ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ಕೃಷಿ-ಡೈರಿ ಸೇಫ್: ಸಂಸತ್ತಿನಲ್ಲಿ ಪಿಯೂಷ್ ಗೋಯಲ್ ಹೇಳಿದ್ದೇನು..? 
ದೇಶ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ಕೃಷಿ-ಡೈರಿ ಸೇಫ್: ಸಂಸತ್ತಿನಲ್ಲಿ ಪಿಯೂಷ್ ಗೋಯಲ್ ಹೇಳಿದ್ದೇನು..? Piyush Goyal

ಪ್ರಮುಖ ಮುಖ್ಯಾಂಶಗಳು

  • ಕೃಷಿ ಮತ್ತು ಡೈರಿ ಕ್ಷೇತ್ರಗಳಿಗೆ ಅಭಯ
  • 'ಮೇಕ್ ಇನ್ ಇಂಡಿಯಾ'ಗೆ ಹೊಸ ಬಲ
  • ರಫ್ತು ಸುಂಕದಲ್ಲಿ ಶೇ. 32ರಷ್ಟು ಇಳಿಕೆ!
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್(Piyush Goyal) ಬುಧವಾರ ಲೋಕಸಭೆಯಲ್ಲಿ ಅತ್ಯಂತ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೊಸ ಒಪ್ಪಂದವು ಭಾರತದ ಕೃಷಿ ಮತ್ತು ಡೈರಿ ಕ್ಷೇತ್ರಗಳನ್ನು ಸಂಪೂರ್ಣವಾಗಿ ರಕ್ಷಿಸುವ ಜೊತೆಗೆ, ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಇಳಿಕೆ ಮಾಡಲಿದೆ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಗೋಯಲ್​, ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಅಮೆರಿಕಕ್ಕೆ ರಫ್ತಾಗುವ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಈ ಹಿಂದೆ ಇದ್ದ ಶೇ. 50ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದು ಭಾರತೀಯ ರಫ್ತುದಾರರಿಗೆ ಸಿಕ್ಕ ದೊಡ್ಡ ಜಯವಾಗಿದೆ. ನಮ್ಮ ಪ್ರತಿಸ್ಪರ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಮೇಲಿನ ಸುಂಕವು ಅತ್ಯಂತ ಕಡಿಮೆ ಎಂದು ಸದನಕ್ಕೆ ತಿಳಿಸಿದರು.

ಕೃಷಿ ಮತ್ತು ಡೈರಿ ಕ್ಷೇತ್ರಗಳ ರಕ್ಷಣೆ

ಭಾರತದ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ದೇಶದ ಅತ್ಯಂತ ಸೂಕ್ಷ್ಮ ವಲಯಗಳಾದ ಕೃಷಿ ಮತ್ತು ಡೈರಿ (ಹೈನುಗಾರಿಕೆ) ಕ್ಷೇತ್ರಗಳನ್ನು ಈ ಒಪ್ಪಂದದಲ್ಲಿ ಸಂಪೂರ್ಣವಾಗಿ ರಕ್ಷಿಸಲಾಗಿದೆ. ಅಮೆರಿಕದ ಉತ್ಪನ್ನಗಳ ಅಬ್ಬರದಿಂದ ಈ ಕ್ಷೇತ್ರಗಳಿಗೆ ಯಾವುದೇ ಧಕ್ಕೆ ಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಗೋಯಲ್​ ಸ್ಪಷ್ಟಪಡಿಸಿದ್ದಾರೆ.

ಮೇಕ್ ಇನ್ ಇಂಡಿಯಾಗೆ ಉತ್ತೇಜನ

ಈ ವ್ಯಾಪಾರ ಒಪ್ಪಂದವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ. ಮೇಕ್ ಇನ್ ಇಂಡಿಯಾ ಮತ್ತು ಡಿಸೈನ್ ಇನ್ ಇಂಡಿಯಾ ಉಪಕ್ರಮಗಳಿಗೆ ಇದು ಜಾಗತಿಕ ಮಾರುಕಟ್ಟೆಯನ್ನು ಒದಗಿಸಲಿದೆ. ವಿಶೇಷವಾಗಿ ಶ್ರಮದಾಯಕ ವಲಯಗಳ ರಫ್ತಿಗೆ ಇದು ಭಾರಿ ಬೂಸ್ಟ್ ನೀಡಲಿದೆ ಎಂದು ವಾಣಿಜ್ಯ ಸಚಿವರು ಹೇಳಿದ್ದಾರೆ.

ಇಂಧನ ಮತ್ತು ತಂತ್ರಜ್ಞಾನ ಭದ್ರತೆ

ಭಾರತದ ಇಂಧನ ಭದ್ರತೆ ಸರ್ಕಾರದ ಆದ್ಯತೆಯಾಗಿದೆ. ವಾಯುಯಾನ ಮತ್ತು ಪರಮಾಣು ವಲಯಗಳಲ್ಲಿ ಅಮೆರಿಕ ದೊಡ್ಡ ಶಕ್ತಿಯಾಗಿದ್ದು, ಈ ಕ್ಷೇತ್ರಗಳಿಗೆ ಅಗತ್ಯವಿರುವ ಸರಕುಗಳ ಆಮದು ಈ ಒಪ್ಪಂದದಿಂದ ಸುಲಭವಾಗಲಿದೆ. ಅಲ್ಲದೆ, ಒಟ್ಟಾರೆಯಾಗಿ, ಈ ಒಪ್ಪಂದವು ಸಂಪೂರ್ಣವಾಗಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಎರಡೂ ದೇಶಗಳು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು.
ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಒಪ್ಪಂದದ ಅಧಿಕೃತ ಘೋಷಣೆ ಶೀಘ್ರದಲ್ಲೇ ನಡೆಯಲಿದೆ. ಇದು ಸಂಪೂರ್ಣವಾಗಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ ಎಂದು ಸಚಿವರು ಪುನರುಚ್ಚರಿಸಿದರು,(ಏಜೆನ್ಸೀಸ್).