Ditwah Cyclone | ದಿತ್ವಾ ಚಂಡಮಾರುತ 
ದೇಶ

ದಿತ್ವಾ ಅಬ್ಬರಕ್ಕೆ 46 ಬಲಿ; ಪ್ರಧಾನಿ ಮೋದಿ ಸಂತಾಪ, ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಬೆಂಬಲ ಘೋಷಣೆ | Ditwah Cyclone

Ditwah Cyclone: ಶ್ರೀಲಂಕಾವನ್ನು ವ್ಯಾಪಿಸುತ್ತಿರುವ ದಿತ್ವಾ ಚಂಡಮಾರುತದಿಂದಾದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ( ನವೆಂಬರ್​ 28) ಸಂತಾಪ ಸೂಚಿಸಿದ್ದು ಮತ್ತು ನೆರೆಯ ದ್ವೀಪ ರಾಷ್ಟ್ರಕ್ಕೆ 'ಆಪರೇಷನ್ ಸಾಗರ್ ಬಂಧು' ಅಡಿಯಲ್ಲಿ ಬೆಂಬಲ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಭಾರತವು ಈಗಾಗಲೇ ನೆರೆಯ ರಾಷ್ಟ್ರಕ್ಕೆ ಮೊದಲ ಹಂತದ ಪರಿಹಾರ ಸಾಮಗ್ರಿಗಳು ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಅಡಿಯಲ್ಲಿ ಸಹಾಯ ಹಸ್ತ ಚಾಚಿದ್ದು, ಪರಿಸ್ಥಿತಿ ಇನ್ನೂ ಹದಗೆಟ್ಟರೆ ಹೆಚ್ಚಿನ ನೆರವು ನೀಡಲು ದೇಶ ಸಿದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ದಿತ್ವಾ ಚಂಡಮಾರುತದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಎಲ್ಲಾ ಸಂತ್ರಸ್ತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮ ನೆರೆಯ ದೇಶದ ಸಂಕಷ್ಟಕ್ಕೆ ಭಾರತ ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ HADR ಬೆಂಬಲವನ್ನು ತುರ್ತಾಗಿ ರವಾನಿಸಿದೆ. ಪರಿಸ್ಥಿತಿ ಕೈ ಮೀರಿದರೆ ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
ನೆರೆಹೊರೆಯವರು ಮೊದಲು ಎಂಬ ಭಾರತದ ನೀತಿ ಮತ್ತು ಮಹಾಸಾಗರದ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದ ದೇಶವು, ಶ್ರೀಲಂಕಾದ ಸಂಕಷ್ಟದ ಸಮಯದಲ್ಲಿ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದಯಗಿರಿ ಮೂಲಕ ಶ್ರೀಲಂಕಾಕ್ಕೆ ಕಳುಹಿಸಲಾದ ಪರಿಹಾರ ನೆರವಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದಿತ್ವಾ ಅಬ್ಬರಕ್ಕೆ 46 ಬಲಿ
ಶ್ರೀಲಂಕಾದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 56 ಕ್ಕೆ ಏರಿದ್ದು, ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ, ಉಳಿದ ಜನರಿಗೆ ಶುಕ್ರವಾರ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, 21 ಜನರು ನಾಪತ್ತೆಯಾಗಿರುವ ಮಾಹಿತಿ ಇದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಕಳೆದ 72 ಗಂಟೆಗಳಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ. ಚಂಡಮಾರುತವು ಪೂರ್ವ ಶ್ರೀಲಂಕಾದ ತ್ರಿಕೋನಮಲಿ ಜಿಲ್ಲೆಯ ಬಳಿ ಇದ್ದು, ಉತ್ತರ ಮತ್ತು ವಾಯುವ್ಯ ಕಡೆಗೆ ಚಲಿಸುತ್ತಿತ್ತು ಎಂದು ಹವಾಮಾನ ಇಲಾಖೆ ಶುಕ್ರವಾರ ಬೆಳಿಗ್ಗೆ ತಿಳಿಸಿದೆ(ಏಜೆನ್ಸೀಸ್​).