Modi in Rajkot | ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ
ಗಾಂಧಿನಗರ: ಭಾರತದ ಆರ್ಥಿಕತೆಯು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ವೇಗವಾಗಿ ಮುಂದುವರಿಯುತ್ತಿದ್ದು, ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಜ.11) ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ನಡೆದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಲ್ಲಿನ ಇತ್ತೀಚಿನ ರಾಜಕೀಯ ಸಂಘರ್ಷವನ್ನು ಉಲ್ಲೇಖಿಸಿ, ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ಅಭೂತಪೂರ್ವ ನಿಶ್ಚಿತತೆಯನ್ನು ಕಾಣುತ್ತಿದೆ ಎಂದರು.
ಭಾರತದ ಬೆಳವಣಿಗೆಯು ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ ಎಂಬ ಮಂತ್ರದ ಯಶೋಗಾಥೆಯನ್ನು ಪ್ರತಿಬಿಂಬಿಸುತ್ತದೆ ಎಂದಿರುವ ಪ್ರಧಾನಿ ಮೋದಿ, ಮೂಲಸೌಕರ್ಯದ ಜೊತೆಗೆ ಉದ್ಯಮಕ್ಕೆ ಸಿದ್ಧವಾಗಿರುವ ಕಾರ್ಯಪಡೆಯು ಅತ್ಯಂತ ದೊಡ್ಡ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ವೈಬ್ರಂಟ್ ಗುಜರಾತ್ ಶೃಂಗಸಭೆಗೆ ವೇದಿಕೆ ಸಿದ್ಧವಾದಾಗಲೆಲ್ಲಾ, ನಾನು ಅದನ್ನು ಕೇವಲ ಮತ್ತೊಂದು ಶೃಂಗಸಭೆಯಾಗಿ ನೋಡುವುದಿಲ್ಲ. 21 ನೇ ಶತಮಾನದ ಆಧುನಿಕ ಭಾರತದ ಪ್ರಯಾಣವಾಗಿ ನೋಡುತ್ತೇನೆ, ಒಂದು ಕನಸಿನೊಂದಿಗೆ ಪ್ರಾರಂಭವಾದ ಈ ಪ್ರಯಾಣ, ಇಂದು ಅಚಲ ಆತ್ಮವಿಶ್ವಾಸದ ಹಂತವನ್ನು ತಲುಪಿದೆ ಎಂದು ಹೇಳಿದರು.
ಭಾರತದಲ್ಲಿ ಕೃಷಿ ಉತ್ಪಾದನೆಯು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಮತ್ತು ಹಾಲು ಉತ್ಪಾದನೆಯಲ್ಲಿ ದೇಶವು ಮೊದಲ ಸ್ಥಾನದಲ್ಲಿದೆ. ಲಸಿಕೆಗಳ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಕಳೆದ 11 ವರ್ಷಗಳಲ್ಲಿ ಮೊಬೈಲ್ ಡೇಟಾದ ವಿಶ್ವದ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ ಎಂದು ಹೇಳಿದರು(ಏಜೆನ್ಸೀಸ್).