Nirmala Sitharaman  
ದೇಶ

India-US Trade Deal: ರಫ್ತು ವಲಯಕ್ಕೆ ಹೊಸ ಚೈತನ್ಯ: ಹಣಕಾಸು ಸಚಿವೆ Nirmala Sitharaman ಹರ್ಷ!

ನವದೆಹಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು (Tariff) ಶೇಕಡಾ 50 ರಿಂದ ಶೇ. 18ಕ್ಕೆ ಇಳಿಸಿರುವ ನಿರ್ಧಾರವು ಭಾರತದ ರಫ್ತು ವಲಯಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆಯನ್ನು "ಶುಭ ಸೂಚನೆ" (Good Augury) ಎಂದು ಬಣ್ಣಿಸಿದ್ದಾರೆ. ಈ ನಿರ್ಧಾರದಿಂದ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಅಬ್ಬರಿಸಲಿವೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ ಎಂದು ತಿಳಿಸಿದರು.
ಹಿಂದೆ ಶೇ. 50ರಷ್ಟು ಭಾರಿ ಸುಂಕವಿದ್ದಾಗ ಭಾರತದ ಉತ್ಪನ್ನಗಳ ಬೆಲೆ ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುವುದು ಕಷ್ಟವಾಗಿತ್ತು. ಈಗ ಸುಂಕ ಇಳಿಕೆಯಾಗಿರುವುದರಿಂದ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಅಂತಹ ದೇಶಗಳಿಗಿಂತ ಭಾರತದ ಉತ್ಪನ್ನಗಳು ಅಮೆರಿಕದಲ್ಲಿ ಅಗ್ಗವಾಗಲಿವೆ ಮತ್ತು ರಫ್ತುದಾರರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ತಿಳಿಸಿದ್ದಾರೆ.
ರಫ್ತುದಾರರು ಈಗಾಗಲೇ ಹೊಸ ಮಾರುಕಟ್ಟೆಗಳನ್ನು ಕಂಡುಕೊಂಡಿದ್ದಾರೆ. ಈಗ ಅಮೆರಿಕದ ಮಾರುಕಟ್ಟೆಯೂ ಸುಲಭವಾಗಿ ಲಭ್ಯವಿರುವುದರಿಂದ ರಫ್ತು ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.
'ಮೇಡ್ ಇನ್ ಇಂಡಿಯಾ'ಗೆ ಬಲ: ಈ ನಿರ್ಧಾರವು #MadeInIndia ಉತ್ಪನ್ನಗಳಿಗೆ ಸಂದ ಜಯವಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'X' ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಒಪ್ಪಂದದ ಮಹತ್ವ: ರಷ್ಯಾ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕದಿಂದ ಇಂಧನ ಖರೀದಿಸುವ ಮತ್ತು ಅಮೆರಿಕದ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಒಪ್ಪಂದದ ಭಾಗವಾಗಿ ಈ ಸುಂಕ ಕಡಿತ ನಡೆದಿರುವುದು ಭಾರತದ ಆರ್ಥಿಕತೆಗೆ ದೀರ್ಘಕಾಲದ ಲಾಭ ನೀಡಲಿದೆ ಎಂಬುದು ಸಚಿವರ ಅಭಿಪ್ರಾಯವಾಗಿದೆ,(ಏಜೆನ್ಸೀಸ್​)