ದೇಶ

25% ಸುಂಕ ವಿಧಿಸುವ ಅಮೆರಿಕದ ನೋಟಿಸ್‌ಗೆ ಭಾರತದ ಖಡಕ್ ಪ್ರತಿಕ್ರಿಯೆ: ಹೆಚ್ಚುವರಿ ಉತ್ಪಾದನೆ ಆರೋಪ ತಳ್ಳಿಹಾಕಿದ ಕೇಂದ್ರ! | US Tariffs on India

ನವದೆಹಲಿ: ಭಾರತದ ಕೈಗಾರಿಕಾ ಮತ್ತು ವ್ಯಾಪಾರ ನೀತಿಗಳು ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನಾ ಸಾಮರ್ಥ್ಯಕ್ಕೆ ಕಾರಣವಾಗುತ್ತಿವೆ ಎಂಬ ಅಮೆರಿಕದ ಆರೋಪಗಳನ್ನು ಭಾರತ ಬುಧವಾರ ತೀವ್ರವಾಗಿ ತಿರಸ್ಕರಿಸಿದೆ. ದೇಶದ ಯಾವುದೇ ವಲಯದಲ್ಲಿ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸ್ಪಷ್ಟಪಡಿಸಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ಭಾರತ ಸೇರಿದಂತೆ ಒಟ್ಟು 14 ಆರ್ಥಿಕತೆಗಳಲ್ಲಿನ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ಕುರಿತು ಅಮೆರಿಕದ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301 ಅಡಿಯಲ್ಲಿ ತನಿಖಾ ವರದಿಯನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೇ, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡಾ 25ರವರೆಗೆ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕ ಮುಂದಿಟ್ಟಿದೆ. ಒಂದು ವೇಳೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡರೆ, ಈ ಸುಂಕದ ದರವನ್ನು ಶೇಕಡಾ 17ಕ್ಕೆ ಮಿತಿಗೊಳಿಸುವ ಅವಕಾಶವನ್ನೂ ಅಮೆರಿಕ ಪ್ರಸ್ತಾಪಿಸಿದೆ.

ಉಕ್ಕು, ಸೌರಶಕ್ತಿ, ಆರೋಗ್ಯ (ಔಷಧ ಮತ್ತು ವೈದ್ಯಕೀಯ ಉಪಕರಣಗಳು) ಹಾಗೂ ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ಭಾರತದ ನೀತಿಗಳು, ಸಬ್ಸಿಡಿಗಳು ಮತ್ತು ಕಾರ್ಮಿಕ ಪದ್ಧತಿಗಳು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಟ್ರಂಪ್ ಸರ್ಕಾರ ವಾದಿಸಿದೆ.

ಭಾರತದ ಖಡಕ್ ಪ್ರತಿಕ್ರಿಯೆ

ಅಮೆರಿಕದ ಈ ಪ್ರಕಟಣೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ತನಿಖೆಯ ಉದ್ದಕ್ಕೂ ಭಾರತ ಸಹಕರಿಸಿದೆ ಎಂದಿದೆ. ದೇಶದ ಯಾವುದೇ ವಲಯದಲ್ಲೂ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವಿಲ್ಲ ಎಂಬ ನಿಲುವಿಗೆ ವಾಣಿಜ್ಯ ಇಲಾಖೆ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅಲ್ಲದೆ, ಏಕಪಕ್ಷೀಯ ಸುಂಕದ ಬೆದರಿಕೆಗಳ ಬದಲಾಗಿ, ಪ್ರಸ್ತುತ ನಡೆಯುತ್ತಿರುವ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳ ಚೌಕಟ್ಟಿನಲ್ಲೇ ವ್ಯಾಪಾರ ಸಂಬಂಧಿತ ಕಳವಳಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಭಾರತ ಪ್ರತಿಪಾದಿಸಿದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸಲು ಅಮೆರಿಕದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ಏನಿದು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಮತ್ತು 'ಸೆಕ್ಷನ್ 301'?

ಒಂದು ದೇಶವು ತನ್ನ ದೇಶೀಯ ಮಾರುಕಟ್ಟೆ ಅಥವಾ ಜಾಗತಿಕ ಬೇಡಿಕೆಯನ್ನು ಮೀರಿ ಸರಕುಗಳನ್ನು ಉತ್ಪಾದಿಸಿದಾಗ ಅದನ್ನು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಎನ್ನಲಾಗುತ್ತದೆ. ಇದರಿಂದ ಕಾರ್ಖಾನೆಗಳಲ್ಲಿ ಉತ್ಪನ್ನಗಳು ಉಳಿದುಕೊಳ್ಳುತ್ತವೆ ಮತ್ತು ಅವುಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಇದು ಇತರ ದೇಶಗಳ ಸ್ಥಳೀಯ ಉತ್ಪಾದಕರು, ಉದ್ಯೋಗಗಳು ಮತ್ತು ಹೂಡಿಕೆಗೆ ಹೊಡೆತ ನೀಡುತ್ತದೆ ಎಂಬುದು ಅಮೆರಿಕದ ಆತಂಕವಾಗಿದೆ.

ಇನ್ನು, ಅಮೆರಿಕದ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301, ವಿದೇಶಗಳ ವ್ಯಾಪಾರ ನೀತಿಗಳು ಅನ್ಯಾಯಯುತವಾಗಿವೆ ಅಥವಾ ಅಮೆರಿಕದ ವಾಣಿಜ್ಯಕ್ಕೆ ಹೊರೆಯಾಗಿವೆ ಎಂದು ಕಂಡುಬಂದಲ್ಲಿ ತನಿಖೆ ನಡೆಸಲು ಮತ್ತು ಪ್ರತೀಕಾರದ ಕ್ರಮವಾಗಿ ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಈ ಪ್ರಸ್ತಾವಿತ ಸುಂಕಗಳ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಮತ್ತು ವಿಚಾರಣೆಗಳು 2027ರ ಜನವರಿ 25ರಿಂದ ಆರಂಭವಾಗಲಿವೆ(ಏಜೆನ್ಸೀಸ್​).