು, ಅಡಗಿಕೊಂಡಿದ್ದ ಭಯೋತ್ಪಾದಕರ ಮೇಲೆ ಮತ್ತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಜೈಶ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ನಡೆಸಿವೆ ಎಂದು ವರದಿಯಾಗಿದೆ.
ಈ ಇಬ್ಬರು ಭಯೋತ್ಪಾದಕರು ಏಕೆ ಕಾಶ್ಮೀರದೊಳಗೆ ಬಂದಿದ್ದರು ಮತ್ತು ಇವರ ಯೋಜನೆಗಳು ಏನಾಗಿತ್ತು ಎಂಬುದರ ಕುರಿತು ಗುಪ್ತಚರ ಇಲಾಖೆ ಮಾಹಿತಿ ಕಲೆಹಾಕುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಸಂಪೂರ್ಣ ವಿವಿರಣೆ ಮಾಧ್ಯಮಗಳಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್).