POKಯಲ್ಲಿ ಪಾಕ್ ಪಡೆಗಳಿಂದ ಭೀಕರ ನರಮೇಧ: ನೆರೆರಾಷ್ಟ್ರದ ದುಷ್ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಶಿಕ್ಷೆಯಾಗಲಿ ಎಂದು ಭಾರತ ಕಿಡಿ!
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಸ್ಥಳೀಯ ನಾಗರಿಕರ ಮೇಲೆ ಪಾಕ್ ಸೇನೆ ಮತ್ತು ಪೊಲೀಸರು ನಡೆಸುತ್ತಿರುವ ಭೀಕರ ದೌರ್ಜನ್ಯ ಹಾಗೂ ಮಾರಣಹೋಮವನ್ನು ಭಾರತ(India on POK Massacre) ತೀವ್ರವಾಗಿ ಖಂಡಿಸಿದೆ. ಪಿಒಕೆಯ ರಾವಲಾಕೋಟ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ಪಾಕ್ ಪಡೆಗಳು ಕನಿಷ್ಠ 27 ಕ್ಕೂ ಹೆಚ್ಚು ಮುಗ್ಧ ಕಾಶ್ಮೀರಿಗಳನ್ನು ಗುಂಡಿಟ್ಟು ಕೊಂದಿರುವುದನ್ನು ಉಲ್ಲೇಖಿಸಿರುವ ಭಾರತ, ಈ ಪಾಪಕೃತ್ಯಗಳಿಗಾಗಿ ಅಂತಾರಾಷ್ಟ್ರೀಯ ಸಮುದಾಯವು ಪಾಕ್ನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದೆ.
ತನ್ನದೇ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಈ ಘೋರ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕ್ ಭಾರತದ ವಿರುದ್ಧ ಸುಳ್ಳು ಸುದ್ದಿಗಳು ಹಾಗೂ ನಕಲಿ ವಿಡಿಯೋಗಳನ್ನು ಹರಡುತ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಮಂಗಳವಾರ ಹರಿಹಾಯ್ದಿದೆ.
ಜಗತ್ತಿನ ಕಣ್ಣಿಗೆ ಮಣ್ಣೆರಚಲು ಪಾಕ್ ಸಂಚು: ಭಾರತದ ಕಿಡಿ
ಈ ಬಗ್ಗೆ ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಪೊಲೀಸರು ನಡೆಸಿರುವ ಕ್ರೂರ ದೌರ್ಜನ್ಯದ ವರದಿಗಳು ನಮಗೆ ತಲುಪಿವೆ. ಈ ಹಿಂಸಾಚಾರದಲ್ಲಿ ಹಲವು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ತನ್ನದೇ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ವಿಶ್ವದ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನವು ನಿರಂತರವಾಗಿ ನಕಲಿ ವಿಡಿಯೋ ಹಾಗೂ ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದೆ. ಇದು ಅದರ ಹತಾಶೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ತಕ್ಷಣವೇ ಪಿಒಕೆಯಲ್ಲಿ ಹತ್ತಿಕ್ಕುತ್ತಿರುವ ನಾಗರಿಕರ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅಲ್ಲಿನ ರಕ್ತಪಾತವನ್ನು ನಿಲ್ಲಿಸಬೇಕು. ಪಾಕಿಸ್ತಾನದ ಈ ದುಷ್ಕೃತ್ಯಗಳಿಗೆ ಜಾಗತಿಕ ವೇದಿಕೆಯಲ್ಲಿ ಸೂಕ್ತ ಶಿಕ್ಷೆಯಾಗುವ ಭರವಸೆ ಭಾರತಕ್ಕಿದೆ ಎಂದು ಜೈಸ್ವಾಲ್ ಆಶಯ ವ್ಯಕ್ತಪಡಿಸಿದ್ದಾರೆ.
ರಾವಲಾಕೋಟ್‌ನಲ್ಲಿ ನಡೆದಿದ್ದೇನು?
ಕಳೆದ ಕೆಲವು ದಿನಗಳಿಂದ ಪಿಒಕೆಯಾದ್ಯಂತ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಮೂಲಭೂತ ಸೌಕರ್ಯ, ಅತಿಯಾದ ತೆರಿಗೆ ಹಾಗೂ ಪಾಕ್ ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ರಾವಲಾಕೋಟ್ ಎಂಬಲ್ಲಿ ಪ್ರತಿಭಟನೆ ತೀವ್ರಗೊಂಡಾಗ, ಪಾಕಿಸ್ತಾನಿ ಪಡೆಗಳು ನಾಗರಿಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದವು. ಪಾಕಿಸ್ತಾನ ಸರ್ಕಾರದ ಅಧಿಕೃತ ವರದಿಗಳ ಪ್ರಕಾರ 27 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ ಬಲಿಯಾದವರ ಸಂಖ್ಯೆ ನೂರಕ್ಕೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ತನಿಖೆ ತಡೆಯಲು ಪಾಕ್ ಸರ್ಕಾರ ಇಡೀ ಪ್ರದೇಶದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಪಾಕಿಸ್ತಾನ ಸೇನೆಯು ಈ ಭೀಕರ ದಮನ ನೀತಿಯನ್ನು ಸಮರ್ಥಿಸಿಕೊಂಡಿದ್ದು, ಪ್ರತಿಭಟನಾಕಾರರು ಕಿರಿದಾದ ಗಲ್ಲಿಗಳಿಂದ ಪೆಟ್ರೋಲ್ ಬಾಂಬ್ ಹಾಗೂ ಬಂದೂಕುಗಳ ಮೂಲಕ ಗೆರಿಲ್ಲಾ ಮಾದರಿಯಲ್ಲಿ ದಾಳಿ ನಡೆಸಿದ್ದರಿಂದ ತಮಗೆ ಬೇರೆ ದಾರಿಯಿರಲಿಲ್ಲ ಎಂದು ಹೇಳಿಕೊಂಡಿದೆ. ಆದರೆ, ಪ್ರಸ್ತುತ ಈ ಜನಾಕ್ರೋಶವು ಮೀರ್‌ಪುರ, ಮುಜಾಫರಾಬಾದ್, ಗಿಲ್ಗಿಟ್-ಬಾಲ್ಟಿಸ್ತಾನ್, ದಾದಿಯಾಲ್ ಮತ್ತು ತಟ್ಟಾಪಾನಿ ವಲಯಗಳಿಗೂ ಕಾಳ್ಗಿಚ್ಚಿನಂತೆ ಹರಡಿದೆ.
ಬ್ರಿಟನ್ ಸಂಸತ್ತಿನವರೆಗೂ ತಲುಪಿದ ಕಾಶ್ಮೀರಿಗಳ ಆಕ್ರೋಶ
ಪಾಕಿಸ್ತಾನ ಸರ್ಕಾರದ ಈ ಅಮಾನವೀಯ ಧೋರಣೆಯ ವಿರುದ್ಧ ಜಾಗತಿಕ ಮಟ್ಟದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಸಮುದಾಯದವರು ಅಲ್ಲಿನ ಪಾಕಿಸ್ತಾನಿ ರಾಯಭಾರ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬ್ರಿಟನ್‌ನ ಸುಮಾರು 30 ಕ್ಕೂ ಹೆಚ್ಚು ಸಂಸದರು ಈ ರಕ್ತಪಾತದ ಕುರಿತು ಬ್ರಿಟಿಷ್ ಸರ್ಕಾರಕ್ಕೆ ತುರ್ತು ಪತ್ರ ಬರೆದಿದ್ದಾರೆ. ಬ್ರಿಟನ್ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿ, ಪಿಒಕೆಯಲ್ಲಿ ಶಾಂತಿ ಸ್ಥಾಪಿಸಲು ಮುಂದಾಗಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.
ಸದ್ಯ ಪಿಒಕೆ ಪ್ರಾಂತ್ಯವು ಜ್ವಾಲಾಮುಖಿಯಂತೆ ಕುದಿಯುತ್ತಿದ್ದು, ಪಾಕ್ ಸರ್ಕಾರದ ಎಚ್ಚರಿಕೆಯನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಇಡೀ ಪ್ರದೇಶದಾದ್ಯಂತ ಲಾಂಗ್ ಮಾರ್ಚ್ ನಡೆಸಲು ಸಿದ್ಧತೆ ನಡೆಸಿದ್ದಾರೆ. ಪಾಕ್ ಸೇನೆಯು ಇದನ್ನು ತಡೆಯಲು ಸಶಸ್ತ್ರ ಪಡೆಗಳನ್ನು ನಿಯೋಜಿಸಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಮತ್ತಷ್ಟು ರಕ್ತಪಾತದ ಭೀತಿ ಎದುರಾಗಿದೆ,(ಏಜೆನ್ಸೀಸ್).