Arunachal Pradesh (ಚಿತ್ರ X)
ನವದೆಹಲಿ: ಅರುಣಾಚಲ ಪ್ರದೇಶದ (Arunachal Pradesh) ವಿವಿಧ ಸ್ಥಳಗಳಿಗೆ ತನ್ನದೇ ಆದ ಹೆಸರುಗಳನ್ನು ನೀಡುವ ಮೂಲಕ ಪ್ರಾದೇಶಿಕ ಹಕ್ಕು ಪ್ರತಿಪಾದಿಸಲು ಯತ್ನಿಸುತ್ತಿರುವ ಚೀನಾದ ನಡೆಯನ್ನು ಭಾರತ ಸರ್ಕಾರವು ಅತ್ಯಂತ ಬಲವಾಗಿ ತಿರಸ್ಕರಿಸಿದೆ. ಚೀನಾದ ಈ ಪ್ರಯತ್ನಗಳು ಕೇವಲ "ಆಧಾರರಹಿತ ನಿರೂಪಣೆಗಳು" ಎಂದು ಕರೆದಿರುವ ಭಾರತ, ಇಂತಹ ಕೃತ್ಯಗಳು ಗಡಿಯ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದ ಭೂಪ್ರದೇಶದ ಭಾಗವಾಗಿರುವ ಸ್ಥಳಗಳಿಗೆ ಕಾಲ್ಪನಿಕ ಹೆಸರುಗಳನ್ನು ನೀಡುವ ಚೀನಾದ ದುರದ್ದೇಶಪೂರಿತ ಪ್ರಯತ್ನಗಳನ್ನು ಭಾರತ ಸರ್ಕಾರ ಗಂಭೀರವಾಗಿ ತಿರಸ್ಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಭಾನುವಾರ ಹೇಳಿದ್ದಾರೆ.
ಸುಳ್ಳು ಹೇಳಿಕೆಗಳನ್ನು ನೀಡುವ ಮತ್ತು ಆಧಾರರಹಿತ ಕಥೆಗಳನ್ನು ಹೆಣೆಯುವ ಚೀನಾದ ಇಂತಹ ನಡೆಗಳು ವಾಸಸ್ತವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದಾಗ್ಯೂ, ಅರುಣಾಚಲ ಪ್ರದೇಶ ಸೇರಿದಂತೆ ಈ ಎಲ್ಲಾ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬದಲಾಯಿಸಲಾಗದ ಭಾಗವಾಗಿವೆ. ಇವು ಯಾವಾಗಲೂ ಹಾಗೇ ಉಳಿಯುತ್ತವೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಭಾರತ-ಚೀನಾ ಸಂಬಂಧಗಳ ಮೇಲೆ ಪರಿಣಾಮ
ಕಳೆದ ಒಂದೂವರೆ ವರ್ಷಗಳಿಂದ ಭಾರತ ಮತ್ತು ಚೀನಾ ನಡುವಿನ ಹಳಸಿದ ಸಂಬಂಧಗಳನ್ನು ಸುಧಾರಿಸಲು ಉಭಯ ದೇಶಗಳು ನಡೆಸುತ್ತಿದ್ದ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಪ್ರಯತ್ನಗಳಿಗೆ ಚೀನಾದ ಇತ್ತೀಚಿನ ನಡೆಗಳು ಭಾರಿ ಹಿನ್ನಡೆಯನ್ನುಂಟುಮಾಡಿವೆ. ಆದಾಗ್ಯೂ, ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಈ ಹಠಮಾರಿ ಧೋರಣೆಯು ಪರಸ್ಪರ ನಂಬಿಕೆಯನ್ನು ಹಾಳುಮಾಡುತ್ತಿವೆ ಎಂದು ವಿದೇಶಾಂಗ ಸಚಿವಾಲಯ ಗಮನಸೆಳೆದಿದೆ.
ಚೀನಾದ ನಿರಂತರ ಪ್ರಚೋದನೆ
ಚೀನಾ ಅರುಣಾಚಲ ಪ್ರದೇಶವನ್ನು ಜಾಂಗ್ನಾನ್ ಎಂದು ಕರೆಯುತ್ತದೆ. ಈ ಪ್ರದೇಶ ದಕ್ಷಿಣ ಟಿಬೆಟ್ನ ಭಾಗವಾಗಿದೆ ಎಂದು ಚೀನಾ ಹೇಳಿಕೊಳ್ಳುತ್ತದೆ. ಅಂದಹಾಗೇ, 2017 ರಲ್ಲಿ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮೊದಲು ತಮ್ಮದೇ ಆದ ಹೆಸರುಗಳೊಂದಿಗೆ 6 ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 2021ರಲ್ಲಿ 15 ಸ್ಥಳಗಳಿಗೆ, 2023 ರಲ್ಲಿ 11 ಸ್ಥಳಗಳಿಗೆ ಅಂತಹ ಹೆಸರುಗಳನ್ನು ನೀಡಲಾಯಿತು.
2020 ರಲ್ಲಿ ಪೂರ್ವ ಲಡಾಖ್ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟವು. ಅಂದಿನಿಂದ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಮಾತುಕತೆಗಳ ಮೂಲಕ ಎರಡೂ ದೇಶಗಳ ಸಂಬಂಧವನ್ನು ಸುಧಾರಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಚೀನಾದ ಪ್ರಚೋದನಕಾರಿ ನಡೆಯನ್ನು ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿದೆ (ಏಜೆನ್ಸೀಸ್).